ADVERTISEMENT

ಬೀಚನಕುಪ್ಪೆ, ಹೊಸ ಉಂಡವಾಡಿ ಗ್ರಾಮಸ್ಥರ ಪ್ರತಿಭಟನೆ

ಕೃಷಿ ಜಮೀನು ಭೂಸ್ವಾಧೀನಕ್ಕೆ ರೈತರ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 4:51 IST
Last Updated 24 ಜುಲೈ 2025, 4:51 IST
<div class="paragraphs"><p>ಶ್ರೀರಂಗಪಟ್ಟಣ ತಾಲ್ಲೂಕಿನ ಬೀಚನಕುಪ್ಪೆ ಗ್ರಾಮದಲ್ಲಿ ಕೃಷಿ ಜಮೀನನ್ನು ಟೌನ್‌ಶಿಪ್‌ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಂಡು ರೈತರನ್ನು ವಂಚಿಸಲಾಗುತ್ತಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಆಗ್ರಹಿಸಿ ಬೀಚನಕುಪ್ಪೆ </p></div>

ಶ್ರೀರಂಗಪಟ್ಟಣ ತಾಲ್ಲೂಕಿನ ಬೀಚನಕುಪ್ಪೆ ಗ್ರಾಮದಲ್ಲಿ ಕೃಷಿ ಜಮೀನನ್ನು ಟೌನ್‌ಶಿಪ್‌ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಂಡು ರೈತರನ್ನು ವಂಚಿಸಲಾಗುತ್ತಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಆಗ್ರಹಿಸಿ ಬೀಚನಕುಪ್ಪೆ

   

ಶ್ರೀರಂಗಪಟ್ಟಣ: ತಾಲ್ಲೂಕಿನ ಬೀಚನಕುಪ್ಪೆ ಗ್ರಾಮ ವ್ಯಾಪ್ತಿಯಲ್ಲಿ ರೈತರ 48 ಎಕರೆ ಕೃಷಿ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳಲಾಗುತ್ತಿದ್ದು, ಅದನ್ನು ಕೈಬಿಡಬೇಕು ಎಂದು ಆಗ್ರಹಿಸಿ ಬೀಚನಕುಪ್ಪೆ ಮತ್ತು ಹೊಸ ಉಂಡವಾಡಿ ಗ್ರಾಮಸ್ಥರು ಹಾಗೂ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ತಾಲ್ಲೂಕಿನ ಮೊಗರಹಳ್ಳಿ ಬಳಿಯ ಕೆಐಎಡಿಬಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಕಚೇರಿ ಎದುರು ಅರ್ಧ ದಿನ ಪ್ರತಿಭಟನೆ ನಡೆಸಿ ಸರ್ಕಾರ, ಕೆಐಎಡಿಬಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಘೋಷಣೆ ಕೂಗಿದರು.

ADVERTISEMENT

‘ಬೀಚನಕುಪ್ಪೆ ಸ.ನಂ. 92ರಲ್ಲಿ 4 ಎಕರೆ ನಮ್ಮ ಸ್ವಂತ ಜಮೀನಿದ್ದು, ಅದೂ ಸೇರಿದಂತೆ ವಿವಿಧ ರೈತರಿಗೆ ಸೇರಿದ ಒಟ್ಟು 48 ಎಕರೆ ಜಮೀನನ್ನು ಕೆಐಎಡಿಬಿ ಭೂ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ರೈತರ ಇಚ್ಚೆಗೆ ವಿರುದ್ಧವಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಈ ಜಮೀನಿಗೆ ಹೊಂದಿಕೊಂಡಂತೆ ಬರ್ಗರಿನ್‌ ಪ್ರಾಪರ್ಟಿಸ್ ಲಿಮಿಟೆಡ್‌ ಹೆಸರಿನ ಸಂಸ್ಥೆಗೆ ಸೇರಿದ ನೂರಾರು ಎಕರೆ ಜಮೀನಿದೆ. ಈ ಸಂಸ್ಥೆಗೆ ಸೇರಿದ ಜಮೀನು ಹೊರತುಪಡಿಸಿ ರೈತರ ಜಮೀನು ವಶಪಡಿಸಿಕೊಳ್ಳಲು ಕಾರಣ ಏನು’ ಎಂದು ರೈತ ವಸಂತಕುಮಾರ್‌ ಪ್ರಶ್ನಿಸಿದರು.

‘ಬೀಚನಕುಪ್ಪೆ ವ್ಯಾಪ್ತಿಯ ಸರ್ಕಾರಿ ಗೋಮಾಳ ಸ.ನಂ.76ರಲ್ಲಿ 133 ಎಕರೆ ‘ಬ’ ಕರಾಬು ಜಮೀನಿನ ಪೈಕಿ ಸಾಕಷ್ಟು ಜಮೀನನ್ನು ನಿಯಮ ಬಾಹಿರವಾಗಿ ಬರ್ಗರಿನ್‌ ಪ್ರಾಪರ್ಟಿಸ್ ಲಿಮಿಟೆಡ್‌ ಹೆಸರಿಗೆ ದುರಸ್ತು ಮಾಡಿಕೊಡಲು ಸಿದ್ದತೆ ನಡೆದಿದ್ದು, ಸಮಗ್ರ ತನಿಖೆ ನಡೆಸಬೇಕು. ಈ ಸಂಸ್ಥೆಯ ನಿರ್ದೇಶಕ ಚೇತನ್‌ ಪಿ. ತಯಾಲ್‌ ಎಂಬವವರು ತಮ್ಮ ಸಂಸ್ಥೆಯ ಹೆಸರಿನಲ್ಲಿರುವ ಜಮೀನಿನಲ್ಲಿ ಟೌನ್‌ಶಿಪ್‌ ಮಾಡಲು ಅವಕಾಶ ಕೋರಿ 2012ರಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು ಅದನ್ನು ತಿರಸ್ಕರಿಸಬೇಕು’ ಎಂದು ಗಂಗಪ್ಪ ಒತ್ತಾಯಿಸಿದರು.

‘ಬೀಚನಕುಪ್ಪೆ ಬಳಿ ಬರ್ಗರಿನ್‌ ಪ್ರಾಪರ್ಟಿಸ್ ಲಿಮಿಟೆಡ್ ಸಂಸ್ಥೆ ಸರ್ಕಾರಿ ಜಮೀನು ಪಡೆದುಕೊಳ್ಳಲು ಕೆಐಎಡಿಬಿ ಮೂಲಕ ವಾಮ ಮಾರ್ಗ ಅನುಸರಿಸುತ್ತಿದೆ. ಟೌನ್‌ ಶಿಪ್‌ ಮಾಡುವ ನೆಪದಲ್ಲಿ ಕಡಿಮೆ ಬೆಲೆ ಸರ್ಕಾರಿ ಮತ್ತು ಖಾಸಗಿ ಜಮೀನು ಪಡೆಯುವ ಹುನ್ನಾರ ನಡೆಸಿದೆ. ಇದಕ್ಕೆ ಅವಕಾಶ ನೀಡಬಾರದು’ ಎಂದು ರೈತ ಇಂದ್ರೇಶ್ ಮನವಿ ಮಾಡಿದರು.

ರೈತ ನಾಯಕ ಕೆ.ಎಸ್‌. ನಂಜುಂಡೇಗೌಡ ಮಾತನಾಡಿ, ‘ಸರ್ಕಾರದ ಬಿ– ಖರಾಬು ಜಮೀನು ಪರಿವರ್ತನೆಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಬೇನಾಮಿ ವ್ಯಕ್ತಿಯ ಹೆಸರಿನಲ್ಲಿ ಜಮೀನು ಮಂಜೂರು ಮಾಡಿಸಿಕೊಂಡು ಸರ್ಕಾರಿ ಜಮೀನು ಕಬಳಿಸುವ ಸಂಚು ನಡೆದಿದೆ. ನೂರಾರು ಕೋಟಿ ಬೆಲೆಯ ಭೂ ಅಕ್ರಮಕ್ಕೆ ಅಕ್ರಮಕ್ಕೆ ಅಧಿಕಾರಿಗಳು ಕೈ ಜೋಡಿಸಿದ್ದಾರೆ. ಭೂ ಸ್ವಾಧೀನ ಪ್ರಕ್ರಿಯೆ ಕೈ ಬಿಡದಿದ್ದರೆ ಚಳವಳಿ ತೀವ್ರಗೊಳ್ಳಲಿದೆ’ ಎಂದು ಎಚ್ಚರಿಸಿದರು.

‘ಸರ್ಕಾರಿ ಜಮೀನು ಕಬಳಿಸುವ ಸಂಚು ನಡೆಯುತ್ತಿದ್ದರೂ ಸಚಿವರು ಮತ್ತು ಶಾಸಕರು ಏನು ಮಾಡುತ್ತಿದ್ದಾರೆ’ ಎಂದು ಬೆಳಗೊಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ವಿ. ಸುರೇಶ್ ಪ್ರಶ್ನಿಸಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸ್ವಾಮಿಗೌಡ, ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ, ಗ್ರಾ.ಪಂ. ಸದಸ್ಯ ಹರೀಶ್, ಸಂಜಯ್‌, ಪುಟ್ಟಮಾದು, ಕೃಷ್ಣಕುಮಾರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.