ಶ್ರೀರಂಗಪಟ್ಟಣ: ಮನೆಯ ಅಂದ ಹೆಚ್ಚಿಸಲು, ಪರಿಸರ ತಂಪಾಗಿಡಲು ಬಗೆಬಗೆಯ ಸಸಿ ಬೆಳೆಸುವುದು ಸಾಮಾನ್ಯ. ತಾರಸಿ ಮೇಲೆ ಪುಟ್ಟ ಕುಂಡದಲ್ಲಿ ಬೆಳೆಯುವ ಬೋನ್ಸಾಯ್ ಪದ್ಧತಿಯ ತೋಟವೊಂದು ಪಟ್ಟಣದಲ್ಲಿ ಗಮನ ಸೆಳೆಯುತ್ತಿದೆ.
ಇಲ್ಲಿನ ಜೈನ ಬಸದಿ ಬಡಾವಣೆಯಲ್ಲಿ ಸಾಹಿತಿ ಸಾ.ವೆ.ರ.ಸ್ವಾಮಿ (ಸ್ವಾಮಿ ಮೇಷ್ಟ್ರು) ತಮ್ಮ ಮನೆಯ ತಾರಸಿ ಮೇಲೆ ಬೋನ್ಸಾಯ್ ಸಸಿಗಳನ್ನು ಬೆಳೆಸಿದ್ದಾರೆ. ಅರಳಿ, ಆಲ, ಬಸರಿ, ನುಗ್ಗೆ, ಬೇವು, ಹೊಂಗೆ ಸೇರಿದಂತೆ ವಿವಿಧ ಮರಗಳನ್ನು ಪುಟ್ಟ ಕುಂಡದಲ್ಲಿ ನೆಟ್ಟು ಬೆಳೆಸುತ್ತಿದ್ದಾರೆ. 8 ವರ್ಷದ ಅರಳಿ ಸಸಿ ಕೇವಲ 4 ಅಡಿ ಎತ್ತರವಿದೆ. 7 ವರ್ಷಗಳ ಹಿಂದೆ ನಾಟಿ ಮಾಡಿರುವ ಅರಳಿ ಸಸಿ ಮೂರೂವರೆ ಅಡಿ ಎತ್ತರದಷ್ಟು ಮಾತ್ರ ಬೆಳೆದಿದೆ. ಮರವಾಗಿ ಬೆಳೆಯಬೇಕಿದ್ದ ಬೇವು, ಬಸರಿ, ಹೊಂಗೆ ಗಿಡಗಳು ಮೂರು ಅಡಿಗಿಂತ ಹೆಚ್ಚು ಬೆಳೆದಿಲ್ಲ. ಒಂದೂವರೆ ಚದರ ಅಡಿ ಅಗಲದ ಪ್ಲಾಸ್ಟಿಕ್, ಸಿಮೆಂಟ್ ಮತ್ತು ಮಣ್ಣಿನ ಕುಂಡದಲ್ಲಿ ಬೋನ್ಸಾಯ್ ಗಿಡಗಳನ್ನು ಬೆಳೆಸುತ್ತಿದ್ದಾರೆ.
‘ಬೃಹತ್ ಮರವಾಗಿ ಬೆಳೆಯುವ ಸಸಿಗಳ ತಾಯಿಬೇರನ್ನು ಕತ್ತರಿಸಿ ಆಳಕ್ಕೆ ಬೇರು ಬಿಡದಂತೆ ಮಾಡಲಾಗಿದೆ. ಪಲ್ಲಿ ಬೇರು ಅಥವಾ ಮರಿ ಬೇರುಗಳು ಮಾತ್ರ ಗಿಡಕ್ಕೆ ಪೋಷಕಾಂಶ ಪೂರೈಸುತ್ತವೆ. ಇದರಿಂದ ಗಿಡಗಳ ಸಹಜ ಬೆಳವಣಿಗೆ ಕುಂಟಿತವಾಗುತ್ತದೆ’ ಎಂದು ಸ್ವಾಮಿ ಮೇಷ್ಟ್ರು ಹೇಳುತ್ತಾರೆ.
ಈ ಬೋನ್ಸಾಯ್ ಗಿಡಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಇವುಗಳನ್ನು ನೋಡಿದವರು ತಮ್ಮ ಮನೆಗಳಲ್ಲಿ ಇಂತಹ ಗಿಡಗಳನ್ನು ಬೆಳೆಸುವ ಉತ್ಸುಕತೆ ತೋರುತ್ತಿದ್ದಾರೆ.
ಸುಮಾರು 30X40 ಚದರ ಅಡಿ ವಿಸ್ತೀರ್ಣದ ತಾರಸಿಯ ಮೇಲೆ 30ಕ್ಕೂ ಹೆಚ್ಚು ಬಗೆಯ ಸಸ್ಯ ಸಂಕುಲವನ್ನು ಸ್ವಾಮಿ ಮೇಷ್ಟ್ರು ಬೆಳೆಸುತ್ತಿದ್ದಾರೆ. ಎಲೆಯಲ್ಲೇ ಹೂವು ಅರಳಿಸುವ ಕೇರಳ ಮೂಲದ ಮನ್ನಾರ್ ಸಸ್ಯ, ಏಳು ಸುತ್ತಿನ ಮಲ್ಲಿಗೆ, ಔಷಧೀಯ ಗುಣದ ಅಮೃತ ಬಳ್ಳಿ, ಲಿಲ್ಲಿ, ಬದನೆ, ದಾಸವಾಳ, ಗುಲಾಬಿ, ಓಲಿಯಾಂಡರ್, ದೇವಗಳ್ಳಿ, ಬೋಗನ್ವಿಲ್ಲಾ, ಪಾಚಿ ಎಸಳು ಸೇರಿದಂತೆ ಬಗೆ ಬಗೆಯ ಅಲಂಕಾರಿಕ ಗಿಡಗಳು ಮಹಡಿ ಮೇಲೆ ನಳನಳಿಸುತ್ತಿವೆ.
‘ಶಿಕ್ಷಕ ವೃತ್ತಿಯಿಂದ ನಿವೃತ್ತನಾದ ಬಳಿಕ ಮನೆಯ ಅಂದವನ್ನು ಹೆಚ್ಚಿಸಲು ಸಮಯ ಮೀಸಲಿಟ್ಟಿದ್ದೇನೆ. ಹಸಿರು ಗಿಡಗಳು ಪರಿಸರವನ್ನು ತಂಪಾಗಿಡುತ್ತವೆ. ಹಾಗಾಗಿ ಸಾಧ್ಯವಾದಷ್ಟು ಗಿಡಗಳನ್ನು ತಾರಸಿಯ ಮೇಲೆ ಬೆಳೆಸಿದ್ದೇನೆ. 8 ವರ್ಷಗಳಿಂದ ಬೋನ್ಸಾಯ್ ಗಿಡಗಳನ್ನು ಬೆಳೆಸುತ್ತಿದ್ದು, ಮನೆಯ ಪರಿಸರದ ಸೊಬಗು ಇಮ್ಮಡಿಗೊಂಡಿದೆ. ಇವು ಮನಸ್ಸಿಗೂ ಮುದ ನೀಡುತ್ತವೆ’ ಎಂದು ಸ್ವಾಮಿ ಮೇಷ್ಟ್ರು ಸಂತಸ ವ್ಯಕ್ತಪಡಿಸುತ್ತಾರೆ.
ನಳನಳಿಸುವ ಬಳ್ಳಿ ಜಾತಿ ಗಿಡಗಳು
ಬಳ್ಳಿ ಜಾತಿಯ ಗಿಡಗಳನ್ನು ತೊಟ್ಟಿಲುಗಳಲ್ಲಿಟ್ಟು ಬೆಳೆಸಿ ತೂಗಿ ಬಿಡಲಾಗಿದೆ. ಕಬ್ಬಿಣದ ಕೊಂಡಿಗಳಿಗೆ ನೇತು ಹಾಕಿರುವ ಕುಂಡಗಳಲ್ಲಿ ರಾಜ್ಯ, ಹೊರ ರಾಜ್ಯದಿಂದ ತರಿಸಿರುವ ಬಳ್ಳಿ ಜಾತಿಯ ಗಿಡಗಳು ನಳನಳಿಸುತ್ತಿವೆ. ಮನೆಯ ತಾರಸಿಯ ಮೇಲೆ ಹತ್ತುವಾಗ ಮೆಟ್ಟಿಲುಗಳ ಎಡ, ಬಲದಲ್ಲಿ ಜೋಡಿಸಿರುವ ಆಕರ್ಷಕ ಗಿಡಗಳು ನಮ್ಮನ್ನು ಸ್ವಾಗತಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.