ADVERTISEMENT

ಮೈಶುಗರ್ ಕಾರ್ಖಾನೆ: ಮುಖ್ಯಮಂತ್ರಿ ಮಾತಿಗೆ ಸಂಭ್ರಮ ಬೇಡ– ಬಡಗಲಪುರ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 14:15 IST
Last Updated 20 ಅಕ್ಟೋಬರ್ 2021, 14:15 IST
   

ಮಂಡ್ಯ: ‘ಮೈಷುಗರ್‌ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿರುವುದಕ್ಕೆ ಹೋರಾಟಗಾರರು ಹಾಗೂ ಜನಪ್ರತಿನಿಧಿಗಳು ಸಂಭ್ರಮಿಸದೇ ಕಾರ್ಖಾನೆ ಉಳಿವಿನ ಬಗ್ಗೆ ಗಂಭೀರ ಚರ್ಚೆ ನಡೆಸುವ ಅಗತ್ಯವಿದೆ’ ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರಿ ಸ್ವಾಮ್ಯದಲ್ಲಿಯೇ ಆರಂಭಿಸಲಾಗುವುದು ಎಂಬ ಘೋಷಣೆ ಮಾಡಿವುದು ಸ್ವಾಗತಾರ್ಹವಾಗಿದ್ದು, ಆದರೆ ಇದನ್ನೇ ಗೆದ್ದೋ ಎಂದು ಹೋರಾಟಗಾರರು, ಜನಪ್ರತಿನಿಧಿಗಳು ಸಂಭ್ರಮಿಸುವುದು ಬೇಡ, ಬದಲಿಗೆ ಕಾರ್ಖಾನೆಯ ಮುಂದಿನ ಸ್ಥಿತಿಗತಿಗಳ ಬಗ್ಗೆ ಆಲೋಚಿಸುವುದು ಅಗತ್ಯವಿದೆ. ಕಾರ್ಖಾನೆ ಉಳಿವಿಗೆ ರಾಜಕೀಯ ಅಥವಾ ಅಧ್ಯಕ್ಷರ ಹಸ್ತಕ್ಷೇಪದ ಬಗ್ಗೆ ಆಲೋಚಿಸಬೇಕು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸರ್ಕಾರ 2 ವರ್ಷಗಳ ಕಾಲ ಸರ್ಕಾರಿ ಸ್ವಾಮ್ಯದಲ್ಲಿಯೇ ಪ್ರಾಯೋಗಿಕವಾಗಿ ನಡೆಸಲಾಗುವುದು ಎಂದು ಹೇಳಿರುವುದರಿಂದ ಇದೊಂದು ತಾತ್ಕಾಲಿಕವಾದ ಮಾತಾಗಿದೆ. ಆದ್ದರಿಂದ ಎಲ್ಲಾ ಹೋರಾಟಗಾರರು ಹಾಗೂ ಜನಪ್ರತಿನಿಧಿಗಳು ಕಾರ್ಖಾನೆಯನ್ನು ಮುಂದೆಂದೂ ನಿಲ್ಲಿಸದಂತೆ ಸುಗಮವಾಗಿ ನಡೆಯುವಂತೆ ಒಗ್ಗಟ್ಟಿನಿಂದ ತೆಗೆದುಕೊಂಡು ಹೋಗಬೇಕಿದೆ. ಕಾರ್ಖಾನೆಗೆ ಪ್ರಾಮಾಣಿಕ, ದಕ್ಷ ಅಧಿಕಾರಿ ನೇಮಿಸಬೇಕು. 5 ವರ್ಷಗಳ ಕಾಲ ಕಾಯಂ ಮಾಡಬೇಕು. ತಾಂತ್ರಿಕ ಪರಿಣತರನ್ನೇ ಆಯ್ಕೆ ಮಾಡಿಕೊಳ್ಳಬೇಕು. ಲೆಕ್ಕದ ವ್ಯವಹಾರಗಳು ಪಾರದರ್ಶಕವಾಗಿರಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕಾರ್ಖಾನೆಯನ್ನು ಸುಸ್ಥಿತಿಯಲ್ಲಿ ನೋಡಿಕೊಂಡು ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಿಸಬೇಕು. ಎಥೆನಾಲ್ ಉತ್ಪಾದನೆ ಮಾಡಬೇಕು. ಆಧುನಿಕ ಯಂತ್ರಗಳ ಅಳವಡಿಸಬೇಕು. ಕಾರ್ಖಾನೆ ಮೇಲೆ ನಿಗಾ ಇಡಲು ಪಕ್ಷಾತೀತವಾದ ರೈತರು, ಸಂಘಟನೆಗಳು, ಜನಪ್ರತಿನಿಧಿಗಳನ್ನೊಳಗೊಂಡ ಕಮಿಟಿ ನೇಮಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯ ಸರ್ಕಾರ 20 ದಿನಗಳೊಳಗೆ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಬೇಕು. ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಪ್ರತಿ ಟನ್‌ ಕಬ್ಬಿಗೆ ₹ 4,500 ದರ ನಿಗದಿ ಮಾಡಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ 25 ಸಾವಿರ ಕಬ್ಬು ಬೆಳೆಗಾರರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಎಸ್.ಸಿ.ಮಧುಚಂದನ್, ಪ್ರಸನ್ನ ತಗ್ಗಹಳ್ಳಿ, ಲಿಂಗಪ್ಪಾಜಿ, ಕೆ.ಶೆಟ್ಟಹಳ್ಳಿ ರವಿಕುಮಾರ್‌, ಶಶಿಧರ್‌ ಅಜ್ಜಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.