ಮಂಡ್ಯ: ಗುಂಡಿಬಿದ್ದಿರುವ ನಗರದ ರಸ್ತೆಗಳಲ್ಲಿ ಒಂದು ಸುತ್ತು ಹೋಗಿ ಬಂದರೆ ವಾಹನ ಸವಾರರಿಗೆ ಸೊಂಟ ನೋವು ಗ್ಯಾರಂಟಿ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆಗಳು ಹಾಳಾಗಿದ್ದು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿವೆ.
ನಗರದ ಹೃದಯ ಭಾಗದಲ್ಲಿರುವ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಮಳೆ ಬಂದರೆ ಕಾಲುವೆಯಂತೆ ರಸ್ತೆಯಲ್ಲೇ ನೀರು ಹರಿಯುತ್ತದೆ. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಮಹಾವೀರ ವೃತ್ತದಲ್ಲಿ ಕೆರೆಯಂತೆ ನೀರು ತುಂಬಿಕೊಳ್ಳುತ್ತದೆ. ಹಿರಿಯ ನಾಗರಿಕರು, ಆರೋಗ್ಯ ಸಮಸ್ಯೆಯುಳ್ಳವರು ರಸ್ತೆಯಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಆಡಳಿತವರ್ಗದ ವಿರುದ್ಧ ಹಿಡಿಶಾಪ ಹಾಕುತ್ತಿದ್ದರೂ ಇಲ್ಲಿಯವರೆಗೆ ಯಾರೂ ಎಚ್ಚೆತ್ತುಕೊಂಡಿಲ್ಲ.
ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಅವರ ಮನೆಯ ಸುತ್ತಮುತ್ತಲಿನ ರಸ್ತೆಗಳೇ ಹೆಚ್ಚು ಹಾಳಾಗಿವೆ. ಜಿಲ್ಲಾಸ್ಪತ್ರೆಯ ರಸ್ತೆ ಹಾಗೂ ಅಶೋಕನಗರದ ತಿರುವುಗಳು, ವಿವೇಕಾನಂದ ರಸ್ತೆ ಕಿತ್ತು ಹೋಗಿವೆ. ನೂರು ಅಡಿ ರಸ್ತೆ ಅರ್ಧ ಭಾಗಕ್ಕೆ ಈಚೆಗೆ ಡಾಂಬರ್ ಹಾಕಲಾಗಿದ್ದು ಉಳಿದರ್ಧ ಭಾಗ ದುಸ್ಥಿತಿ ಕಂಡಿದೆ. ಫ್ಯಾಕ್ಟರಿ ವೃತ್ತ, ತಾವರೆಗೆರೆ ಹಾಗೂ ಚೀರನಹಳ್ಳಿ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿವೆ.
ಪ್ರಮುಖವಾಗಿ ಕಲ್ಲಹಳ್ಳಿಯ ಆಂಜನೇಯ ಸ್ವಾಮಿ ದೇವಾಸ್ಥಾನ, ವಿ.ವಿ ನಗರ, ಪಶ್ಚಿಮ ಪೊಲೀಸ್ ಠಾಣೆ, ಸುಭಾಷ್ ನಗರದ 1ನೇ ತಿರುವು ಹಾಳಾಗಿವೆ. ಇಲ್ಲಿ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ ಅವರ ನಿವಾಸವಿದೆ. ಬಿಜೆಪಿ ಜಿಲ್ಲಾ ಕಚೇರಿಯೂ ಇದ್ದು ಜಿಲ್ಲಾ ಉಸ್ತುವಾರಿ ಸಚಿವರ ಸೇರಿ ಹಲವು ಬಿಜೆಪಿ ಮುಖಂಡರು ಭೇಟಿ ನೀಡುತ್ತಾರೆ. ಇಷ್ಟಾದರೂ ರಸ್ತೆಗಳು ದುರಸ್ತಿ ಕಂಡಿಲ್ಲ. ರಾಷ್ಟ್ರೀಯ ಹೆದ್ದಾರಿಯ ಜೈಜವಾನ್ ಪೆಟ್ರೋಲ್ ಬಂಕ್ ಬಳಿ ಗುಂಡಿಗಳದ್ದೇ ಕಾರುಬಾರಾಗಿದೆ.
‘ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಗಳೂ ಹದಗೆಟ್ಟಿವೆ. ಅರಣ್ಯ ಇಲಾಖೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆರ್‌ಟಿಒ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿ ಸುತ್ತಮುತ್ತಲಿನ ರಸ್ತೆಗಳು ಅದ್ವಾನವಾಗಿವೆ. ಅಧಿಕಾರಿಗಳು ಕಣ್ಣಿದ್ದೂ ಕುರುಡಾಗಿದ್ದಾರೆ. ರಸ್ತೆ ಸುಧಾರಣೆಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸುಭಾಷ್ ನಗರದ ರಾಜೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕಾಳಿಕಾಂಬ ರಸ್ತೆ, ತಾವರೆಗೆರೆ ಬಳಿಯಿರುವ ವಾಟರ್ ಟ್ಯಾಂಕ್ ರಸ್ತೆ, ಪಿಇಎಸ್ ಎಂಜಿನಿಯರಿಂಗ್ ಕಾಲೇಜು ರಸ್ತೆ, ಗಾಂಧಿನಗರ ಪ್ರವೇಶದ ವಿವಿಧ ತಿರುವು ರಸ್ತೆಗಳು. ಆರ್.ಪಿ ರಸ್ತೆ, ಹೌಸಿಂಗ್ ಬೋರ್ಡ್‌ನ ಬಲಮುರಿ ಗಣೇಶ ದೇವಾಲಯ ರಸ್ತೆ , ಚಾಮುಂಡೇಶ್ವರಿ ದೇವಸ್ಥಾನದ ರಸ್ತೆಗಳು ಗುಂಡಿಮಯವಾಗಿವೆ.
‘ವಿ.ವಿ ರಸ್ತೆಯಲ್ಲಿ ನಿತ್ಯ ಓಡಾಡಿದರೆ ಸೊಂಟದ ನೋವು ಕಟ್ಟಿಟ್ಟ ಬುತ್ತಿ. ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ತೆರಿಗೆ ಕಟ್ಟಿ ಎಂದು ಒತ್ತಾಯಿಸುವ ಅಧಿಕಾರಿಗಳು ರಸ್ತೆ ಸೌಲಭ್ಯ ಕಲ್ಪಿಸುವ ಬಗ್ಗೆ ಮಾತನಾಡುವುದಿಲ್ಲ’ ಎಂದು ಬಟ್ಟೆ ಅಂಗಡಿ ವ್ಯಾಪಾರಿ ಶಿವಾಜಿರಾವ್ ಹೇಳಿದರು.
‘27ನೇ ವಾರ್ಡಿನ ತಾವರೆಗೆರೆಯಲ್ಲಿ ಆರು ತಿರುವುಗಳಿವೆ, ಕುಡಿಯುವ ನೀರಿನ ಕಾಮಗಾರಿಗಾಗಿ ರಸ್ತೆ ಅಗೆದಿದ್ದಾರೆ. ಅದನ್ನು ಮುಚ್ಚು ದುರಸ್ತಿ ಮಾಡದ ಕಾರಣ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳಿವೆ. ಕೇಬಲ್ ಅಳವಡಿಸುವುದಕ್ಕೂ ರಸ್ತೆ ಅಗೆದು ಹಾಳು ಮಾಡಿದ್ದಾರೆ. ಮಂಡ್ಯದಲ್ಲಿ ಅಧಿಕಾರಿಗಳು ಸತ್ತು ಹೋಗಿದ್ದಾರಾ’ ಎಂದು ತಾವರೆಗೆರೆ ನಿವಾಸಿಗಳಾದ ಟಿ.ವರಪ್ರಸಾದ್, ಶಿವಕುಮಾರ್, ಚಂದ್ರಶೇಖರ್‌ಮೂರ್ತಿ, ಅನಿತಾ, ವಿ.ಎಸ್.ಗೀತಾ ಪ್ರಶ್ನಿಸಿದರು.
*****
ಹೊಳಲು ವೃತ್ತದಲ್ಲಿ ಗೋಳು
ಹೊಳಲು ವೃತ್ತದ ನಾಲ್ಕೂ ರಸ್ತೆಗಳ ದುಸ್ಥಿತಿ ಜನರ ಕಣ್ಣಲ್ಲಿ ನೀರು ತರಿಸುತ್ತಿದೆ. ಮೇಲುಕೋಟೆಗೆ ತೆರಳುವ ರಸ್ತೆಯಲ್ಲಿ ಜಲ್ಲಿ ಹಾಕಿ ವರ್ಷವಾಗಿದೆ. ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದ್ದು ವಾಹನ ಓಡಿಸಲು ಹರಸಾಹಸ ಪಡುವಂತಾಗಿದೆ. ವಾಹನಗಳ ಚಕ್ರಕ್ಕೆ ಸಿಕ್ಕಿ ಜಲ್ಲಿಕಲ್ಲು ಹಾರುತ್ತಿವೆ, ಜನರು ಗಾಯಗೊಳ್ಳುತ್ತಿದ್ದಾರೆ. ನಾಗಮಂಗಲ ರಸ್ತೆಯಲ್ಲಿ ಮಂಡಿಯುದ್ದ ಗುಂಡಿ ಬಿದ್ದಿದ್ದು ವಾಹನ ಓಡಿಸುವುದು ಸಾಹಸವಾಗಿದೆ.
ಟಿಎಪಿಸಿಎಂಎಸ್ ಕೆಳಸೇತುವೆಯಡಿ ಚರಂಡಿ ನೀರು ಹರಿಯುತ್ತಿದ್ದು ಜನರಿಗೆ ಕೊಳಚೆ ನೀರಿನ ಮಜ್ಜನವಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೊಳಚೆ ನೀರು ಕೆಳಗೆ ಇಳಿಯುತ್ತಿದೆ. ಇದನ್ನು ಸರಿಪಡಿಸುವ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಜನರು ಅಧಿಕಾರಿಗಳ ವಿರುದ್ಧ ನಿತ್ಯ ಶಾಪ ಹಾಕುತ್ತಿದ್ದಾರೆ.
******
ನಗರಸಭೆ ಖಾಲಿ, ಖಾಲಿ
‘ನಗರಸಭೆ ಅಧಿಕಾರಿಗಳು ಜನರಿಗೆ ಮೂಲಸೌಲಭ್ಯ ಒದಗಿಲು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಚೇರಿಯಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ. ಪೌರಾಯುಕ್ತ ಸೇರಿ ಬಹುತೇಕ ಅಧಿಕಾರಿಗಳು ಮೈಸೂರಿನಿಂದ ಬರುತ್ತಾರೆ, ಮಧ್ಯಾಹ್ನ 3 ಗಂಟೆಗೆ ಕಚೇರಿ ಖಾಲಿಯಾಗಿರುತ್ತದೆ. ರಸ್ತೆ ದುರಸ್ತಿಗಾಗಿ ಕೊಟ್ಟ ಅರ್ಜಿಗಳನ್ನು ಕಸಕ್ಕೆ ಹಾಕಿದ್ದಾರೆ’ ಎಂದು ಪೇಟೆಬೀದಿಯ ಶಂಕರೇಗೌಡ ಆರೋಪಿಸಿದರು.
‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹ 50 ಕೋಟಿ ಹಣ ಬಿಡುಗಡೆಯಾಗಿದೆ. ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ಹಣ ವಾಪಸ್ ಹೋಗದಂತೆ ತಡೆದು ನಗರದ ರಸ್ತೆ ದುರಸ್ತಿಗೆ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.