ADVERTISEMENT

ಮೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ: ಚಲುವರಾಯಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 18:40 IST
Last Updated 28 ಅಕ್ಟೋಬರ್ 2018, 18:40 IST

ಮಂಡ್ಯ: ’37 ಸ್ಥಾನ ಗೆದ್ದು ಮುಖ್ಯಮಂತ್ರಿ ಹುದ್ದೆ ಪಡೆದಿರುವ ಜೆಡಿಎಸ್‌ ಮೈತ್ರಿಧರ್ಮ ಪಾಲನೆ ಮಾಡಬೇಕು. ಇಲ್ಲದಿದ್ದರೆ ಮೇ ತಿಂಗಳಲ್ಲಿ ಮತ್ತೆ ವಿಧಾನಸಭಾ ಚುನಾವಣೆ ಎದುರಿಸಬೇಕಾಗುತ್ತದೆ’ ಎಂದು ಕಾಂಗ್ರೆಸ್‌ ಮುಖಂಡ ಎನ್‌.ಚಲುವರಾಯಸ್ವಾಮಿ ಜೆಡಿಎಸ್‌ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

ನಾಗಮಂಗಲ ಪಟ್ಟಣದಲ್ಲಿ ಭಾನುವಾರ ನಡೆದ ಕಾಂಗ್ರೆಸ್‌ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಶಕ್ತಿ ಇರುವವನು ಎಲ್ಲವನ್ನು ತಳ್ಳಿಕೊಂಡು ಮುಂದಕ್ಕೆ ಹೋಗುತ್ತಾನೆ’ ಎಂದು ಪರೋಕ್ಷವಾಗಿ ಜೆಡಿಎಸ್‌ ಪಕ್ಷಕ್ಕೆ ಕಾಂಗ್ರೆಸ್‌ ಅನಿವಾರ್ಯ ಎಂದರು.

‘ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ನಾವು ಪಕ್ಷದ ಆದೇಶ ಪಾಲನೆ ಮಾಡಬೇಕಾಗಿದೆ’ ಎಂದರು.‌

ADVERTISEMENT

‘ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ ಯಾರಾದರೂ ಒಬ್ಬರು ಜಯ ಗಳಿಸಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ದುರದೃಷ್ಟ, ಯಾರೂ ಗೆಲ್ಲಲಿಲ್ಲ. ಹೀಗಾಗಿ, ಕಠಿಣ ಪರಿಸ್ಥಿತಿ ಎದುರಿಸಬೇಕಾಗಿದೆ’ ಎಂದರು.

ಸಭೆಯಲ್ಲಿ ಗದ್ದಲ: ಜೆಡಿಎಸ್‌ಗೆ ಬೆಂಬಲ ನೀಡಿರುವುದಕ್ಕೆ ಸಭೆಯಲ್ಲಿ ಕೆಲವು ಕಾರ್ಯಕರ್ತರು ವಿರೋಧ ವ್ಯಕ್ತಪ
ಡಿಸಿದರು. ‘ನೀವು ಸರಿ ಇದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಹೇಳಿದರು.

ಕಾರ್ಯಕರ್ತರ ಮಾತಿನಿಂದ ಅಸಮಾಧಾನಗೊಂಡ ಚಲುವರಾಯಸ್ವಾಮಿ ಮೈಕ್‌ ಕಿತ್ತು ಟೇಬಲ್‌ ಮೇಲೆ ಕುಟ್ಟಿದರು. ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ಉಂಟಾಯಿತು. ನಂತರ ಸಮಾಧಾನಗೊಂಡು ಸಭೆ ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.