ಸಾಂದರ್ಭಿಕ ಚಿತ್ರ
ಮಂಡ್ಯ: ಪರಿಶಿಷ್ಟರ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿರುವುದನ್ನು ಖಂಡಿಸಿ, ಮುಖ್ಯಮಂತ್ರಿ ಅವರ ರಾಜೀನಾಮೆಗೆ ಒತ್ತಾಯಿಸಿ ಜುಲೈ 29 ಆಗಮಿಸುವ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಘೇರಾವ್ ಹಾಕುವ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವೆಂಕಟಗಿರಿಯಯ್ಯ ಹೇಳಿದರು.
‘ರಾಜ್ಯದ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಗಾಗಿ ಮೀಸರಿಸಿದ್ದ ಎಸ್‌ಸಿಪಿ, ಟಿಎಸ್‌ಪಿ ಅನುದಾನ ₹25,282 ಕೋಟಿ ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿರುವುದು, ₹187 ಕೋಟಿ ವಾಲ್ಮಿಕಿ ನಿಗಮದಲ್ಲಿ ಭ್ರಷ್ಟಾಚಾರದಿಂದ ದಲಿತರಿಗೆ ವಂಚಿಸಿರುವ ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ರಾಜ್ಯ ಪರಿಶಿಷ್ಟ ಜಾತಿ, ವರ್ಗಗಳ ಅಭಿವೃದ್ಧಿಗಾಗಿ ಮೀಸರಿಸಿದ್ದ ಎಸ್‌ಸಿಪಿ, ಟಿಎಸ್‌ಪಿ ಅನುದಾನ ₹25,282 ಕೋಟಿ ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ, ₹105,469 ಕೋಟಿ ದುರ್ಬಳಕೆ ಮಾಡಿರುವುದರ ಜೊತೆಗೆ ವಾಲ್ಮೀಕಿ ನಿಗಮದಲ್ಲಿ ₹187 ಕೋಟಿ ಭ್ರಷ್ಟಾಚಾರ ನಡೆಸಿ ಆರ್ಥಿಕ ಅಶಿಸ್ತಿನ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
‘ದಲಿತರಿಗೆ ಇಷ್ಟು ದೊಡ್ಡ ಅನ್ಯಾಯವಾಗಿದ್ದರೂ ಸಹ ಈ ಸಮುದಾಯವನ್ನು ಪ್ರತಿನಿಧಿಸುವ ಮಂತ್ರಿ ಎಚ್.ಸಿ. ಮಹದೇವಪ್ಪ ಹಾಗೂ ಇತರೆ ಶಾಸಕರು ತುಟಿ ಬಿಚ್ಚದಿರುವುದನ್ನು ಖಂಡಿಸಿದರಲ್ಲದೆ, ಇವರೂ ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲವೇ, ಮುಖ್ಯಮಂತ್ರಿಗಳೇ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
‘ಸದನದಲ್ಲಿ ಭ್ರಷ್ಟಾಚಾರ ಮತ್ತು ಮುಡಾ ಹಗರಣದ ಬಗ್ಗೆ ಮಾತನಾಡಲು ಅವಕಾಶ ನೀಡದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಮತ್ತು ಪರಿಶಿಷ್ಟ ಸಮುದಾಯದವರ ವಿರೋಧಿ ಸರ್ಕಾರವಾಗಿದೆ, ಜೊತೆಗೆ ಪಾದಯಾತ್ರೆಯ ನಾಟಕವಾಡುತ್ತಿರುವುದು ಅವರ ಬಣ್ಣ ಬಯಲು ಮಾಡಿದೆ’ ಎಂದು ಟೀಕಿಸಿದರು.
ಮುಖಂಡರಾದ ಬಿ.ಆನಂದ್, ಮರಂಕಯ್ಯ, ಕರಿಯಪ್ಪ, ಮುತ್ತುರಾಜು ಸುರೇಶ್‌ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.