ADVERTISEMENT

ಅಧಿಕಾರಿ ವರ್ಗಕ್ಕೆ ದೂರದೃಷ್ಟಿ, ಇಚ್ಛಾಶಕ್ತಿ ಅವಶ್ಯ: ಬಿ.ಆರ್‌.ರವಿಕಾಂತೇಗೌಡ

ಎಸ್‌.ವಿಶ್ವನಾಥ್‌ ಸ್ಮಾರಕ ಪ್ರಶಸ್ತಿ ಪ್ರದಾನ; ಐಪಿಎಸ್‌ ಅಧಿಕಾರಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 12:51 IST
Last Updated 12 ಮಾರ್ಚ್ 2021, 12:51 IST
ಎಸ್‌.ವಿಶ್ವನಾಥ್‌ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಡಾ.ರಾಮಲಿಂಗಯ್ಯ ಚಾಲನೆ ನೀಡಿದರು
ಎಸ್‌.ವಿಶ್ವನಾಥ್‌ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಡಾ.ರಾಮಲಿಂಗಯ್ಯ ಚಾಲನೆ ನೀಡಿದರು   

ಮಂಡ್ಯ: ‘ಶಾಸಕಾಂಗ, ನ್ಯಾಯಾಂಗ ರೂಪಿಸಿದ ಕಾನೂನು, ಸಾಂವಿಧಾನಿಕ ತತ್ವಗಳನ್ನು ಕಾರ್ಯಗತಗೊಳಿಸುವ ಜವಾಬ್ದಾರಿ ಆಡಳಿತ ಕ್ಷೇತ್ರದ ಮೇಲಿದೆ. ಪ್ರಾಮಾಣಿಕ ಅಧಿಕಾರಿಗಳಿಂದ ಮಾತ್ರ ನೀತಿ, ನಿಯಮ ಸಮರ್ಪಕವಾಗಿ ಜಾರಿಗೆ ಬರಲು ಸಾಧ್ಯವಾಗುತ್ತದೆ’ ಎಂದು ಐಪಿಎಸ್‌ ಅಧಿಕಾರಿ ಬಿ.ಆರ್‌.ರವಿಕಾಂತೇಗೌಡ ಹೇಳಿದರು.

ಎಸ್‌.ವಿಶ್ವನಾಥ್‌ ಸ್ಮಾರಕ ಪ್ರಶಸ್ತಿ ಸಮಿತಿ, ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್‌ ವತಿಯಿಂದ ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಆಡಳಿತ ಕ್ಷೇತ್ರದಲ್ಲಿ ಇರುವವರು ಯಾಂತ್ರೀಕೃತವಾಗಿ ಇರುವುದಕ್ಕೆ ಆಗುವುದಿಲ್ಲ. ಅವರಲ್ಲಿ ಹೃದಯ ಸ್ಪರ್ಶಿ, ಮಾನವೀಯ ಅಂತಃಕರಣ ಇರಬೇಕು. ಆತ್ಮಸಾಕ್ಷಿ ಇರುವ ಅಧಿಕಾರಿಗಳಲ್ಲಿ ಸಮನ್ವಯ ಸಾಧಿಸುವ ಸವಾಲು ಇರುತ್ತದೆ. ಉತ್ತಮ ಅಧಿಕಾರ ನೀಡಲು ಅಧಿಕಾರಿಗಳಲ್ಲಿ ಸೂಕ್ಷ್ಮತೆ ಇರಬೇಕು, ಕೆಲಸ ಮಾಡುವ ಇಚ್ಛಾಶಕ್ತಿ ಹೊಂದಿರಬೇಕು’ ಎಂದರು.

ADVERTISEMENT

‘ಸಿದ್ದರಾಮಯ್ಯ ಅವರು ಉಪಮುಖ್ಯಂತ್ರಿಯಾಗಿದ್ದ ಸಂದರ್ಭದಲ್ಲಿ ಎಸ್‌.ವಿಶ್ವನಾಥ್‌ ಅವರು ವಿಶೇಷಾಧಿಕಾರಿ ಆಗಿದ್ದರು. ಬಜೆಟ್‌ಗೆ ಕನ್ನಡ ರೂಪ ಕೊಡುವ ಸವಾಲು ಸ್ವೀಕರಿಸಿ, ಕನ್ನಡದಲ್ಲೇ ಮೊದಲ ಬಜೆಟ್‌ ಮಂಡಿಸಲು ಕಾರಣರಾಗಿದ್ದರು. ಅದಕ್ಕೂ ಮೊದಲು ಬಜೆಟ್‌ ಇಂಗ್ಲಿಷ್‌ನಲ್ಲಿ ಇರುತ್ತಿತ್ತು. ಅದನ್ನು ಕನ್ನಡದಲ್ಲೇ ರೂಪಿಸುವಲ್ಲಿ ವಿಶ್ವನಾಥ್‌ ಪ್ರಮುಖ ಪಾತ್ರ ವಹಿಸಿದರು’ ಎಂದರು.

‘ದೂರ ದೃಷ್ಟಿ ಹೊಂದಿರುವ ಅಧಿಕಾರಿಯಿಂದ ಮಾತ್ರ ಬದಲಾವಣೆ ಸಾಧ್ಯ. ವಿಶ್ವನಾಥ್‌ ಅವರು ಸಾರ್ವಜನಿಕ ಆಡಳಿತ ಕ್ಷೇತ್ರದೊಳಗೆ ಬೆಳಕಿನ ಕಿರಣಗಳಾಗಿದ್ದರು. ಯಾವುದೇ ಸರ್ಕಾರ ಇದ್ದರೂ ಪ್ರಾಮಾಣಿಕ ಅಧಿಕಾರಿಗಳಿಗೆ ಬೆಲೆ ಇದ್ದೇ ಇರುತ್ತದೆ ಎಂಬುದನ್ನು ಸಾಬೀತು ಮಾಡಿದ್ದರು. ಆಡಳಿತ ವರ್ಗಕ್ಕೆ ಅವರು ಮಾದರಿಯಾಗಿದ್ದಾರೆ’ ಎಂದರು.

‘ಮಾಧ್ಯಮ ಉದ್ಯಮಗಳಾಗಿ, ಉದ್ಯಮ ಮಾಧ್ಯಮವನ್ನು ನಿಯಂತ್ರಿಸುವ ಸಂದರ್ಭದಲ್ಲಿ ವಿಶುಕುಮಾರ್‌ ಅವರು ಲಂಕೇಶ್‌ ಪತ್ರಿಕೆ ಬಿಟ್ಟು ಜಿಲ್ಲಾ ಮಟ್ಟದಲ್ಲಿ ಪತ್ರಿಕೆ ಪ್ರಾರಂಭಿಸಿದ್ದರು. ದಲಿತರ, ರೈತರ, ಅಲ್ಪಸಂಖ್ಯಾತರ ಧ್ವನಿಯಾಗಿದ್ದರು. ಸರ್ಕಾರಿ ಅಧಿಕಾರಿ ಆದ ನಂತರವೂ ಅವರ ನಿಲುವು ಹಾಗೆಯೇ ಉಳಿದಿದೆ’ ಎಂದರು.

‘ವಿಶುಕುಮಾರ್‌ ಅವರು ವಾರ್ತಾ ಇಲಾಖೆಯ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಅಂಬೇಡ್ಕರ್‌ ಕುರಿತ ದೃಶ್ಯ ರೂಪಕದಲ್ಲಿ ಅಂಬೇಡ್ಕರ್‌ ಅವರು ದಲಿತ ಸಮುದಾಯಕ್ಕೆ ಸೀಮಿತವಲ್ಲ, ಶೋಷಿತರು, ಅಲ್ಪಸಂಖ್ಯಾತರ ಪಾಲಿನ ಭಾರತ ಭಾಗ್ಯವಿದಾತವಾಗಿದ್ದರು ಎಂಬುದನ್ನು ಕರ್ನಾಟಕಕ್ಕೆ ಸಾರಿದ್ದರು. ಗಾಂಧೀಜಿ ಅವರ ಕುರಿತು ಪಾಪು–ಬಾಪು ಕಾರ್ಯಕ್ರಮ ರೂಪಿಸಿ 10.5 ಲಕ್ಷ ವಿದ್ಯಾರ್ಥಿಗಳನ್ನು ತಲುಪಿಸಿದ್ದರು’ ಎಂದರು.

ಎಸ್‌.ವಿಶ್ವನಾಥ್‌ ಸ್ಮಾರಕ ಪ್ರಶಸ್ತಿ ಸ್ವೀಕರಿಸಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿವೃತ್ತ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ಮಾತನಾಡಿ ‘ಮಂಡ್ಯ ಜಿಲ್ಲೆಗೆ ಸೇರಿದವನಾಗಿದ್ದರೂ ಹೆಚ್ಚು ಒಡನಾಟ ಹೊಂದಿರಲಿಲ್ಲ. ಆದರೂ ಮಂಡ್ಯದವನು ಎನ್ನುವ ಹೆಮ್ಮೆ ಇತ್ತು. ರೈತ ಚಳವಳಿ ಮುಖಂಡರ ಒಡನಾಟ ಇತ್ತು. ಬದುಕಿನ ಆತ್ಮೀಯ ಕ್ಷಣಗಳನ್ನು ಮಂಡ್ಯ ಕೊಟ್ಟಿದೆ. ಜೀವನದ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ವಿಶ್ವನಾಥ್‌ ಸ್ಮಾರಕ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ’ ಎಂದರು.

ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್‌ ಟ್ರಸ್ಟಿ ಡಾ.ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಜಯಮ್ಮ ವಿಶ್ವನಾಥ್‌, ಜೆ.ವಿ.ಪೂರ್ಣಿಮಾ ಲಿಂಗರಾಜು, ಜೆ.ವಿ.ಶಶಿಧರ್‌ ವಿಶ್ವನಾಥ್‌, ಸುಜಾತ ಇದ್ದರು.

*******

ಅಧಿಕಾರಿಗಳು ಹೀರೋಗಳಲ್ಲ...

‘ಸಾಮಾಜಿಕ ಜಾಲತಾಣದಲ್ಲಿ ಅಧಿಕಾರಿಗಳು ತಮ್ಮನ್ನು ತಾವು ಹೀರೋಗಳಂತೆ ಬಿಂಬಿಸಿಕೊಳ್ಳುತ್ತಿರುವ ಕೆಟ್ಟ ವಿದ್ಯಮಾನ ನಡೆಯುತ್ತಿದೆ’ ಎಂದು ರವಿಕಾಂತೇಗೌಡ ಬೇಸರ ವ್ಯಕ್ತಪಡಿಸಿದರು.

‘ಅಧಿಕಾರಿಗಳು ತಮ್ಮ ಕೆಲಸವನ್ನು ಮಾಡುವುದು ಅವರ ಕರ್ತವ್ಯವಾಗಿದ್ದು, ಅದನ್ನು ತಾವೇ ಬಣ್ಣಿಸಿಕೊಳ್ಳಬಾರದು. ಹಾಗೆ ನೋಡುವುದಾದರೆ ವಾಸ್ತವದಲ್ಲಿ ಅವರ ವ್ಯಕ್ತಿತ್ವ ಬೇರೆಯದೇ ಇರುತ್ತದೆ. ಇದನ್ನೇ ಮಾದರಿ ಎಂಬುವಂತೆ ಮಾಧ್ಯಮಗಳೂ ತೋರಿಸುತ್ತಿರುವುದು ದೊಡ್ಡ ದುರಂತವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.