ಶ್ರೀರಂಗಪಟ್ಟಣ: ‘ಸೊಳ್ಳೆಗಳು ಕಚ್ಚುವುದರಿಂದ ಏನೂ ಆಗದು ಎಂದು ಕಡೆಗಣಿಸಿದರೆ ಅದರಿಂದ ದೊಡ್ಡ ಅಪಾಯ ಎದುರಾಗಲಿದೆ’ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ. ಬೆನ್ನೂರ ಎಚ್ಚರಿಸಿದರು.
ತಾಲ್ಲೂಕಿನ ಬಿದರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಮಹದೇವಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಡೆಂಗಿ ಜ್ವರ ನಿಯಂತ್ರಣ ಮತ್ತು ಮುಂಜಾಗ್ರತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈಡಿಸ್ ಈಜಿಪ್ಟೈ ಜಾತಿಯ ಸೊಳ್ಳೆ ಕಚ್ಚುವುದರಿಂದ ಡೆಂಗಿ ಜ್ವರ ಬರುತ್ತದೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಚಿಕಿತ್ಸೆ ಪಡೆಯುವುದು ತಡವಾದರೆ ಪ್ರಾಣಕ್ಕೇ ಸಂಚಕಾರ ಬರುತ್ತದೆ. ಜ್ವರ, ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರ ಬಾಧೆ, ವಾಕರಿಕೆ ಮತ್ತು ವಾಂತಿ ಈ ರೋಗದ ಲಕ್ಷಗಳಾಗಿವೆ. ಈ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.
‘ಡೆಂಗಿ ಜ್ವರ ಹರಡುವ ಸೊಳ್ಳೆಗಳು ಶುದ್ಧ ನೀರಿನಲ್ಲಿ ಮೊಟ್ಟೆ ಇಡುತ್ತವೆ. ಒಡೆದ ಟಯರ್‌ಗಳು, ತೆಂಗಿನ ಚಿಪ್ಪು, ಸಿಮೆಂಟ್ ತೊಟ್ಟಿಗಳು, ಏರ್ ಕೂಲರ್, ಹೂವಿನ ಕುಂಡಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಅಂತಹ ಸ್ಥಳಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಒಣಗಿಸಬೇಕು. ಮಲಗುವ ಸ್ಥಳದಲ್ಲಿ ಸೊಳ್ಳೆ ನಿರೋಧಕಗಳನ್ನು ಬಳಸಬೇಕು’ ಎಂದು ತಿಳಿಸಿದರು.
ಶಾಲೆಯ ಮುಖ್ಯಶಿಕ್ಷಕ ಪಿ.ಕುಮಾರ್, ಸಮುದಾಯ ಆರೋಗ್ಯ ಅಧಿಕಾರಿ ವಿಶ್ವನಾಥ್, ಆಶಾ ಕಾರ್ಯಕರ್ತೆಯರಾದ ರತ್ನಮ್ಮ, ಸವಿತಾ, ನೇತ್ರಾ, ಜ್ಯೋತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.