ADVERTISEMENT

ಬಿಹಾರದಲ್ಲಿ ಬಿಜೆಪಿ ಜಯಭೇರಿ: ಸಂಭ್ರಮಾಚರಣೆ

ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಸಿಹಿ ಹಂಚಿ ವಿಜಯೋತ್ಸವ ಆಚರಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2025, 4:25 IST
Last Updated 15 ನವೆಂಬರ್ 2025, 4:25 IST
ಬಿಹಾರ ಚುನಾವಣೆಯಲ್ಲಿ ಜಯ ಗಳಿಸಿದ ಅಂಗವಾಗಿ ಮಂಡ್ಯ ನಗರದ ಮಹಾವೀರ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್‌ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು
ಬಿಹಾರ ಚುನಾವಣೆಯಲ್ಲಿ ಜಯ ಗಳಿಸಿದ ಅಂಗವಾಗಿ ಮಂಡ್ಯ ನಗರದ ಮಹಾವೀರ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್‌ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು   

ಮಂಡ್ಯ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ನಗರದ ಮಹಾವೀರ ವೃತ್ತದಲ್ಲಿ ವಿಜಯೋತ್ಸವ ಆಚರಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಶುಕ್ರವಾರ ಸಂಭ್ರಮಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್‌ ಮಾತನಾಡಿ, ‘ಮತವನ್ನು ಕದಿಯುತ್ತಿದ್ದಾರೆ ಎಂಬುದನ್ನು ರಾಹುಲ್‌ ಗಾಂಧಿ ನೇತೃತ್ವದಲ್ಲಿ ದೇಶದಾದ್ಯಂತ ಸಾರಿಕೊಂಡು ಬಂದರು. ಆದರೆ ಬಿಹಾರ ಚುನಾವಣೆಯ ಮತದಾರರು ಉತ್ತಮ ಫಲಿತಾಂಶವನ್ನು ಎನ್‌ಡಿಎಗೆ ನೀಡಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತವನ್ನು ಮೆಚ್ಚಿ ಮತ ನೀಡಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

ಬಿಜೆಪಿ ಮುಖಂಡ ಎಚ್‌.ಆರ್‌. ಅರವಿಂದ್‌ ಮಾತನಾಡಿ, ‘ಬಿಹಾರ ಚುನಾವಣೆಯ ಫಲಿತಾಂಶ ನೋಡಿದರೆ ನರೇಂದ್ರ ಮೋದಿ ಅವರೊಂದಿಗೆ ನಿತೀಶ್‌ಕುಮಾರ್‌ ಕೈಜೋಡಿಸಿ ನಿರಂತರವಾಗಿ ಮುಖ್ಯಮಂತ್ರಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿಕೊಂಡಿರುವುದು ಮೆಚ್ಚುವ ಕೆಲಸ. ಕರ್ನಾಟಕ ರಾಜ್ಯದಲ್ಲಿ ಕಬ್ಬಿಗೆ ಬೆಂಬಲ ಬೆಲೆ ನೀಡುತ್ತಿಲ್ಲ, ಇನ್ನಾದರೂ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಮುಖಂಡರಾದ ವಸಂತ್‌ಕುಮಾರ್‌, ಶಿವಕುಮಾರ್‌ ಆರಾಧ್ಯ, ಸಿ.ಟಿ. ಮಂಜುನಾಥ್‌, ವಿವೇಕ್‌, ಹೊಸಹಳ್ಳಿ ಶಿವು, ಮಹಾಂತಪ್ಪ, ಆನಂದ ಕೆಂಪಯ್ಯನದೊಡ್ಡಿ, ಕ್ರಾಂತಿ ಮಂಜು, ನವನೀತ್‌ಗೌಡ ಗರುಡನಹಳ್ಳಿ, ಮಾದರಾಜ‌ ಅರಸ್‌, ಮೀನಾಕ್ಷಿ, ಸಂಜು ಭಾಗವಹಿಸಿದ್ದರು.

ಶ್ರೀರಂಗಪಟ್ಟಣದಲ್ಲಿ ವಿಜಯೋತ್ಸವ

ಶ್ರೀರಂಗಪಟ್ಟಣ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿದ್ದರಿಂದ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು. ಇಲ್ಲಿನ ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೆಡಿಯು ಮುಖಂಡ ನಿತೀಶ್ ಕುಮಾರ್‌ ಕೇಂದ್ರ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ಪರ ಘೋಷಣೆ ಕೂಗಿದರು. ‘ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಅನುಸರಿಸುತ್ತಿರುವ ತುಷ್ಟೀಕರಣ ನೀತಿಗೆ ಈ ಚುನಾವಣೆಯಲ್ಲಿ ಜನರು ಉತ್ತರ ಕೊಟ್ಟಿದ್ದಾರೆ. ಇತರ ರಾಜ್ಯಗಳಿಗೆ ಈ ಫಲಿತಾಂಶ ದಿಕ್ಸೂಚಿಯಾಗಲಿದೆ. ರಾಜ್ಯದಲ್ಲಿಯೂ ಮುಂದೆ ಬಿಜೆಪಿ –ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ’ ಎಂದು ಬಿಜೆಪಿ ಮಂಡಲದ ಅಧ್ಯಕ್ಷ ಪೀಹಳ್ಳಿ ಎಸ್‌. ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದ ಮುಖಂಡರಾದ ಕೆ.ಎಸ್‌. ನಂಜುಂಡೇಗೌಡ ಎಸ್‌.ಕೆ. ಮಂಜುನಾಥ್ ಮಾತನಾಡಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ.ಇ. ಸುಧಾಕರ್‌ ಲಕ್ಷ್ಮಣಸಿಂಗ್‌ ಎಚ್‌.ಎಸ್‌. ಪುಟ್ಟರಾಮು ಎಸ್‌. ರಘು ಎಸ್‌.ಜೆ. ಆನಂದ್ ಎಂ.ಜೆ. ಪುಟ್ಟರಾಜು ಹೇಮಂತಕುಮಾರ್ ಅಭಿಷೇಕ್ ಇತರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.