ADVERTISEMENT

ಭಾರತೀನಗರ | ನಿರುದ್ಯೋಗಿ ಪದವೀಧರರಿಗೆ ಉದ್ಯೋಗ ಕಲ್ಪಿಸಿ: ಮನವಿ

ವಿಧಾನ ಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 3:49 IST
Last Updated 8 ಫೆಬ್ರುವರಿ 2026, 3:49 IST
ಭಾರತೀನಗರ ಸಮೀಪದ ಹನುಮಂತನಗರದಲ್ಲಿ ಶನಿವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ. ಉಮಾಶಂಕರ ನೇತೃತ್ವದಲ್ಲಿ ವಿಧಾನ ಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡರನ್ನು ಸನ್ಮಾನಿಸಲಾಯಿತು 
ಭಾರತೀನಗರ ಸಮೀಪದ ಹನುಮಂತನಗರದಲ್ಲಿ ಶನಿವಾರ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ. ಉಮಾಶಂಕರ ನೇತೃತ್ವದಲ್ಲಿ ವಿಧಾನ ಪರಿಷತ್‌ ಸದಸ್ಯ ಮಧು ಜಿ.ಮಾದೇಗೌಡರನ್ನು ಸನ್ಮಾನಿಸಲಾಯಿತು    

ಭಾರತೀನಗರ: ನಾಡಿನಲ್ಲಿ ನಿರುದ್ಯೋಗಿ ಪದವೀಧರರ ಸಂಖ್ಯೆ ಹೆಚ್ಚುತ್ತಿದ್ದು, ಸರ್ಕಾರಕ್ಕೆ ಮನವಿ ಮಾಡಿ ಉದ್ಯೋಗ ಕೊಡಿಸಲು ಮುಂದಾಗುವಂತೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ. ಉಮಾಶಂಕರ ನೇತೃತ್ವದಲ್ಲಿ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು.

ಅತಿಥಿ ಉಪನ್ಯಾಸಕರ ಹುದ್ದೆ ಕಾಯಂಗೊಳಿಸಲು ವೇತನ ತಾರತಮ್ಯ ಸರಿಪಡಿಸುವಂತೆ ಮತ್ತು ಪದವಿ ಶಿಕ್ಷಣ ಕಾಲೇಜುಗಳನ್ನು ಉನ್ನತೀಕರಣಗೊಳಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಹಕಾರಿಯಾಗುವಂತೆ ಸರ್ಕಾರದ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.

ದಿ.ಜಿ. ಮಾದೇಗೌಡರು ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ಮತ್ತು ರೈತ ಹೋರಾಟಗಾರರಾಗಿ ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ವಿಶ್ವವಿದ್ಯಾನಿಲಯಗಳನ್ನು ಮೀರಿಸುವಂತಹ ಶೈಕ್ಷಣಿಕ ಸಾಧನೆ ಮಾಡುವ ಮೂಲಕ ವಿವಿಧ ರಾಜ್ಯಗಳ ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಭಾರತೀ ವಿದ್ಯಾಸಂಸ್ಥೆಯಲ್ಲಿ ವಿಶೇಷ ಅಧ್ಯಯನ ಮಾಡಿರುವ ಶಿಕ್ಷಕರು ಮತ್ತು ಬುದ್ಧಿಜೀವಿಗಳು ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಗುಣಾತ್ಮಕ ಶಿಕ್ಷಣವನ್ನು ಕ್ಷೇತ್ರದಲ್ಲಿ ಜ್ಞಾನ ದೀವಿಗೆ ನೀಡುತ್ತಿರುವುದು ಪ್ರಸಂಶನಿಯ ಸಂಗತಿ ಎಂದು ಜಿ.ಮಾದೇಗೌಡರನ್ನು ಸ್ಮರಿಸಿದರು.

ADVERTISEMENT

ಮನವಿ ಪತ್ರ ಸ್ವೀಕರಿಸಿ ವಿಧಾನಪರಿಷತ್ ಸದಸ್ಯ ಮಧು.ಜಿ.ಮಾದೇಗೌಡ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದೇವೆ. ಶಿಕ್ಷಕರ ಪರ ಧ್ವನಿ ಎತ್ತಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಈಗಾಗಲೇ ಸಂಬಂಧಿಸಿದ ಸಚಿವರ ಬಳಿ ಮಾತನಾಡಿದ್ದು, ಮತ್ತೆ ನಿಮ್ಮ ಆಶಯದಂತೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್, ಸಂಘಟನಾ ಕಾರ್ಯದರ್ಶಿ ಎಸ್.ಎಲ್. ಉಮೇಶ್, ಉಪನ್ಯಾಸಕ ಅಜ್ಜಹಳ್ಳಿ ಸಿದ್ದಾರ್ಥ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.