ಬೆಳಕವಾಡಿ: ಗ್ರಾಮದ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿದ್ದ ಕುರಿಗಳ ಮೇಲೆ ಬೀದಿ ನಾಯಿಗಳು 5 ಕುರಿಗಳನ್ನು ಸಾಯಿಸಿ, 5 ಕುರಿಗಳನ್ನು ಗಾಯಗೊಳಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ಶೃುತಿಚಂದ್ರು ಎಂಬುವವರು ತಮ್ಮ ಕುಟುಂಬದ ನಿರ್ವಹಣೆಗಾಗಿ ಕುರಿ ಸಾಕಾಣಿಕೆಯನ್ನು ಅವಲಂಬಿಸಿದ್ದಾರೆ. ಬೀದಿ ನಾಯಿಗಳ ದಾಳಿಯಿಂದಾಗಿ ಸುಮಾರು ₹ 2 ಲಕ್ಷ ಮೌಲ್ಯದ ಕುರಿಗಳನ್ನು ಕಳೆದುಕೊಂಡು ಅವರಿಗೆ ನಷ್ಟವಾಗಿದೆ. ನಮಗೆ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕೆಂದು ಕುರಿ ಮಾಲೀಕ ಶೃುತಿಚಂದ್ರು ಒತ್ತಾಯಿಸಿದ್ದಾರೆ.
ಘಟನೆ ಸ್ಥಳಕ್ಕೆ ಮಳವಳ್ಳಿ ಪಶು ವೈದ್ಯಾಧಿಕಾರಿ, ಸಹಾಯಕ ನಿರ್ದೇಶಕ ಡಾ ಆರ್.ಮಂಜುನಾಥ ಭೇಟಿ ನೀಡಿ ಮೃತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ, ಗಾಯಗೊಂಡ ಕುರಿಗಳಿಗೆ ಚಿಕಿತ್ಸೆ ನೀಡಿದರು. ಈ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ಕೊಡಿಸುವುದಾಗಿ ತಿಳಿಸಿದರು.
ಸ್ಥಳಕ್ಕೆ ತಡವಾಗಿ ಬಂದ ಬೆಳಕವಾಡಿ ಪಶು ಚಿಕಿತ್ಸಾಲಯದ ಮುಖ್ಯ ವೈದ್ಯಾಧಿಕಾರಿ ಡಾ.ಜಿ.ಎನ್. ನಾಗರಾಜು ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.