
ಶ್ರೀರಂಗಪಟ್ಟಣ: ಪಟ್ಟಣದ ಕೆನರಾ ಬ್ಯಾಂಕ್ ಶಾಖೆಯ ಪಕ್ಕದಲ್ಲಿ, ಎಲ್‌ಐಸಿ ಶಾಖೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ತಳಪಾಯಕ್ಕಾಗಿ ಭೂಮಿ ಅಗೆಯುವಾಗ ಭಾನುವಾರ 7 ಕಲ್ಲಿನ ಗುಂಡುಗಳು ಪತ್ತೆಯಾಗಿದ್ದ ಸ್ಥಳದಲ್ಲಿ ಸೋಮವಾರ ಮತ್ತೆ ಎರಡು ಕಲ್ಲಿನ ಗುಂಡುಗಳು ಸಿಕ್ಕಿವೆ.
ಕೆನರಾ ಬ್ಯಾಂಕ್ ಶಾಖೆ ಕಟ್ಟಡಕ್ಕೆ ಐದಾರು ಅಡಿ ದೂರದಲ್ಲಿ ಈ ಗುಂಡುಗಳು ಪತ್ತೆಯಾಗಿವೆ. ನೆಲ ಮಟ್ಟದಿಂದ 5 ಅಡಿಗಳಷ್ಟು ಆಳದಲ್ಲಿ ಈ ಗುಂಡುಗಳು ಕಂಡು ಬಂದಿವೆ. ಗುಂಡುಗಳು ಸಿಕ್ಕಿರುವ ಸ್ಥಳದಲ್ಲಿ ಸುರಕಿ ಗಾರೆ ಮತ್ತು ಮಣ್ಣಿನ ಸುಟ್ಟ ಇಟ್ಟಿಗೆಗಳ ಗೋಡೆಯಂತಹ ರಚನೆ ಕಂಡು ಬಂದಿದೆ. ಒಂದೆಡೆ ಕಾಡುಗಲ್ಲಿನ ವರಸೆಯೂ ಗೋಚರಿಸಿದೆ. ಕಟ್ಟಡ ನಿರ್ಮಾಣಕ್ಕೆ 15ಕ್ಕೂ ಹೆಚ್ಚು ಗುಂಡಿಗಳನ್ನು ತೆಗೆದಿದ್ದು, ಈ ಪೈಕಿ ಮೂರು ಗುಂಡಿಗಳಲ್ಲಿ ಪ್ರಾಚೀನ ಕಟ್ಟಡದ ಕುರುಹುಗಳು ಕಂಡು ಬಂದಿವೆ.
ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕ್ಯೂರೇಟರ್ ಸುನಿಲ್, ಸಹಾಯಕ ಎಂಜಿನಿಯರ್ ಕೆ. ರವಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಲ್ಲಿನ ಗುಂಡುಗಳು ಮತ್ತು ಕಟ್ಟಡದ ಅವಶೇಷಗಳ ಫೋಟೊ ತೆಗೆದುಕೊಂಡರು.
‘ಪ್ರಾಚೀನ ಅವಶೇಷಗಳು ಮತ್ತೆ ಸಿಕ್ಕಿದರೆ ತಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಬೇಕು. ಐತಿಹಾಸಿಕ ಕುರುಹುಗಳನ್ನು ನಾಶಪಡಿಸಬಾರದು’ ಎಂದು ಎಲ್‌ಐಸಿ ಅಧಿಕಾರಿಗಳಿಗೆ ಸೂಚಿಸಿದರು.
‘ಎಲ್‌ಐಸಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ ಗುಂಡಿ ತೆಗೆಯುವ ಸಂದರ್ಭದಲ್ಲಿ, ಎರಡು ದಿನಗಳಲ್ಲಿ ಸುಮಾರು 30ರಿಮದ 40 ಕೆ.ಜಿ ತೂಕದ ಒಂದೇ ಅಳತೆಯ 10 ಕಲ್ಲಿನ ಗುಂಡುಗಳು ಸಿಕ್ಕಿವೆ. ಅವುಗಳನ್ನು ಪಟ್ಟಣದ ಶ್ರೀ ಚಾಮರಾಜೇಂದ್ರ ಸ್ಮಾರಕ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗುವುದು. ಪಟ್ಟಣದಲ್ಲಿ ಭೂಮಿ ಅಗೆಯುವ ಮಾಹಿತಿ ಸಿಕ್ಕಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡುವಂತೆ ಸ್ಥಳೀಯ ಸಿಬ್ಬಂದಿಗೆ ಸೂಚಿಸಲಾಗಿದೆ’ ಎಂದು ಸುನಿಲ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.