
ಮಂಡ್ಯ: ‘ಆರೋಗ್ಯವಂತರು ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಂಡರೆ ಅಗತ್ಯವಿರುವ ರಕ್ತದ ಕೊರತೆ ನೀಗಿಸಬಹುದು’ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಟಿ.ಜೆ. ಹೇಮಾವತಿ ಅಭಿಪ್ರಾಯಪಟ್ಟರು.
ನಗರದ ಆರ್‌ಟಿಒ ಕಚೇರಿ ಆವರಣದಲ್ಲಿ ರಸ್ತೆ ಸುರಕ್ಷತಾ ಸಮಿತಿ, ಪ್ರಾದೇಶಿಕ ಸಾರಿಗೆ ಕಚೇರಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸಾಚರಣೆ ಅಂಗವಾಗಿ ಮಂಗಳವಾರ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಆರ್‌ಟಿಒ ಕಚೇರಿಗೆ ಬರುವ ಎಲ್ಲ ವಾಹನದ ಚಾಲಕರು ಹಾಗೂ ಮಾಲೀಕರು ರಕ್ತದಾನ ಮಾಡುವುದು ಮುಖ್ಯವಾಗಬೇಕು. ಏಕೆಂದರೆ ಅಪಘಾತದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಿರುತ್ತದೆ. ರಕ್ತದಾನ ಮಾಡುವುದು ಒಂದು ಸೇವಾ ಮನೋಭಾವ ಇದ್ದಂತೆ’ ಎಂದರು.
ಸಾರಿಗೆ ವಾಹನ ನಿರೀಕ್ಷಕ ಅಶೋಕ್ ಮತ್ತು ಪರಿಸರ ಸಂಸ್ಥೆಯ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿದರು. ಶಿಬಿರದಲ್ಲಿ 58 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಕವಿ ಕೆ.ಪಿ.ಮೃತ್ಯುಂಜಯ, ವಾಹನ ನಿರೀಕ್ಷಕ ಚಿಕ್ಕ ಮಾಯಿಗೌಡ, ಇಲಾಖೆಯ ಚಂದ್ರಶೇಖರ್, ಮಂಜುನಾಥ್ ರಾಜ್, ಚನ್ನಕೇಶವ, ರಕ್ತನಿಧಿ ಕೇಂದ್ರದ ರಫಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.