ADVERTISEMENT

ದಿನಪೂರ್ತಿ ರಕ್ತದಾನಕ್ಕೆ ಡಿಸಿ ಚಾಲನೆ

ಸ್ವಾಮೀಜಿ, ಎಸ್ಪಿ, ಸಿಇಒ ಅವರಿಂದ ರಕ್ತದಾನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2025, 14:44 IST
Last Updated 23 ಜನವರಿ 2025, 14:44 IST
ಮಂಡ್ಯ ನಗರದ ಅಂಬೇಡ್ಕರ್‌ ಭವನದಲ್ಲಿ ಜೀವಧಾರೆ ಟ್ರಸ್ಟ್‌ ವತಿಯಿಂದ ಗುರುವಾರ ನಡೆದ ದಿನದ 24 ಗಂಟೆ ರಕ್ತದಾನ ಶಿಬಿರಲ್ಲಿ ಜಿಲ್ಲಾಧಿಕಾರಿ ಕುಮಾರ ಮತ್ತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ರಕ್ತದಾನ ಮಾಡಿದರು 
ಮಂಡ್ಯ ನಗರದ ಅಂಬೇಡ್ಕರ್‌ ಭವನದಲ್ಲಿ ಜೀವಧಾರೆ ಟ್ರಸ್ಟ್‌ ವತಿಯಿಂದ ಗುರುವಾರ ನಡೆದ ದಿನದ 24 ಗಂಟೆ ರಕ್ತದಾನ ಶಿಬಿರಲ್ಲಿ ಜಿಲ್ಲಾಧಿಕಾರಿ ಕುಮಾರ ಮತ್ತು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ರಕ್ತದಾನ ಮಾಡಿದರು    

ಮಂಡ್ಯ: ‘ಸೈನಿಕ ಪಿತಾಮಹ ಸುಭಾಷ್‌ಚಂದ್ರ ಬೋಸ್‌ ಅವರ ಜನ್ಮದಿನದ ಅಂಗವಾಗಿ ದಿನಪೂರ್ತಿ (24 ಗಂಟೆ) ರಕ್ತದಾನ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಜೀವಧಾರೆ ಟ್ರಸ್ಟ್‌ ವತಿಯಿಂದ ಗುರುವಾರ ಆರಂಭವಾದ ದಿನದ 24 ಗಂಟೆ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಎಲ್ಲ ದಾನಗಳಿಗಿಂತಲೂ ರಕ್ತದಾನ ಬಹಳ ಶ್ರೇಷ್ಠವಾಗಿದೆ. ಅನ್ನದಾನ ಮಾಡಿದರೆ ಅದು ಕೇವಲ ಹಸಿವನ್ನು ನೀಗಿಸುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಜೀವಧಾರೆ ಟ್ರಸ್ಟ್‌ನವರು ರಕ್ತದಾನ ಶಿಬಿರಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ರಕ್ತದಾನ ಮಾಡುವುದಕ್ಕೆ ಎಲ್ಲೋ ಒಂದು ಕಡೆ ತಪ್ಪು ಕಲ್ಪನೆಯಿತ್ತು. ಅದು ಕೂಡ ಹೋಗಲಾಡಿಸುವ ಉದ್ದೇಶದಿಂದ ನಾನು ಸಹ ರಕ್ತದಾನ ಮಾಡಿದ್ದೇನೆ’ ಎಂದು ತಿಳಿಸಿದರು.

ADVERTISEMENT

ರಕ್ತದಾನ ಮಾಡಿ ಮಾತನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ‘ದೇಶಕ್ಕೆ ಸುಭಾಷ್‌ಚಂದ್ರ ಬೋಸ್‌ ಅವರ ಕೊಡುಗೆ ಅಪಾರ. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಕರೆ ನೀಡಿದ್ದ ಅವರು ‘ನೀವು ಒಂದು ತೊಟ್ಟು ರಕ್ತಕೊಡಿ ನಾನು ಸ್ವಾತಂತ್ರ್ಯ ತಂದು ಕೊಡುತ್ತೇನೆ’ ಎಂಬ ಮಾತನ್ನು ಹೇಳಿ ಹುರಿದುಂಬಿಸಿದ್ದರು’ ಎಂದರು. 

ಮಂಡ್ಯ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ದಾನಿಗಳು ಉತ್ಸುಕರಾಗಿ ರಕ್ತದಾನ ಮಾಡಿದರು. ಶುಕ್ರವಾರ ಬೆಳಿಗ್ಗೆ 8 ಗಂಟೆಯವರೆಗೂ ಅಂದರೆ ಒಟ್ಟು 24 ಗಂಟೆಗಳ ಕಾಲ ರಕ್ತದಾನ ನಡೆಯುತ್ತದೆ.

ಬೇಬಿ ಬೆಟ್ಟದ ಶಿವಬಸವ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸಿಇಒ ಶೇಖರ್‌ ತನ್ವೀರ್‌ ಆಸಿಫ್‌, ಪಿಇಟಿ ಅಧ್ಯಕ್ಷ ಕೆ.ಎಸ್‌. ವಿಜಯ್‌ ಆನಂದ್‌ ಅವರು ರಕ್ತದಾನ ಮಾಡಿದರು.

ಎಸ್‌ಬಿ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಬಿ. ಶಿವಲಿಂಗಯ್ಯ, ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ, ಜೀವಧಾರೆ ಟ್ರಸ್ಟ್‌ ಅಧ್ಯಕ್ಷ ನಟರಾಜು, ಡಾ.ಆಶಾಲತಾ, ಡಾ.ಮಾದೇಶ್‌ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.