ADVERTISEMENT

ನಾಗಮಂಗಲ ಪುರಸಭೆ: ಆಶಾ ಅಧ್ಯಕ್ಷೆ, ಜಾಫರ್‌ ಉಪಾಧ್ಯಕ್ಷ

ಜೆಡಿಎಸ್‌ಗೆ ಅಧಿಕಾರ, ಮತ ಹಾಕಿದ ಸಂಸದೆ ಸುಮಲತಾ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 2:59 IST
Last Updated 6 ನವೆಂಬರ್ 2020, 2:59 IST
ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಪುರಸಭೆಯ ಮುಂದೆ ಅಂತರ ಮೆರೆತು ಗುಂಪು ಗೂಡಿದ ಅಭಿಮಾನಿಗಳು.
ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಪುರಸಭೆಯ ಮುಂದೆ ಅಂತರ ಮೆರೆತು ಗುಂಪು ಗೂಡಿದ ಅಭಿಮಾನಿಗಳು.   

ನಾಗಮಂಗಲ: ಜಿದ್ದಾಜಿದ್ದಿನ‌ ಕಣವಾಗಿದ್ದ ನಾಗಮಂಗಲ ಪುರಸಭೆಯ ಅಧ್ಯಕ್ಷೆಯಾಗಿ 13ನೇ ವಾರ್ಡ್ ಸದಸ್ಯೆ ಆಶಾ ಕುಮಾರ್, ಉಪಾಧ್ಯಕ್ಷರಾಗಿ 10 ವಾರ್ಡ್‌ನ ಜಾಫರ್ ಶರೀಫ್ ಆಯ್ಕೆಯಾಗುವ ಮೂಲಕ ಜೆಡಿಎಸ್ ಅಧಿಕಾರ ಹಿಡಿಯಿತು.

ಗೆಲುವಿಗೆ ಅಗತ್ಯವಾಗಿದ್ದ 13 ಮತ ಪಡೆಯುವ ಮೂಲಕ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಅಭ್ಯರ್ಥಿಗಳು ಆಯ್ಕೆಯಾದರು. ಬೆಳ್ಳೂರು ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ಹಿಡಿದು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷದ ಪರವಾಗಿ ಅಧ್ಯಕ್ಷೆ ಸ್ಥಾನಕ್ಕೆ ಮುಬೀನ್ ತಾಜ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಲೀ ಅನ್ಸಾರ್ ನಾಮಪತ್ರ ಸಲ್ಲಿಸಿದ್ದರು.

ಕೊನೆಯ ಕ್ಷಣದಲ್ಲಿ ರಾಜಕೀಯ ಬೆಳವಣಿಗೆ ನಡೆದರೆ ಅಧಿಕಾರ ಹಿಡಿಯುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಮುಖಂಡರಿಗೆ ಯಾವುದೇ ಅವಕಾಶ ಸಿಗಲಿಲ್ಲ. ಲೋಕಸಭಾ ಸದಸ್ಯೆ ಸುಮಲತಾ ಅಂಬರೀಷ್ ಅವರು ಸಹ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ಮಾಡಿದ್ದು
ವಿಶೇಷವಾಗಿತ್ತು.

ADVERTISEMENT

ಕಾಂಗ್ರೆಸ್ ಪಕ್ಷದಿಂದ ಇಬ್ಬರು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ವಿರೋಧ ಪಕ್ಷದಲ್ಲಿರುವ ಅಲ್ಪಸಂಖ್ಯಾತ ಮತ ಪಡೆಯುವ ತಂತ್ರ ವಿಫಲವಾಯಿತು. ಚುನಾವಣಾಧಿಕಾರಿ ಕುಂಞಿ ಅಹಮದ್ ಅವರ ಎದುರಿನಲ್ಲಿ ಸದಸ್ಯರು‌ ಕೈ ಎತ್ತುವ ಮೂಲಕ ಮತ ಚಲಾಯಿಸಿದರು. ಚುನಾವಣೆಯಲ್ಲಿ ಶಾಸಕ ಸುರೇಶ್ ಗೌಡರ ಮತವನ್ನು ಒಳಗೊಂಡಂತೆ ಜೆಡಿಎಸ್ ಅಭ್ಯರ್ಥಿಗಳು 13 ಮತಗಳನ್ನು ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು 12 ಮತ ಪಡೆದರು.

ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಫಲಿತಾಂಶ ಹೊರಬಿದ್ದು, ಜೆಡಿಎಸ್ ಅಧಿಕಾರ ಹಿಡಿದ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಜೈಕಾರವನ್ನು ಕೂಗುತ್ತಾ ಜೆಡಿಎಸ್ ಬಾವುಟ ಹಿಡಿದು ಸಂತಸ ವ್ಯಕ್ತಪಡಿಸಿದರು. ಅಲ್ಲದೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿದರು. ಆದರೆ ಕೋವಿಡ್‌ ನಿಯಮಗಳನ್ನು ಮೀರಿದರು.

ಶಾಸಕ ಸುರೇಶ್ ಗೌಡ, ಮುಖಂಡರಾದ ಚೆನ್ನಪ್ಪ ಇದ್ದರು. ಮತ ಚಲಾವಣೆ ಮಾಡಿದ ನಂತರ ಸಂಸದೆ ಸುಮಲತಾ ‘ಸ್ಥಳೀಯ ಸಂಸ್ಥೆಗಳಲ್ಲಿ ಮತ ಚಲಾವಣೆ ಮಾಡುವುದು ನನ್ನ ಹಕ್ಕು. ನನಗೆ ಸಹಾಯ ಮಾಡಿದವರಿಗೆ ಮತ ಹಾಕಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.