ADVERTISEMENT

ಪಕ್ಷಪಾತ ಆರೋಪ: ಜೆಡಿಎಸ್‌ ಪ್ರತಿಭಟನೆ

ಟಿಎಪಿಸಿಎಂಎಸ್‌ ಚುನಾವಣೆ: ಅಧಿಕಾರಿ ಕಾರ್ಯವೈಖರಿ ವಿರುದ್ಧ ಆಕ್ರೋಶ– ಕಾಂಗ್ರೆಸ್‌ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:41 IST
Last Updated 25 ಸೆಪ್ಟೆಂಬರ್ 2020, 2:41 IST
ಶ್ರೀರಂಗಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್‌)ದ ಕಚೇರಿ ಎದುರು ಜೆಡಿಎಸ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು (ಎಡಚಿತ್ರ). ಕಾಂಗ್ರೆಸ್‌ ಕಾರ್ಯಕರ್ತರು, ಜೆಡಿಎಸ್‌ ಕಾರ್ಯಕರ್ತರ ವರ್ತನೆಯನ್ನು ಖಂಡಿಸಿದರು
ಶ್ರೀರಂಗಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್‌)ದ ಕಚೇರಿ ಎದುರು ಜೆಡಿಎಸ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು (ಎಡಚಿತ್ರ). ಕಾಂಗ್ರೆಸ್‌ ಕಾರ್ಯಕರ್ತರು, ಜೆಡಿಎಸ್‌ ಕಾರ್ಯಕರ್ತರ ವರ್ತನೆಯನ್ನು ಖಂಡಿಸಿದರು   

ಶ್ರೀರಂಗಪಟ್ಟಣ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್‌)ದ 12 ನಿರ್ದೇಶಕ ಸ್ಥಾನಗಳಿಗೆ ಸೆ. 30ರಂದು ನಡೆಯಲಿರುವ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಜೆಡಿಎಸ್‌ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಟಿಎಪಿಸಿಎಂಎಸ್‌ ಆಡಳಿತ ಕಚೇರಿ ಎದುರು ಅರ್ಧ ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ, ಚುನಾವಣಾಧಿಕಾರಿಯ ವಿರುದ್ಧ ಸಾಲು ಸಾಲು ಘೋಷಣೆಗಳನ್ನು ಕೂಗಿದರು.

ಮತದಾನದ ಹಕ್ಕು ಕಳೆದುಕೊಂಡಿದ್ದವರಿಗೆ ಹೈಕೋರ್ಟ್‌ ಬುಧವಾರವಷ್ಟೇ ಹಕ್ಕು ನೀಡಿ ಆದೇಶ ಹೊರಡಿಸಿದೆ. ಮತದಾನದ ಹಕ್ಕು ಪಡೆದಿರುವವರು ಚುನಾವಣೆಗೂ ಸ್ಪರ್ಧಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ. ಬುಧವಾರ ಮಧ್ಯಾಹ್ನ 3 ಗಂಟೆ ಒಳಗೆ ಕೋರ್ಟ್‌ ಆದೇಶದ ಪ್ರತಿ ಕೊಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸುವ ಹಕ್ಕು ಇಲ್ಲ ಎಂದು ಚುನಾವಣಾಧಿಕಾರಿ ಎನ್‌.ಎಲ್‌. ರವಿ ಹೇಳುತ್ತಿದ್ದಾರೆ. ನ್ಯಾಯಾಲಯದ ಆದೇಶವನ್ನು ಅವರು ಉಲ್ಲಂಘಿಸಿದ್ದಾರೆ. ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು ಎಂದು ಪುರಸಭೆ ಸದಸ್ಯ ಎಂ. ನಂದೀಶ್‌ ಹೇಳಿದರು.

ADVERTISEMENT

ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಸಂಜಯ್‌ ಮಾತನಾಡಿ, ‘ಚುನಾವಣಾಧಿಕಾರಿ ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ. ಇವರಿಂದ ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನ. ತಹಶೀಲ್ದಾರ್‌ ಮಟ್ಟದ ಅಧಿಕಾರಿಯನ್ನು ಚುನಾವಣಾ ಪ್ರಕ್ರಿಯೆಗೆ ನೇಮಿಸಬೇಕು’ ಎಂದು ಆಗ್ರಹಿಸಿದರು.

ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ವೆಂಕಟೇಶ್‌, ಎಸ್‌.ಎಲ್‌. ದಿವಾಕರ್‌, ರಾಮಕೃಷ್ಣ, ಎಂ. ಸುರೇಶ್‌, ಲೋಕೇಶ್‌, ಬಿ.ಎಂ. ಸ್ವಾಮಿಗೌಡ, ಗಂಜಾಂ ವಿಜೇಂದ್ರು, ಜಯರಾಂ, ಕಾಯಿ ವೆಂಕಟೇಶ್‌, ಸಾಯಿಕುಮಾರ್‌, ನಾಗೇಂದ್ರು, ಅರ್ಕೇಗೌಡ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್‌ ಖಂಡನೆ

ಟಿಎಪಿಸಿಎಂಎಸ್‌ ಚುನಾವಣೆ ಸಂಬಂಧ ಚುನಾವಣಾಧಿಕಾರಿ ಎನ್‌.ಎಲ್‌. ರವಿ, ಕಾನೂನು ಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ ಸೋಲಿನ ಭೀತಿಯಿಂದ ಜೆಡಿಎಸ್‌ ಕಾರ್ಯಕರ್ತರು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್‌ ಪ್ರತಿಭಟನೆ ಬೆನ್ನಲ್ಲೇ ಟಿಎಪಿಸಿಎಂಎಸ್‌ ಕಚೇರಿಯ ಮುಖ್ಯ ದ್ವಾರದಲ್ಲಿ ಜಮಾಯಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ ಸದಸ್ಯರ ವರ್ತನೆ ಖಂಡಿಸಿದರು.

ಕಾಂಗ್ರೆಸ್‌ ಬೆಂಬಲಿಗ ಟಿಎಪಿಸಿ ಎಂಎಸ್‌ ಸದಸ್ಯರು ಕೂಡ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ನ್ಯಾಯಾಲಯ ಆದೇಶದ ಉಲ್ಲಂಘನೆ ಯಾಗಿದೆ ಎಂಬುದು ಸರಿಯಲ್ಲ. ಪ್ರತಿಭಟನೆ ನಡೆಸುವ ಮೂಲಕ ಗೊಂದಲ ಸೃಷ್ಟಿಸಲಾಗುತ್ತಿದೆ ಎಂದು ತಾ.ಪಂ. ಸದಸ್ಯ ಸಂತೋಷ್‌ ಹೇಳಿದರು.

ಹೆಬ್ಬಾಡಿಹುಂಡಿ ರಾಮೇಗೌಡ, ಸೋಮಸುಂದರ್‌, ಎ.ಜೆ. ರವಿ, ಮರಳಾಗಾಲ ಪದ್ಮರಾಜ್‌, ಚಿಕ್ಕಪುಟ್ಟೇಗೌಡ, ಬಳ್ಳೇಕೆರೆ ನಾಗೇಶ್‌ಪ್ರಭು, ಉದಯಕುಮಾರ್‌, ಶಿವಮಲ್ಲು, ಶಶಾಂಕ್‌, ರಾಮಲಿಂಗೇಗೌಡ, ವಿ.ಇ.ನಾಗರಾಜು, ಮಹೇಶ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.