ADVERTISEMENT

ಮಹಿಳೆ ಕೊಲೆ: ಶವ ಸುಟ್ಟು ಹಾಕಿದ್ದ ಆರೋಪಿ ಬಂಧನ

ಪೊಲೀಸರೆದುರು ಒಪ್ಪಿಕೊಂಡ ಸುರೇಶ್

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:40 IST
Last Updated 25 ಸೆಪ್ಟೆಂಬರ್ 2020, 2:40 IST
ಸುರೇಶ
ಸುರೇಶ   

ಬೆಳಕವಾಡಿ: ಹಣಕಾಸಿನ ವಿಚಾರ ಹಾಗೂ ಹಳೆದ್ವೇಷದಿಂದ ಮಹಿಳೆಯೊಬ್ಬರನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಳವಳ್ಳಿ ತಾಲ್ಲೂಕಿನ ಚಿಕ್ಕಬಾಗಿಲು ಗ್ರಾಮದ ಜಯಮ್ಮ (58) ಎಂಬುವವರನ್ನು ಕೊಲೆ ಮಾಡಿದ್ದ ಅದೇ ಗ್ರಾಮದ ಸುರೇಶ (45) ಬಂಧಿತ ಆರೋಪಿ.

ಜಯಮ್ಮ ಗ್ರಾಮದಲ್ಲಿ ಸಣ್ಣಪುಟ್ಟ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ ಲಾಕ್‌ಡೌನ್ ಪರಿಣಾಮ ಕೆಲಸ ಕಳೆದುಕೊಂಡು ಊರಿಗೆ ವಾಪಸ್ ಬಂದಿದ್ದನು. ಈ ವೇಳೆ ಜಯಮ್ಮನ ಪರಿಚಯವಾಗಿದೆ. ಸಾಲವಾಗಿ ಜಯಮ್ಮನಿಂದ ಹಣ ಪಡೆದು ಹೇಳಿದ ಸಮಯಕ್ಕೆ ವಾಪಸ್ ನೀಡಿ ನಂಬಿಕೆ ಗಿಟ್ಟಿಸಿಕೊಂಡಿದ್ದ ಎನ್ನಲಾಗಿದೆ.

ADVERTISEMENT

ಒಂದು ದಿನ ಆರೋಪಿ ಸುರೇಶ ನಿನ್ನ ಮಗನಿಗೆ ಹೆಣ್ಣು ತೋರಿಸುವುದಾಗಿ ಜಯಮ್ಮಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿ ಗ್ರಾಮದಿಂದ 2 ಕಿ.ಮೀ. ದೂರದ ವರುಣಾ ಕೆರೆಯ ನಿರ್ಜನ ಪ್ರದೇಶದಲ್ಲಿ ಮೃತದೇಹವನ್ನು ಪೆಟ್ರೋಲ್‌ನಿಂದ ಶವವನ್ನು ಸುಟ್ಟು ಹಾಕಿದ್ದನು.

ಜಯಮ್ಮನ ಪೋನ್ ಸ್ವಿಚ್ ಆಫ್ ಆಗಿದ್ದರಿಂದ ಬೆಂಗಳೂರಿನಲ್ಲಿದ್ದ ಮಗ ಕುಮಾರ್ ಊರಿಗೆ ಬಂದು ತಾಯಿಯ ಬಗ್ಗೆ ವಿಚಾರಿಸಿದ್ದಾನೆ. ತಾಯಿ ಜಯಮ್ಮ ಎಲ್ಲೂ ಕಾಣದ್ದರಿಂದ ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದನು.

ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡಿದ್ದ ಬೆಳಕವಾಡಿ ಪೊಲೀಸರು ಸಂಶಯಗೊಂಡು ಸುರೇಶನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಈ ಹಿಂದೆ ತನ್ನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಲು ಜಯಮ್ಮನೇ ಕಾರಣ ಎಂಬ ದ್ವೇಷ ಮತ್ತು ಹಣದ ವಿಚಾರದಲ್ಲಿದ್ದ ವೈಮನಸ್ಸಿನಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ಸಂಬಂಧ ಪೊಲೀಸರು ಸುರೇಶನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.