ADVERTISEMENT

ಇಷ್ಟಾರ್ಥ ಪೂರೈಸುವ ಉದ್ಭವ ಆಂಜನೇಯಸ್ವಾಮಿ

ಕಂಬದಹಳ್ಳಿಯ ರಮಣೀಯ ಪ್ರಕೃತಿ ಸಿರಿಯಲ್ಲಿ ಬೆಟ್ಟದ ಮೇಲಿನ ದೇವಾಲಯ

ಬಿ.ಸಿ.ಮೋಹನ್ ಕುಮಾರ್
Published 6 ಡಿಸೆಂಬರ್ 2018, 17:29 IST
Last Updated 6 ಡಿಸೆಂಬರ್ 2018, 17:29 IST
ಉದ್ಭವ ಆಂಜನೇಯಸ್ವಾಮಿ ಮೂರ್ತಿ
ಉದ್ಭವ ಆಂಜನೇಯಸ್ವಾಮಿ ಮೂರ್ತಿ   

ನಾಗಮಂಗಲ: ಸಂತಾನಭಾಗ್ಯ, ಮದುವೆ ಭಾಗ್ಯ, ಜಾನುವಾರುಗಳ ರೋಗರುಜಿನಗಳ ಪರಿಹಾರ ಸೇರಿದಂತೆ ಭಕ್ತರ ಹಲವು ಬೇಡಿಕೆಗಳನ್ನು ಪೂರೈಸುವ ದೇವರು ಕಂಬದಹಳ್ಳಿಯ ಆಂಜನೇಯ ಸ್ವಾಮಿ.

ಈ ದೇವಸ್ಥಾನ ಇರುವುದು ತಾಲ್ಲೂಕಿನ ಬಿಂಡಿಗನವಿಲೆ ಹೋಬಳಿಯ ಕಂಬದಹಳ್ಳಿಯಲ್ಲಿ. ತಾಲ್ಲೂಕು ಕೇಂದ್ರದಿಂದ ಸುಮಾರು 20 ಕಿ.ಮೀ ದೂರದಲ್ಲಿ, ಶ್ರವಣಬೆಳಗೊಳ-ನಾಗಮಂಗಲ ಮುಖ್ಯರಸ್ತೆಯಲ್ಲಿ. 900 ವರ್ಷಗಳ ಹಿಂದೆ ಇಲ್ಲಿ ಋಷಿಮುನಿಗಳು ವಾಸವಾಗಿದ್ದರು ಎಂಬುದು ಐತಿಹ್ಯ. ಅವರ ತಪಸ್ಸಿನ ಫಲವಾಗಿ ಆಂಜನೇಯ ಬೆಟ್ಟದ ಮೇಲಿರುವ ಬೃಹತ್ ಹೆಬ್ಬಂಡೆಯ ಮೇಲೆ ಉದ್ಭವಮೂರ್ತಿಯಾಗಿ ಒಡಮೂಡಿದ್ದಾನೆ. ಹನುಮಂತನ ಬೆವರಹನಿ ಬಿದ್ದ ಸ್ಥಳದಲ್ಲಿ ಮೂರ್ತಿ ಉದ್ಭವವಾಯಿತು ಎನ್ನುವುದು ಜನರ ನಂಬಿಕೆ.

ಯಾವುದೇ ಆಧಾರವಿಲ್ಲದೇ ನಿಂತಿರುವ ಬಂಡೆಯಲ್ಲಿ ಬಹಳ ಕಿರುದಾಗಿ ಅಸ್ಪಷ್ಟವಾಗಿ ಮೂಡಿದ್ದ ಆಂಜನೇಯ ದಿನಗಳೆದಂತೆ ಸ್ಪಷ್ಟವಾಗಿ ಕಾಣುತ್ತಿದೆ. ಇಲ್ಲಿಗೆ ಈ ಹಿಂದೆ ಅಂಬೆಗಾಲಿಕ್ಕುತ್ತಾ ಹೋಗಬೇಕಿತ್ತು. ಆದರೀಗ ಬಂಡೆ ಬೆಳೆಯುತ್ತ ಇರುವುದರಿಂದ ನಡೆದೇ ಗರ್ಭಗುಡಿಗೆ ಪ್ರವೇಶ ಪಡೆಯಬಹುದಾಗಿದೆ. ಈ ಮೊದಲು ಬಹಳ ಕಿರಿದಾಗಿದ್ದ ಗರ್ಭಗುಡಿ ಬಾಗಿಲನ್ನು ದೇವರ ಅಪ್ಪಣೆ ಕೇಳಿ ಬದಲಿಸಿ ದೊಡ್ಡ ಬಾಗಿಲನ್ನು ಅಳವಡಿಸಲಾಗಿದೆ. ಬೆಟ್ಟದ ಬುಡದಿಂದ 300 ಮೆಟ್ಟಿಲುಗಳನ್ನು ಹತ್ತಿ ದೇವಾಲಯ ಪ್ರವೇಶಿಸಬಹುದು. ಇದಲ್ಲದೇ ಈಚಿನ ಕೆಲ ವರ್ಷಗಳಲ್ಲಿ ಮುಖ್ಯರಸ್ತೆಯಿಂದ ಬೆಟ್ಟದ ಸನಿಹದವರೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದು ಅಲ್ಲಿಂದ ಕೆಲವೇ ಮೆಟ್ಟಿಲುಗಳನ್ನು ಹತ್ತಿ ದೇವಸ್ಥಾನವನ್ನು ನೋಡಬಹುದು.

ADVERTISEMENT

ಎರಡು ವರ್ಷಗಳ ಹಿಂದೆ ಬಿಂಡಿಗನವಿಲೆಯ ವೈನತೇಯ ಭಕ್ತ ಮಂಡಳಿಯ ಮೇಲ್ವಿಚಾರಣೆಯಲ್ಲಿ ಕಬ್ಬಿಣದಿಂದ ಕೂಡಿದ ಅತ್ಯಂತ ಸುರಕ್ಷತೆಯುಳ್ಳ ಪ್ರದಕ್ಷಿಣಾ ಪಥವನ್ನು ಸುಮಾರು ₹ 8 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಬೃಹತ್ ಕಬ್ಬಿಣದ ಕಂಬಗಳ ಮೇಲೆ ನಿಂತಿದ್ದು ನೆಲದಿಂದ 30 ಅಡಿಗಳಷ್ಟು ಎತ್ತರದಲ್ಲಿದೆ. ಇದರಿಂದ 25 ವರ್ಷಗಳಿಂದ ನಡೆಯುತ್ತಿದ್ದ ಲಕ್ಷಾರ್ಚನೆಗೆ ದೇವಸ್ಥಾನದ ಸುತ್ತ ನೂರಾರು ಕಳಸಗಳನ್ನು ಹೊತ್ತು ಪ್ರದಕ್ಷಿಣೆ ಹಾಕುವ ಭಕ್ತರಿಗೆ ಅನುಕೂಲವಾಗಿದೆ.

ಮದುವೆಯಾಗದವರು 3 ದಿನಗಳ ಕಾಲ ದೇವರಿಗೆ ವೀಳ್ಯೆದೆಲೆ ಹಾರವನ್ನು ಸಮರ್ಪಿಸುತ್ತಾರೆ. ಇದನ್ನು ಮುತೈದೆಯರಿಗೆ ನೀಡಿ ಪೂಜೆ ಸಲ್ಲಿಸುತ್ತಾರೆ. ಮದುವೆಯಾದ ನಂತರ ಇಲ್ಲಿಯೇ ಬಂದು ಹರಕೆ ತೀರಿಸಿ ಬೀಗರ ಔತಣವನ್ನು ಮಾಡುತ್ತಾರೆ. ಹೀಗೆ ಒಂದಿಲ್ಲೊಂದು ಭಕ್ತರ ಬೇಡಿಕೆಯನ್ನು ಪೂರೈಸುವ ಸ್ವಾಮಿಯಾಗಿ ಆಂಜನೇಯ ಇಲ್ಲಿ ನೆಲೆ ನಿಂತಿದ್ದಾನೆ.

ಹಿಂದೊಮ್ಮೆ ಪಕ್ಕದ ಹಳ್ಳಿಯಲ್ಲಿ ಜಾನುವಾರುಗಳು ಕಳುವಾದಾಗ ರೈತನೊಬ್ಬ ದೇವರಲ್ಲಿ ಹರಕೆ ಹೊತ್ತು ನನ್ನ ಜಾನುವಾರುಗಳು ದೊರೆತಲ್ಲಿ ದೇವರಿಗೆ ಮಾಂಸದ ನೈವೇದ್ಯ ಮಾಡುತ್ತೇನೆ ಎಂದು ಬೇಡಿಕೊಂಡಿದ್ದ. ಅಂದು ಸಂಜೆಯೇ ಕಳುವಾಗಿದ್ದ ರಾಸುಗಳು ಮನೆಗೆ ಬಂದವು. ಹೊತ್ತ ಹರಕೆಯಂತೆ ಬೆಟ್ಟದ ಬುಡದಲ್ಲಿರುವ ಭಂಟರಿಗೆ ಮಾಂಸಾಹಾರ ಮಾಡಿ ನೈವೇದ್ಯ ಅರ್ಪಿಸಿದ. ಅಂದು ಆರಂಭವಾದ ಮಾಂಸದ ಅಡುಗೆ ನೈವೇದ್ಯ ಇಂದು ದಿನನಿತ್ಯ ಎಂಬಂತಾಗಿದೆ.

ಗರ್ಭಗುಡಿಯ ಹೊರಭಾಗದಲ್ಲಿ ಯೋಗಾನರಸಿಂಹಸ್ವಾಮಿ ಮೂರ್ತಿಯು ಉದ್ಭವಗೊಂಡಿದೆ. ದೀಪಾವಳಿಯ ಬಲಿಪಾಡ್ಯಮಿಯಂದು ಊರಿನಲ್ಲಿ 5 ದಿನಗಳ ಕಾಲ ಹಬ್ಬ ಆಚರಣೆಯಾದರೆ, ಇಲ್ಲಿ 3 ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಅಂದು ಭಾಗವಂತಿಕೆ ಮೇಳ ನಡೆಯುತ್ತದೆ. ಅಮಾವಾಸ್ಯೆಗೆ 3 ದಿನಗಳ ಮೊದಲು ವಿಶೇಷ ಪೂಜೆ ನಡೆಯಲಿದ್ದು ಅಮಾವಾಸ್ಯೆಯಂದು ಅನ್ನಸಂತರ್ಪಣೆ ಇರಲಿದೆ.

ಸಂಜೀವಿನಿ ಟ್ರಸ್ಟ್ ಮತ್ತು ದಾನಿಗಳ ಸಹಾಯದಿಂದ ಬೆಟ್ಟದ ಕೆಳಗೆ ಕಲ್ಯಾಣ ಮಂಟಪ ಸ್ಥಾಪನೆಯಾಗಿದೆ. ಇದಲ್ಲದೇ ಟ್ರಸ್ಟ್ ವತಿಯಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಈ ದೇವರಿಗೆ ಸುತ್ತಮುತ್ತಲ ಹಳ್ಳಿಗಳಲ್ಲದೇ ದೇಶ-ವಿದೇಶಗಳಲ್ಲಿ ಒಕ್ಕಲುಗಳು ಸೇರಿದಂತೆ ಭಕ್ತರಿದ್ದಾರೆ. ಇಲ್ಲಿ ವೈಷ್ಣವರು ಅನಾದಿ ಕಾಲದಿಂದಲೂ ಪೂಜೆ ಸಲ್ಲಿಸುತ್ತ ಬಂದಿದ್ದಾರೆ.

ಬೆಟ್ಟದ ಮೇಲಿರುವ ಬೃಹತ್ ಹಾಸು ಬಂಡೆಯಲ್ಲಿ ಗರುಡಗಂಭ ನಿರ್ಮಾಣಗೊಂಡಿದ್ದು ಅದರ ಸುತ್ತ ನಿಂತು ಜನರು ಪ್ರಕೃತಿ ಸೌಂದರ್ಯ ಸವಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.