ADVERTISEMENT

ಮಂಡ್ಯ: ಸೋಂಕಿನಲ್ಲೂ ಜನ್ಮದಿನ, ಸನ್ಮಾನ, ಪ್ರಶಸ್ತಿ ಪ್ರದಾನ!

ಅಂತರ ಮರೆತು ಸಮಾರಂಭ ನಡೆಸುತ್ತಿರುವ ಸಂಘಟನೆಗಳು, ಸುರಕ್ಷತಾ ಕ್ರಮಗಳ ಪಾಲನೆ ಇಲ್ಲ

ಎಂ.ಎನ್.ಯೋಗೇಶ್‌
Published 6 ಅಕ್ಟೋಬರ್ 2020, 13:19 IST
Last Updated 6 ಅಕ್ಟೋಬರ್ 2020, 13:19 IST
ಕಾಂಗ್ರೆಸ್‌ ಕಾರ್ಯಕರ್ತರು ಕೈಗೊಂಡ ಪ್ರತಿಭಟನೆಯಲ್ಲಿ ಅಂತರ ಮಾಯವಾಗಿರುವುದು
ಕಾಂಗ್ರೆಸ್‌ ಕಾರ್ಯಕರ್ತರು ಕೈಗೊಂಡ ಪ್ರತಿಭಟನೆಯಲ್ಲಿ ಅಂತರ ಮಾಯವಾಗಿರುವುದು   

ಮಂಡ್ಯ: ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯಾದ್ಯಂತ ಸ್ಥಗಿತಗೊಂಡಿದ್ದ ಧರಣಿ, ಪ್ರತಿಭಟನೆ, ಅಭಿನಂದನಾ, ಸನ್ಮಾನ, ಪ್ರಶಸ್ತಿ ಪ್ರದಾನ, ಜನ್ಮದಿನ ಸಮಾರಂಭಗಳು ಮತ್ತೆ ಆರಂಭಗೊಂಡಿವೆ. ಕೊರೊನಾ ಸೋಂಕು ಹರಡುತ್ತಿದ್ದರೂ ಜನರು ಅಂತರ ಮರೆತು ವಿವಿಧ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರುವುದು ಆತಂಕಕಾರಿಯಾಗಿದೆ.

ಮೊದಲು ಜಿಲ್ಲೆಯಲ್ಲಿ ಸನ್ಮಾನ, ಪ್ರಶಸ್ತಿ ಪ್ರದಾನ ಸಮಾರಂಭಗಳು ಸಾಮಾನ್ಯವಾಗಿದ್ದವು. ವಿವಿಧ ಸಂಘಟನೆಗಳಿಂದ ನಿತ್ಯ ಒಂದಲ್ಲಾ ಒಂದು ಕಡೆ ಅಭಿನಂದನಾ, ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಕೋವಿಡ್‌ ಲಾಕ್‌ಡೌನ್‌ ಆರಂಭವಾದೊಡನೆ ಎಲ್ಲಾ ಸಮಾರಂಭಗಳಿಗೆ ತಡೆ ಬಿದ್ದಿತ್ತು. ಲಾಕ್‌ಡೌನ್‌ ತೆರವುಗೊಂಡು ಕೆಲ ದಿನ ಕಳೆದ ನಂತರ ಈ ಚಟುವಟಿಕೆಗಳು ಮತ್ತೆ ಮರುಕಳಿಸಿವೆ.

ಲಾಕ್‌ಡೌನ್‌ ಅವಧಿಯಲ್ಲಿ ಗಾಂಧಿ ಭವನ, ಅಂಬೇಡ್ಕರ್‌ ಭವನ ಸೇರಿ ವಿವಿಧ ಸಭಾಂಗಣಗಳು ಬಿಕೋ ಎನ್ನುತ್ತಿದ್ದವು. ಆದರೆ ಈಗ ಆ ಪರಿಸ್ಥಿತಿ ಮಾಯವಾಗಿದ್ದು ಜನಸಂದಣಿ ಕಾಣತೊಡಗಿದೆ. ವಿವಿಧ ಸಂಘಟನೆಗಳ ಪದಾಧಿಕಾರಿಗಳು, ರಾಜಕೀಯ ಪಕ್ಷಗಳ ಮುಖಂಡರು ಅಂತರ ಮರೆತು ವಿವಿಧ ಸಮಾರಂಭ ಆಯೋಜನೆ ಮಾಡುತ್ತಿದ್ದಾರೆ. ಕೋವಿಡ್‌ ಸುರಕ್ಷತಾ ಕ್ರಮಗಳು ಕೇವಲ ನೆಪ ಮಾತ್ರಕ್ಕಿದ್ದು ವೇದಿಕೆ ಮೇಲೆ ಜನಜಾತ್ರೆಯೇ ನಡೆಯುತ್ತಿದೆ.

ADVERTISEMENT

ಜಿಲ್ಲಾಧಿಕಾರಿ ಕಚೇರಿ, ವಿಶ್ವೇಶ್ವರಯ್ಯ, ಅಂಬೇಡ್ಕರ್‌ ಪ್ರತಿಮೆ ಎದುರು ನಿತ್ಯ ಏಳೆಂಟು ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನಾಕಾರರು ಅಂತರ ಮರೆತು ಮೆರವಣಿಗೆ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟವೂ ಮರುಕಳಿಸಿದ್ದು ಪ್ರತಿಭಟನಾಕಾರರು ಮಾಸ್ಕ್‌ ಧರಿಸದೇ ಧರಣಿಯಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡು ಬರುತ್ತಿದೆ.

‘ಮಂಡ್ಯ ಜಿಲ್ಲೆಯಿಂದ ಕೋವಿಡ್‌ ಮಾಯವಾಗಿದೆ ಎಂಬಂತೆ ಜನರು ನಡೆದುಕೊಳ್ಳುತ್ತಿದ್ಧಾರೆ. ಮಾಸ್ಕ್‌ ಹಾಕುವುದನ್ನೂ ಮರೆತು ಸನ್ಮಾನ, ಪ್ರಶಸ್ತಿ ಸ್ವೀಕಾರ ಮಾಡುತ್ತಿದ್ದಾರೆ. ವೇದಿಕೆಯ ಮೇಲೆ ಜನಜಾತ್ರೆಯೇ ಸೇರುತ್ತಿದೆ. ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅತಿಥಿಗಳು ಕೂಡ ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ವಿದ್ಯಾನಗರ ಶ್ರೀನಿವಾಸ್‌ ಬೇಸರ ವ್ಯಕ್ತಪಡಿಸಿದರು.

ಇಲ್ಲದ ನಿಯಂತ್ರಣ: ಲಾಕ್‌ಡೌನ್‌ ತೆರವುಗೊಂಡ ನಂತರವೂ ಸೆಪ್ಟೆಂಬರ್‌ ಅಂತ್ಯದವರೆಗೂ ನಿಷೇಧಾಜ್ಞೆ ಜಾರಿಯಲ್ಲಿತ್ತು. ಅಂತರ ಕಾಯ್ದುಕೊಳ್ಳದೇ ಪ್ರತಿಭಟನೆ ನಡೆಸುತ್ತಿದ್ದರೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಲು ಅವಕಾಶ ಇತ್ತು. ಆದರೆ ಈಗ ನಿಷೇಧಾಜ್ಞೆಯೂ ತೆರವುಗೊಂಡಿರುವ ಕಾರಣ ಜನರಿಗೆ ನಿಯಂತ್ರಣವೇ ಇಲ್ಲವಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ 112 ಜನರು ಕೋವಿಡ್‌ನಿಮದ ಮೃತಪಟ್ಟಿದ್ದಾರೆ. ಜಿಲ್ಲೆಯಾದ್ಯಂತ ನಿತ್ಯ 2 ಸಾವಿರ ಜನರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದ್ದು 200–300 ಜನರಿಗೆ ಕೋವಿಡ್‌–19 ದೃಢವಾಗುತ್ತಿದೆ. ಮಂಡ್ಯ ನಗರದಲ್ಲಿ ಅತೀ ಹೆಚ್ಚು ಜನರು ಕೋವಿಡ್‌ ರೋಗಿಗಳು ಇದ್ದಾರೆ. ಇಷ್ಟಾದರೂ ನಗರದಲ್ಲಿ ನಡೆಯುತ್ತಿರುವ ಸಭೆ, ಸಮಾರಂಭಗಳಿಗೆ ನಿಯಂತ್ರಣವೇ ಇಲ್ಲವಾಗಿದೆ.

‘ಕೋವಿಡ್‌ ನಿಯಂತ್ರಣಕ್ಕೆ ಪರಸ್ಪರ ಅಂತರ ಬಿಟ್ಟು ಮತ್ತಾವ ಔಷಧಿಯೂ ಇಲ್ಲ. ಔಷಧಿ ಇನ್ನೂ ತಡವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಇಷ್ಟಾದರೂ ಜನರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಧನಂಜಯ್‌ ತಿಳಿಸಿದರು.

‘ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಸ್ಕ್‌ ಧರಿಸದವರಿಗೆ ₹ 500– ₹1,000ದವರೆಗೆ ದಂಡ ವಿಧಿಸಲಾಗುವುದು. ಕೋವಿಡ್‌ ಬಗ್ಗೆ ನಿರ್ಲಕ್ಷ್ಯ ಬೇಡ ಎಂಬ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.

12,166 ಪ್ರಕರಣ ದಾಖಲು

ಮೂರು ತಿಂಗಳೀಚೆಗೆ ಮಾಸ್ಕ್‌ ಧರಿಸದ, ಅಂತರ ಕಾಪಾಡಿಕೊಳ್ಳದ ಜನರ ವಿರುದ್ಧ ಪೊಲೀಸರು 12,166 ಪ್ರಕರಣ ದಾಖಲು ಮಾಡಿದ್ದಾರೆ. ಮಾಸ್ಕ್‌ ಧರಿಸದೇ ನಿರ್ಲಕ್ಷ್ಯ ತೋರಿದವರ ವಿರುದ್ಧ 10,997 ಪ್ರಕರಣ, ಅಂತರ ಕಾಪಾಡಿಕೊಳ್ಳದವರ ವಿರುದ್ಧ 1,167 ಪ್ರಕರಣ ದಾಖಲು ಮಾಡಲಾಗಿದೆ.

‘ಮಾಸ್‌ ಧರಿಸದೇ ಹೊರಗೆ ಬಂದವರಿಗೆ ಸದ್ಯ ₹ 100 ದಂಡ ವಿಧಿಸಲಾಗುತ್ತಿದೆ. ₹ 1,000 ದಂಡ ವಿಧಿಸುವ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ, ಆದೇಶ ಬಂದ ತಕ್ಷಣ ಸಾವಿರ ದಂಡ ವಿಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.