ADVERTISEMENT

ಮಂಡ್ಯ: ಮಹಿಳೆಯರ ಪ್ರತಿಭೆಗೆ ವೇದಿಕೆಯಾದ ’ಭೂಮಿಕಾ’

ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ವತಿಯಿಂದ ಆಯೋಜನೆ: ಪ್ರೇಕ್ಷಕರನ್ನು ರಂಜಿಸಿದ ಸಂಗೀತ, ನೃತ್ಯ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 4:59 IST
Last Updated 21 ಸೆಪ್ಟೆಂಬರ್ 2025, 4:59 IST
ಪ್ರಜಾವಾಣಿ ಮತ್ತು ಡೆಕ್ಕನ್‌ಹೆರಾಲ್ಡ್‌ ವತಿಯಿಂದ ಫ್ರೀಡಂ ಹೆಲ್ದಿ ಕುಕ್ಕಿಂಗ್‌ ಆಯಿಲ್‌, ಮೈಸೂರಿನ ಜನಹಿತ ಹೌಸಿಂಗ್‌ ಲೋನ್ಸ್‌ ಅಂಡ್‌ ಫೈನಾನ್ಸ್‌ ಇಂಡಿಯಾ ಸರ್ವಿಸಸ್‌ ಸಹಯೋಗದಲ್ಲಿ ಮಂಡ್ಯದ ವಿವೇಕಾನಂದ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ‘ಭೂಮಿಕಾ ಕ್ಲಬ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಮತ್ತು ಸಭಿಕರು 
ಪ್ರಜಾವಾಣಿ ಮತ್ತು ಡೆಕ್ಕನ್‌ಹೆರಾಲ್ಡ್‌ ವತಿಯಿಂದ ಫ್ರೀಡಂ ಹೆಲ್ದಿ ಕುಕ್ಕಿಂಗ್‌ ಆಯಿಲ್‌, ಮೈಸೂರಿನ ಜನಹಿತ ಹೌಸಿಂಗ್‌ ಲೋನ್ಸ್‌ ಅಂಡ್‌ ಫೈನಾನ್ಸ್‌ ಇಂಡಿಯಾ ಸರ್ವಿಸಸ್‌ ಸಹಯೋಗದಲ್ಲಿ ಮಂಡ್ಯದ ವಿವೇಕಾನಂದ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ‘ಭೂಮಿಕಾ ಕ್ಲಬ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಮತ್ತು ಸಭಿಕರು    

ಮಂಡ್ಯ: ಭರತನಾಟ್ಯದ ಝೇಂಕಾರ, ಸುಮಧುರ ಗೀತೆಗಳ ನಿನಾದ, ಪಾಕ ಸ್ಪರ್ಧೆಯ ಸವಿರುಚಿ, ಭಾರತೀಯ ಫ್ಯಾಷನ್‌ ಷೋನ ದೃಶ್ಯ ವೈಭವ, ಸಾಧಕಿಯರ ಸವಿನುಡಿ ಮುಂತಾದ ಸಾಂಸ್ಕೃತಿಕ ಕಲರವಗಳಿಂದ ‘ಭೂಮಿಕಾ ಕ್ಲಬ್‌’ ಕಾರ್ಯಕ್ರಮವು ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿತು. 

ಪ್ರಜಾವಾಣಿ ಮತ್ತು ಡೆಕ್ಕನ್‌ಹೆರಾಲ್ಡ್‌ ವತಿಯಿಂದ ಫ್ರೀಡಂ ಹೆಲ್ದಿ ಕುಕ್ಕಿಂಗ್‌ ಆಯಿಲ್‌, ಮೈಸೂರಿನ ಜನಹಿತ ಹೌಸಿಂಗ್‌ ಲೋನ್ಸ್‌ ಅಂಡ್‌ ಫೈನಾನ್ಸ್‌ ಇಂಡಿಯಾ ಸರ್ವಿಸಸ್‌ ಸಹಯೋಗದಲ್ಲಿ ಮಂಡ್ಯ ನಗರದ ಪಿಇಎಸ್‌ ಡಿಗ್ರಿ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ‘ಭೂಮಿಕಾ ಕ್ಲಬ್‌’ ಕಾರ್ಯಕ್ರಮವು ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ಉತ್ತಮ ವೇದಿಕೆ ಒದಗಿಸಿಕೊಟ್ಟಿತು. 

ಮಂಡ್ಯದ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಡೇವಿಡ್‌ ಸಾರಥ್ಯದಲ್ಲಿ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು. ಸುಮಧುರ ಗೀತೆಗಳಿಗೆ ಪ್ರೇಕ್ಷಕರು ತಲೆದೂಗಿ, ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿದರು.

ADVERTISEMENT

ವಿಶ್ವಾಸ್‌ ಅವರು ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ ವಿರಚಿತ ‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ’ ಹಾಡನ್ನು ಹಾಡಿ ರಂಜಿಸಿದರು. ರಜತ್‌ ಅವರು ‘ಮಾಯಾವಿ’, ‘ಮುತ್ತು ಕೊಡೋಳು ಬಂದಾಗ’ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ಖುಷಿಯ ಸಾಗರದಲ್ಲಿ ತೇಲಿಸಿದರು. 

ಕೇಸರಿಬಾತ್‌ ಸವಿರುಚಿ:

ರೈತ ನಾಯಕಿ ಸುನಂದಾ ಜಯರಾಂ ಮತ್ತು ಹೋರಾಟಗಾರ್ತಿ ಸಿ.ಕುಮಾರಿ ಅವರು ಚೀಟಿ ಎತ್ತುವ ಮೂಲಕ ಪಾಕಸ್ಪರ್ಧೆಯ ಸ್ಪರ್ಧಿಗಳನ್ನು ಆಯ್ಕೆ ಮಾಡಿದರು. ಫ್ರೀಡಂ ಅಡುಗೆ ಎಣ್ಣೆ ಪಾಕ ಸ್ಪರ್ಧೆಯಲ್ಲಿ ಬಸರಾಳು ಗ್ರಾಮದ ಎಂ.ಸಿ. ಐಶ್ವರ್ಯ ಅನಿಲ್, ಮಂಡ್ಯ ಮೂಲದ ಪದ್ಮಾ ಸಾಗರ್ ಅವರು ತಮ್ಮ ಕೈಚಳಕ ಪ್ರದರ್ಶಿಸಿದರು. ಅತಿಥಿಗಳು ಕೇಸರಿ ಬಾತ್‌ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಐಶ್ವರ್ಯಾ ಪ್ರಥಮ ಸ್ಥಾನವನ್ನು, ಪದ್ಮಾ ಅವರು ದ್ವಿತೀಯ ಸ್ಥಾನವನ್ನು ಗಳಿಸಿದರು.

ರೈತ ಸಾಧಕಿಗೆ ಸನ್ಮಾನ

ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಕೂಡಲಕಪ್ಪೆ ಗ್ರಾಮದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಯಶಸ್ಸು ಸಾಧಿಸಿದ ಪ್ರಗತಿಪರ ರೈತ ಮಹಿಳೆ ಲಕ್ಷ್ಮಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರ ಸಾಧನೆಯನ್ನು ಬಿಂಬಿಸುವ ವಿಡಿಯೊವನ್ನು ಪ್ರದರ್ಶಿಸಲಾಯಿತು. ಬರಡು ಭೂಮಿಯಲ್ಲಿ ಪರಿಶ್ರಮದಿಂದ ಬಹು ಬೆಳೆಗಳನ್ನು ಬೆಳೆದು, ಯಶಸ್ಸು ಕಂಡ ಬಗೆಯನ್ನು ಲಕ್ಷ್ಮಿ ಅವರು ಸಭಿಕರ ಮನಮುಟ್ಟುವಂತೆ ಮಾತನಾಡಿದರು.  

ವೇಷಭೂಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆರು ಮಕ್ಕಳಿಗೆ ಪ್ರಜಾವಾಣಿ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಬ್ಯೂರೋ ಮುಖ್ಯಸ್ಥ ಟಿ.ಆರ್‌. ಸತೀಶ್ ಕುಮಾರ್ ಅವರು ಪ್ರಮಾಣಪತ್ರ ವಿತರಣೆ ಮಾಡಿದರು.

ಮೈಸೂರಿನ ಜನಹಿತ ಹೌಸಿಂಗ್ ಲೋನ್ ಮತ್ತು ಫೈನಾನ್ಸ್‌ ಇಂಡಿಯಾ ವ್ಯವಸ್ಥಾಪಕಿ ರಕ್ಷಿತಾ ಮಾತನಾಡಿ, ಮನೆ ನಿರ್ಮಿಸಲು ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿ ದರದಲ್ಲಿ, ಅತಿ ವೇಗವಾಗಿ ಸಾಲ ಮಂಜೂರು ಮಾಡುವ ಬಗ್ಗೆ ಮಾಹಿತಿ ನೀಡಿದರು. 

ಲಕ್ಕಿ ಡ್ರಾ:

ಲಕ್ಕಿ ಡ್ರಾದಲ್ಲಿ ₹15 ಸಾವಿರ ಮೌಲ್ಯದ ವಾಟರ್‌ ಪ್ಯೂರಿಫೈಯರ್‌ ಅನ್ನು ಎಚ್‌.ಕೆ.ಸುಶೀಲಾ ಅವರು ಪಡೆದುಕೊಂಡರು. ಫ್ರೀಡಂ ಆಯಿಲ್ ವ್ಯವಸ್ಥಾಪಕ ಎಂ.ಪಿ‌. ಸುರೇಶ್ ಬಾಬು, ಪ್ರಜಾವಾಣಿ ಮತ್ತು ಡೆಕ್ಕನ್‌ ಹೆರಾಲ್ಡ್‌ ಬಳಗದವರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.  

ಕೆ.ಆರ್‌.ಪೇಟೆ ತಾಲ್ಲೂಕಿನ ಕೂಡಲಕುಪ್ಪೆ ಗ್ರಾಮದ ಯಶಸ್ವಿ ರೈತ ಮಹಿಳೆ ಲಕ್ಷ್ಮಿ ಅವರನ್ನು ಮಂಡ್ಯದಲ್ಲಿ ಶನಿವಾರ ನಡೆದ ‘ಭೂಮಿಕಾ ಕ್ಲಬ್‌’ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅತಿಥಿಗಳಾದ ರೈತ ನಾಯಕಿ ಸುನಂದಾ ಜಯರಾಂ ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ರೆಡ್‌ಕ್ರಾಸ್‌ ಸೊಸೈಟಿಯ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್‌.ಎಚ್‌. ನಿರ್ಮಲ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಲೋಕಪಾವನಿ ಮಹಿಳಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷೆ ಸುಜಾತಾ ಕೃಷ್ಣ ಪಾಲ್ಗೊಂಡಿದ್ದರು 
‘ಭೂಮಿಕಾ ಕ್ಲಬ್‌’ ಕಾರ್ಯಕ್ರಮದಲ್ಲಿ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಜಾವಾಣಿಯ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ ಅವರು ಪ್ರಮಾಣಪತ್ರ ವಿತರಿಸಿದರು. ಮಕ್ಕಳ ತಾಯಂದಿರು ಇದ್ದಾರೆ 
ಭೂಮಿಕಾ ಕ್ಲಬ್‌ ಕಾರ್ಯಕ್ರಮದಲ್ಲಿ ‘ಫ್ಯಾಷನ್‌ ಷೋ’ ಪ್ರದರ್ಶಿಸಿದ ಯುವತಿಯರು 
ಫ್ರೀಡಂ ಅಡುಗೆ ಎಣ್ಣೆ ‘ಪಾಕ ಸ್ಪರ್ಧೆ’ಯಲ್ಲಿ ಪ್ರೇಕ್ಷಕರ ಮನಗೆದ್ದ ಮದ್ದೂರಿನ ಎಂ.ಸಿ.ಐಶ್ವರ್ಯ ಮತ್ತು ಮಂಡ್ಯದ ಪದ್ಮಾ ಸಾಗರ್‌ 
ಭರತನಾಟ್ಯ ಮನಮೋಹಕ ಪ್ರದರ್ಶನ ನೀಡಿದ ಪ್ರಜ್ಞಾ ಜಿ.

‘ಫ್ಯಾಷನ್‌ ಷೋ’ನಲ್ಲಿ ಮಿಂಚಿದ ಯುವತಿಯರು

ಮಾಜಿ ಮಿಸ್‌ ಇಂಡಿಯಾ ಸೂಪರ್‌ ಮಾಡೆಲ್‌ ಐಶ್ವರ್ಯ ಆರ್‌.ವಿ.ಗೌಡ ಅವರ ತಂಡ ಮತ್ತು ಪಿಇಎಸ್‌ ಕಾಲೇಜಿನ ವಿದ್ಯಾರ್ಥಿನಿಯರು ‘ಭಾರತೀಯ ಫ್ಯಾಷನ್‌ ಷೋ’ನಲ್ಲಿ ಪಾರಂಪರಿಕ ಉಡುಗೆಗಳನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. ಅಮೃತಾ ಅಮೃತಾ ಧನಂಜಯ ಭೂಮಿಕಾ ದುರ್ಗಾಂಬಿಕೆ ಶ್ರೇಯಾ ವಿಶ್ರುತ ಅಮೂಲ್ಯ ಅವರು ವಿವಿಧ ಉಡುಗೆ ತೊಡುಗೆಗಳನ್ನು ಪ್ರದರ್ಶಿಸಿದರು.  ವಿದುಷಿ ಪ್ರಜ್ಞಾ ಜಿ. ಅವರು ಶಾಸ್ತ್ರೀಯ ನೃತ್ಯ ಪ್ರಕಾರವಾದ ಭರತನಾಟ್ಯವನ್ನು ಅಮೋಘವಾಗಿ ಪ್ರದರ್ಶಿಸಿ ಸಭಿಕರಿಂದ ಸೈ ಎನಿಸಿಕೊಂಡರು. ನಾಟ್ಯದ ವಿವಿಧ ಭಂಗಿಗಳು ಪ್ರೇಕ್ಷಕರನ್ನು ಸಮ್ಮೋಹನಗೊಳಿಸಿದವು. ಕಲಾವಿದರಾದ ಲಿಖಿತಾ ಮತ್ತು ವೇದಶ್ರೀ ನಡೆಸಿಕೊಟ್ಟ ಶಾಸ್ತ್ರೀಯ ನೃತ್ಯ ಪ್ರೇಕ್ಷಕರ ಮನಸೂರೆಗೊಂಡಿತು.

‘ಭೂಮಿಕಾ ಕ್ಲಬ್‌ ಮಹಿಳೆಯರ ಸಾಧನೆಗೆ ಭೂಮಿಕೆಯಾಗಲಿ’

‘ಮಹಿಳೆಯರ ಸಬಲೀಕರಣ ಮತ್ತು ಅವರ ಸಾಧನೆಗೆ ಭೂಮಿಕಾ ಕ್ಲಬ್‌ ಉತ್ತಮ ಭೂಮಿಕೆಯಾಗಲಿ. ವನಿತೆಯರಿಗೆ ಆತ್ಮವಿಶ್ವಾಸ ತುಂಬುವ ವೇದಿಕೆಯಾಗಲಿ’ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್‌.ನಂದಿನಿ ಆಶಿಸಿದರು.  ಮಹಿಳೆಯರು ನಾನಾ ಹಂತಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳಿಗೆ ಪರಿಹಾರ ಸಿಗದೆ ಒದ್ದಾಡುತ್ತಾರೆ. ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎಂಬ ಗೊಂದಲ ಕಾಡುತ್ತದೆ. ಇಂಥ ವೇದಿಕೆಗಳು ಮಹಿಳೆಯರ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸೃಜನಶೀಲ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಪ್ರತಿಭಾ ಪ್ರದರ್ಶನಕ್ಕೆ ಚಿಮ್ಮುಹಲಗೆಯಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.  ಬಾಲ್ಯ ವಿವಾಹ ಹೆಣ್ಣು ಭ್ರೂಣ ಹತ್ಯೆ ಮುಟ್ಟಿನ ಸಮಸ್ಯೆ ಎದೆ ಹಾಲು ಕೊರತೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹಿಳೆಯರು ಜಾಗೃತರಾಗಬೇಕು. ಹೆಣ್ಣುಮಕ್ಕಳು ಸಾಮಾಜಿಕ ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.