ADVERTISEMENT

ಸ್ವಾಭಿಮಾನ ಹೇಳಿಕೊಟ್ಟ ಅರಸು, ಬಂಗಾರಪ್ಪ: ಬಿ.ಕೆ. ಹರಿಪ್ರಸಾದ್‌ ಅಭಿಮತ

ಸಂಘ ಉದ್ಘಾಟನೆ, ಪ್ರತಿಭಾ ಪುರಸ್ಕಾರ; ಶಾಸಕ ಬಿ.ಕೆ.ಹರಿಪ್ರಸಾದ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 16:20 IST
Last Updated 14 ಫೆಬ್ರುವರಿ 2021, 16:20 IST
ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು
ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು   

ಮಂಡ್ಯ: ‘ರಾಜ್ಯದಲ್ಲಿ ಹಿಂದುಳಿದ ವರ್ಗದವರು ಸ್ವಾಭಿಮಾನದಿಂದ ಬದುಕುವುದನ್ನು ದೇವರಾಜ ಅರಸು, ಎಸ್‌.ಬಂಗಾರಪ್ಪ ಅವರು ಹೇಳಿಕೊಟ್ಟಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ನಗರದ ಬನ್ನೂರು ರಸ್ತೆಯಲ್ಲಿನ ಮಂಡ್ಯ ಜಿಲ್ಲಾ ಆರ್ಯ ಈಡಿಗ ಸಂಘದ ಆವರಣದಲ್ಲಿ ಭಾನುವಾರ ನಡೆದ ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅರಸು ಅವರ ಕಾಲದಲ್ಲಿ ಹಾವನೂರು ವರದಿ ಜಾರಿಗೊಳಿಸಿ, ಉದ್ಯೋಗದಲ್ಲಿ ಅವಕಾಶ ಸಿಗುವಂತೆ ಮಾಡಿದ್ದಾರೆ. ಈಡಿಗ ಸಮುದಾಯದಲ್ಲಿ ಬೆರಳೆಣಿಕೆ ಮಂದಿ ಮಾತ್ರ ಶ್ರೀಮಂತರಿದ್ದು, ಉಳಿದವರೆಲ್ಲರೂ ಬಡವರಾಗಿದ್ದಾರೆ. ಮಧ್ಯವ ವರ್ಗದವರು ಇಲ್ಲ. ಆರ್ಥಿಕವಾಗಿ ಅಲ್ಲಲ್ಲಿ ಸಬಲರಾಗಿದ್ದರೂ, ಸಾಮಾಜಿಕವಾಗಿ ಸಾಕಷ್ಟು ಹಿಂದುಳಿದ್ದಾರೆ. ಶ್ರೀಮಂತ ಬಡವ ಎನ್ನುವುದು ದೊಡ್ಡ ವಿಚಾರವಲ್ಲ. ಕೋಟಿ ರೂಪಾಯಿ ಇದ್ದರೂ ಶ್ರೀಮಂತನಾಗುವುದಿಲ್ಲ. ಹೃದಯ ಶ್ರೀಮಂತಿಕೆ ಇದ್ದವರು ಮಾತ್ರ ಶ್ರೀಮಂತರಾಗುತ್ತಾರೆ. ಸಮುದಾಯದಲ್ಲಿ ಸಾಕಷ್ಟು ಪ್ರತಿಭಾನ್ವಿತರಿದ್ದಾರೆ. ಇನ್ನಷ್ಟು ಸಮಾಜ ಮುನ್ನೆಲೆಗೆ ಬರಬೇಕು’ ಎಂದರು.

ADVERTISEMENT

‘ರಾಜ್ಯದಲ್ಲಿ ಈಡಿಗರು ಹಿಂದುಳಿದ ವರ್ಗದವರು, ಛತ್ತೀಸ್‌ಗಡದಲ್ಲಿ ಆದಿವಾಸಿ, ಬಿಹಾರದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ್ದಾರೆ. ರಾಜಪ‍್ರಭುತ್ವದಲ್ಲಿ ನಾವೆಲ್ಲರೂ ಜೀತದಾಳುಗಳಾಗಿದ್ದೆವು. ಸಂವಿಧಾನದ 340ನೇ ಆರ್ಟಿಕಲ್‌ ಅನ್ವಯ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕು ಎಂದಿದೆ. ಸಾಮಾಜಿಕ ಸಮಾನತೆ ನೀಡಬೇಕು ಎಂದಿದ್ದರೂ, ಸಂವಿಧಾನ ಇದ್ದರೂ ನಮ್ಮಲ್ಲಿ ಜಾಗೃತಿ ಇರಲಿಲ್ಲ. ಮಂಡ್ಯ, ಹಾಸನ ಜಿಲ್ಲೆಯಲ್ಲಿ ಪ್ರಾಬಲ್ಯ ಕಡಿಮೆ ಇದೆ. ದಕ್ಷಿಣಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಶಿಕ್ಷಿತರಿದ್ದಾರೆ’ ಎಂದರು.

‘ರಶ್ಮಿ ನಾಡರ್‌ ದೇಶದ ಶ್ರೀಮಂತ ಮಹಿಳೆ ಆಗಿದ್ದಾರೆ. ಅವರು ನಮ್ಮ ಸಮುದಾಯದ ಮಹಿಳೆಯಾಗಿದ್ದಾರೆ. ಆಕೆ ಜಾತಿ ಹೆಸರಿನಲ್ಲಿ ಮೇಲೆ ಬಂದಿಲ್ಲ. ಸ್ವ ಸಾಮರ್ಥ್ಯದಿಂದ ಮೇಲೆ ಬಂದಿದ್ದಾರೆ. ಸಮಾಜದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ’ ಎಂದರು.

ಸಮುದಾಯದ 50 ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ಯಾಬ್‌ ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಯಿತು. ಕೆಪಿಎಸ್‌ಸಿ ಮಾಜಿ ಸದಸ್ಯ ಲಕ್ಷ್ಮಿನರಸಯ್ಯ, ಉದ್ಯಮಿ ಜೆ.ಪಿ.ಸುಧಾಕರ್‌, ನೌಕರರ ಸಂಘದ ಪಿ.ಗುರುಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಸಂಘವನ್ನು ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀನಿವಾಸ್‌ ಉದ್ಘಾಟಿಸಿದರು. ಕಾರ್ಕಳ ಮಠದ ವಿಖ್ಯಾತನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಸುಧಾಕರ್‌, ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ನಗರಸಭೆ ಸದಸ್ಯರಾದ ಎಂ.ಪಿ.ಅರುಣ್‌ಕುಮಾರ್‌, ಜಿ.ಕೆ.ಶ್ರೀನಿವಾಸ್‌, ಕೆಎಎಸ್‌ ಅಧಿಕಾರಿ ಶ್ರೀನಿವಾಸ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.