ADVERTISEMENT

ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಜಾರಿಯಾಗಲಿ: ಪ್ರೊ.ಶ್ರೀದೇವಿ ಅಭಿಮತ

ಮಾತೃಭಾಷೆ ಜೊತೆಗೆ ಇಂಗ್ಲಿಷ್‌ ಕಲಿಕೆ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:45 IST
Last Updated 27 ಜುಲೈ 2025, 4:45 IST
ಮಂಡ್ಯ ನಗರದ ಸ್ವರ್ಣಸಂದ್ರದ ಎ.ಇ.ಟಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಶನಿವಾರ ಆಯೋಜಿಸಿದ್ದ ‘ದ್ವಿಭಾಷಾ ನೀತಿಯ ಅನಿವಾರ್ಯತೆ’ ವಿಚಾರ ಮಂಥನ ಕಾರ್ಯಕ್ರಮವನ್ನು ನಿವೃತ್ತ ಆಂಗ್ಲಭಾಷಾ ಪ್ರಾಧ್ಯಾಪಕಿ ಪ್ರೊ.ಶ್ರೀದೇವಿ ಉದ್ಘಾಟಿಸಿದರು 
ಮಂಡ್ಯ ನಗರದ ಸ್ವರ್ಣಸಂದ್ರದ ಎ.ಇ.ಟಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭೂಮಿ ಬೆಳಗು ಸಾಂಸ್ಕೃತಿಕ ಸಂಘ ಶನಿವಾರ ಆಯೋಜಿಸಿದ್ದ ‘ದ್ವಿಭಾಷಾ ನೀತಿಯ ಅನಿವಾರ್ಯತೆ’ ವಿಚಾರ ಮಂಥನ ಕಾರ್ಯಕ್ರಮವನ್ನು ನಿವೃತ್ತ ಆಂಗ್ಲಭಾಷಾ ಪ್ರಾಧ್ಯಾಪಕಿ ಪ್ರೊ.ಶ್ರೀದೇವಿ ಉದ್ಘಾಟಿಸಿದರು    

ಮಂಡ್ಯ: ‘ಶಿಕ್ಷಣದಲ್ಲಿ ದ್ವಿಭಾಷಾ ನೀತಿಯನ್ನು ಜಾರಿಗೆ ತರುವ ಮೂಲಕ ಕನ್ನಡ ಭಾಷೆಯ ಬಳಕೆ ಮತ್ತೆ ಪ್ರಾಮುಖ್ಯತೆ ಅಧಿಕಗೊಂಡು ಕನ್ನಡ ಭಾಷೆಯ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕಿ ಪ್ರೊ.ಶ್ರೀದೇವಿ ಹೇಳಿದರು.

ನಗರದ ಸ್ವರ್ಣಸಂದ್ರದ ಎ.ಇ.ಟಿ. ಶಿಕ್ಷಣ ಮಹಾವಿದ್ಯಾಲಯದಲ್ಲಿ ‘ಭೂಮಿ ಬೆಳಗು ಸಾಂಸ್ಕೃತಿಕ ಸಂಘ’ ಶನಿವಾರ ಆಯೋಜಿಸಿದ್ದ ‘ದ್ವಿಭಾಷಾ ನೀತಿಯ ಅನಿವಾರ್ಯತೆ’ ವಿಚಾರ ಮಂಥನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದ್ವಿಭಾಷಾ ನೀತಿಯನ್ನು ಕಡ್ಡಾಯಗೊಳಿಸುವುದರಿಂದ ಪ್ರತಿಯೊಬ್ಬರೂ ಕನ್ನಡವನ್ನು ಶಿಕ್ಷಣದಲ್ಲಿ ಕಲಿಯುವಂತೆ ಕಡ್ಡಾಯಗೊಳಿಸುತ್ತದೆ’ ಎಂದರು.

‘ತ್ರಿಭಾಷಾ ನೀತಿಯಿಂದ ಮಕ್ಕಳಿಗೆ ಮಾನಸಿಕ ಒತ್ತಡ ಉಂಟಾಗುತ್ತಿದ್ದು, ದ್ವಿಭಾಷಾ ನೀತಿಯು ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಉಪಯುಕ್ತವಾಗುತ್ತದೆ ಎಂದರಲ್ಲದೆ, ಇದರಿಂದ ಕನ್ನಡ ಭಾಷೆಯ ಬಳಕೆ ಮತ್ತೆ ಅಧ್ಯಯನವನ್ನು ಪ್ರೋತ್ಸಾಹಿಸಿದಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಇಂದಿನ ಮಕ್ಕಳಿಗೆ ಮಾತೃಭಾಷೆಯ ಜೊತೆಗೆ ಇಂಗ್ಲಿಷ್ ಕಲಿಕೆ ಅಗತ್ಯವಾಗಿದೆ. ಬಾನು ಮುಷ್ತಾಕ್‌ ಅವರ ‘ಎದೆಯ ಹಣತೆ’ ಕೃತಿಯನ್ನು ದೀಪಾ ಬಸ್ತಿ ಅವರು ಇಂಗ್ಲಿಷ್ ಅನುವಾದ ಮಾಡುವ ಮೂಲಕ ಇವರಿಬ್ಬರಿಗೂ ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಲಭಿಸಿತು ಎಂಬುದನ್ನು ಮನಗಾಣಬೇಕು ಎಂದರು. 

ಎಇಟಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಪ್ರಾಧ್ಯಾಪಕ ಎಚ್.ಪಿ.ಧರ್ಮೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭೂಮಿ ಬೆಳಗು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಮಂಗಲ ಎಂ. ಯೋಗೀಶ್, ಸಹಾಯಕ ಪ್ರಾಧ್ಯಾಪಕರಾದ ಸುಕೇಶ್ ದಯಾನಂದ್, ಮೋಹನ್ ದಾಸ್, ವಾಣಿ, ಶ್ರೀದೇವಿ, ರಕ್ಷಿತಾ ಭಾಗವಹಿಸಿದ್ದರು. 

ತ್ರಿಭಾಷಾ ಸೂತ್ರ ಗುಲಾಮಗಿರಿಯ ಸಂಕೇತವಾಗಿದ್ದು ಇದರಿಂದ ಬಿಡುಗಡೆ ಹೊಂದುವ ಮನಸ್ಥಿತಿ ಕನ್ನಡಿಗರಲ್ಲಿ ಕ್ಷೀಣಿಸುತ್ತಿರುವುದು ವಿಷಾದನೀಯ. ಕನ್ನಡಿಗರೆಲ್ಲರೂ ದ್ವಿಭಾಷಾ ನೀತಿಯ ಪರವಾಗಿರಬೇಕು
ಕೆ.ಪಿ. ನಟರಾಜ್ ಚಿಂತಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.