ADVERTISEMENT

‘ಪುಸ್ತಕ ಮನೆ’ಯಲ್ಲಿ ಸಿದ್ದಲಿಂಗಯ್ಯ ನೆನಪು ಜೀವಂತ

ಗ್ರಂಥಗಳ ಜೊತೆ ಕಾಲ ಕಳೆಯುತ್ತಿದ್ದ ಕವಿ, ಕುಟುಂಬ ಸದಸ್ಯರೊಂದಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 15:04 IST
Last Updated 11 ಜೂನ್ 2021, 15:04 IST
ಪಾಂಡವಪುರದ ಪುಸ್ತಕ ಮನೆಯಲ್ಲಿ ಕವಿ ಸಿದ್ದಲಿಂಗಯ್ಯ ಅವರು ಕಳೆದ ಕ್ಷಣ
ಪಾಂಡವಪುರದ ಪುಸ್ತಕ ಮನೆಯಲ್ಲಿ ಕವಿ ಸಿದ್ದಲಿಂಗಯ್ಯ ಅವರು ಕಳೆದ ಕ್ಷಣ   

ಪಾಂಡವಪುರ: ಕವಿ ಡಾ.ಸಿದ್ದಲಿಂಗಯ್ಯ ಅವರು ತಾ‌ಲ್ಲೂಕಿನ ಹರಳಹಳ್ಳಿ ಗ್ರಾಮದಲ್ಲಿರುವ ಅಂಕೇಗೌಡ ಪ್ರತಿಷ್ಠಾನದ ‘ಪುಸ್ತಕದ ಮನೆಗೆ’ ಆಗಾಗ್ಗೆ ಭೇಟಿ ನೀಡಿ ಪುಸ್ತಕಗಳೊಂದಿಗೆ ಗಂಟೆಗಟ್ಟಲೆ ಕಾಲಕಳೆಯುತ್ತಿದ್ದರು. ಪುಸ್ತಕ ಮನೆಯಲ್ಲಿ ಈಗಲೂ ಅವರ ನೆನಪುಗಳು ಜೀವಂತವಾಗಿವೆ.

ಸುಮಾರು 8–10 ವರ್ಷಗಳಿಂದಲೂ ಪುಸ್ತಕ ಮನೆಯ ನಂಟು ಅವರದಾಗಿತ್ತು. ಸುಮಾರು 10 ಲಕ್ಷ‌ಕ್ಕೂ ಹೆಚ್ಚು ವಿವಿಧ ಪ್ರಕಾರಗಳ ಪುಸ್ತಕಗಳಿರುವ ಈ ಪುಸ್ತಕದ ಮನೆಯಲ್ಲಿ ಪುಸ್ತಕಗಳನ್ನು ವೀಕ್ಷಣೆ ಮಾಡಿ, ತನಗಿಷ್ಟವಾದ ಪುಸ್ತಕಗಳನ್ನು ತಿರುವಿಹಾಕುತ್ತಾ ಗಂಟೆಗಟ್ಟೆಲೆ ಓದಿನಲ್ಲಿ ನಿರತರಾಗುತ್ತಿದ್ದರು.

ಪುಸ್ತಕ ಪ್ರೇಮಿಯಾಗಿದ್ದ ಡಾ.ಸಿದ್ದಲಿಂಗಯ್ಯನವರು ಮಂಡ್ಯ, ಮೈಸೂರು ಕಡೆಗೆ ಬಂದಾಗಲೆಲ್ಲ ತಪ್ಪದೆ ಪುಸ್ತಕದ ಮನೆಗೆ ಬಂದು ಹೋಗದೆ ಇರುತ್ತಿರಲಿಲ್ಲ. ಅಷ್ಟರಮಟ್ಟಿಗೆ ಅವರು ಪುಸ್ತಕದ ಮನೆಯ ಸಂಬಂಧವನ್ನು ಬೆಳೆಸಿಕೊಂಡಿದ್ದರು. ತನಗೆ ಬೇಕಾದ ಪುಸ್ತಕಗಳನ್ನು ಅಂಕೇಗೌಡರಿಂದ ಪಡೆದು ಹೋಗುತ್ತಿದ್ದರು.

ADVERTISEMENT

ಸಿದ್ದಲಿಂಗಯ್ಯನವರು ಕರ್ನಾಟಕ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾಗಿದ್ದಾಗ ಇಲ್ಲಿನ ಪುಸ್ತಕದ ಮನೆಗೆ ಹಲವು ಪುಸ್ತಕಗಳನ್ನು ನೀಡಿದ್ದರು. ಪುಸ್ತಕದ ಮನೆಗೆ ತಾವು ಬರುವುದರ ಜತೆಗೆ ಆಗಾಗ್ಗೆ ತಮ್ಮ ಕುಟುಂಬದವರು ಹಾಗೂ ಸ್ನೇಹಿತರನ್ನು ಜೊತೆಯಲ್ಲಿ ಕರೆತಂದು ಸಂತಸ ಹಂಚಿಕೊಳ್ಳುತ್ತಿದ್ದರು.

‘ಸಿದ್ದಲಿಂಗಯ್ಯನವರ ತಮ್ಮ ತಾಯಿ ನಿಧನರಾದಾಗ ಅದರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಕಾವೇರಿ ನದಿಗೆ ಬಿಟ್ಟ ಮೇಲೆ ಇಲ್ಲಿನ ಪುಸ್ತಕದ ಮನೆಗೆ ಬಂದು ಬಹಳ ಹೊತ್ತು ಇದ್ದು ಪುಸ್ತಕಗಳೊಂದಿಗೆ ಕಾಲಕಳೆದಿದ್ದರು’ ಪುಸ್ತಕ ಪ್ರೇಮಿ ಅಂಕೇಗೌಡರು ನೆನಪಿಸಿಕೊಳ್ಳುತ್ತಾರೆ.

ಪುಸ್ತಕದ ಮನೆಗೆ ಭೇಟಿ ನೀಡಿದಾಗಲೆಲ್ಲ ಅಂಕೇಗೌಡರ ಪತ್ನಿ ವಿಜಯಲಕ್ಷ್ಮಿ ಅವರು ಬಡಿಸುತ್ತಿದ್ದ ಅನ್ನ ಸಾಂಬಾರ್ ಊಟವನ್ನು ಸ್ವೀಕರಿಸಿಯೇ ಹೋಗುತ್ತಿದ್ದರು ಎಂದು ಅವರು ಅಂಕೇಗೌಡ ದಂಪತಿಗಳು ನೆನಸಿಕೊಳ್ಳುತ್ತಾರೆ.

ಕಳೆದ 3 ತಿಂಗಳ ಹಿಂದೆ ಡಾ.ಸಿದ್ದಲಿಂಗಯ್ಯನವರು ಪುಸ್ತಕದ ಮನೆಗೆ ಭೇಟಿ ನೀಡಿದ್ದರು. ಸುಮಾರು 3 ಗಂಟೆಗೂ ಹೆಚ್ಚು ಪುಸ್ತಕಗಳನ್ನು ನೋಡುತ್ತ ಕಾಲಕಳೆದಿದ್ದರು. ಅಂಕೇಗೌಡರು ಸಂಗ್ರಹಿಸಿರುವ ಲಕ್ಷಾಂತರ ಪುಸ್ತಕಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ನೆನಪುಗಳು ಪುಸ್ತಕಮನೆಯಲ್ಲಿ ಜೀವಂತವಾಗಿವೆ ಎಂದು ಅಂಕೇಗೌಡರು ನೆನಪು ಮಾಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.