ADVERTISEMENT

ಬೇಬಿಬೆಟ್ಟ: ಗಣಿಗಾರಿಕೆ ನಿಷೇಧ

ತಹಶೀಲ್ದಾರ್ ಪ್ರಮೋದ್ ಎಲ್‌.ಪಾಟೀಲ್ ಆದೇಶ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 19:54 IST
Last Updated 18 ಆಗಸ್ಟ್ 2019, 19:54 IST
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಸುತ್ತಮುತ್ತಲಿನ ಸ್ಟೋನ್ ಕ್ರಷರ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು
ಪಾಂಡವಪುರ ತಾಲ್ಲೂಕಿನ ಬೇಬಿಬೆಟ್ಟದ ಸುತ್ತಮುತ್ತಲಿನ ಸ್ಟೋನ್ ಕ್ರಷರ್‌ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು   

ಪಾಂಡವಪುರ: ಕೆಆರ್‌ಎಸ್‌ ಜಲಾಶಯದ ಬಳಿ ಭಾರಿ ಶಬ್ದ ಕೇಳಿಬಂದಿದ್ದರಿಂದ, ತಾಲ್ಲೂಕಿನ ಬೇಬಿಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಆ.17ರಿಂದ ಸೆ.16 ರವರೆಗೆ ಕಲ್ಲು ಗಣಿಗಾರಿಕೆ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಚಿನಕುರಳಿ ಹೋಬಳಿಯ ಬೇಬಿಬೆಟ್ಟದ ಕಾವಲು, ಚಿನಕುರಳಿ, ಹೊನಗಾನಹಳ್ಳಿ ಹಾಗೂ ಬನ್ನಂಗಾಡಿ ಸರಹದ್ದಿನಲ್ಲಿ ಯಾವುದೇ ರೀತಿಯ ಕಲ್ಲು ಗಣಿಗಾರಿಕೆ, ಸ್ಟೋನ್‌ ಕ್ರಷರ್‌ಗಳನ್ನು ನಡೆಸುವಂತಿಲ್ಲ. ಈ ಪ್ರದೇಶದಲ್ಲಿ ಜಲ್ಲಿ ಕ್ರಷರ್, ಕಲ್ಲುಪುಡಿ, ಸೈಜುಗಲ್ಲು, ಬೋರ್ಡಸ್‌, ದಿಂಡುಗಲ್ಲುಗಳನ್ನು ಸಾಗಿಸುವಂತಿಲ್ಲ ಎಂದು ತಹಶೀಲ್ದಾರ್ ಪ್ರಮೋದ್ ಎಲ್‌.ಪಾಟೀಲ್ ಆದೇಶಿಸಿದ್ದಾರೆ.

5ಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರುವಂತಿಲ್ಲ. ಎಲ್ಲಾ ರೀತಿಯ ಸಾರ್ವಜನಿಕರ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ. 144 ಸೆಕ್ಷನ್‌ ಜಾರಿಯಾಗಿರುವ ಪ್ರದೇಶದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವಂತಿಲ್ಲ ಎಂದು ಆದೇಶಿಸಿದ್ದಾರೆ.

ADVERTISEMENT

ಬೇಬಿಬೆಟ್ಟದ ಸುತ್ತಲಿನ ಪ್ರದೇಶ ಗಳಲ್ಲಿ ಅನಧಿಕೃತ ಗಣಿಗಾರಿಕೆ ನಡೆಯುತ್ತಿರುವ ಕುರಿತು ದೂರುಗಳು ಬಂದಿರುವುದರಿಂದ ಜಿಲ್ಲಾಧಿಕಾರಿ ನಿರ್ದೇಶನದಂತೆ ಒಂದು ತಿಂಗಳವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪ್ರಮೋದ್ ಪಾಟೀಲ್ ತಿಳಿಸಿದ್ದಾರೆ.

ಗಣಿಗಾರಿಕೆ ಪ್ರದೇಶಕ್ಕೂ ಕೆಆರ್‌ಎಸ್ ಅಣೆಕಟ್ಟೆಗೂ ತುಂಬ ಸಮೀಪವಿದೆ. ಈ ಹಿಂದೆಯೂ ಬೇಬಿಬೆಟ್ಟದ ಬಳಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿದೆ ಎಂಬ ಕೂಗು ಕೇಳಿಬಂದಿತ್ತು. ಈ ಕಾರಣದಿಂದಲೂ ಗಣಿಗಾರಿಕೆಗೆ ನಿಷೇಧ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮುತ್ತಪ್ಪ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಸವಿತಾ, ಉಪ ತಹಶೀಲ್ದಾರ್ ಸುಧಾಕರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

14 ಸ್ಟೋನ್‌ ಕ್ರಷರ್‌ಗಳಿಗೆ ಬೀಗ

ಬೇಬಿಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ಕ್ವಾರಿ ಮತ್ತು ಸ್ಟೋನ್‌ ಕ್ರಷರ್‌ಗಳ ಮೇಲೆ ಭಾನುವಾರವೂ ದಾಳಿ ನಡೆಸಿದ ತಹಶೀಲ್ದಾರ್ ಪ್ರಮೋದ್ ಪಾಟೀಲ್ ನೇತೃತ್ವದ ಅಧಿಕಾರಿಗಳ ತಂಡ 14 ಸ್ಟೋನ್‌ ಕ್ರಷರ್‌ಗಳನ್ನು ಸ್ಥಗಿತಗೊಳಿಸಿದೆ. ಶನಿವಾರ 25 ಸ್ಟೋನ್‌ ಕ್ರಷರ್‌ಗಳಿಗೆ ಬೀಗ ಜಡಿಯಲಾಗಿತ್ತು.

ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ಯಾವುದೇ ಸ್ಟೋರ್‌ ಕ್ರಷರ್‌ಗಳ ಮಾಲೀಕರು ಸ್ಥಳದಲ್ಲಿ ಇರಲಿಲ್ಲ. ಎಲ್ಲರೂ ನಾಪತ್ತೆಯಾಗಿದ್ದರು.

ರಾಗಿಮುದ್ದನಹಳ್ಳಿ ಗ್ರಾಮ ಪಂಚಾಯಿತಿಯ ನೀರುಗಂಟಿ ಆರ್.ಎ.ರವಿ ಅವರು ಗಣಿಗಾರಿಕೆಯಲ್ಲಿ ತೊಡಗಿರುವುದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.