ADVERTISEMENT

ಬೂಕನಕೆರೆ: ಸಮಗ್ರ ಅಭಿವೃದ್ಧಿ

ಯಡಿಯೂರಪ್ಪ ತವರು ಗ್ರಾಮಕ್ಕೆ ಎಂ.ವಿ.ವೆಂಕಟೇಶ್ ಭೇಟಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 19:56 IST
Last Updated 18 ಆಗಸ್ಟ್ 2019, 19:56 IST
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು   

ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿ ಹಾಗೂ ಗ್ರಾಮದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ದೇಶನ ನೀಡಿರುವುದರಿಂದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಬೂಕನಕೆರೆ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಗ್ರಾಮದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರೊಂದಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಬೂಕನಕೆರೆ ಗ್ರಾಮದ ಸರ್ವೆ ನಂ.80 ರಲ್ಲಿ 59 ಎಕರೆ ಜಮೀನು ಇದ್ದು, ಈ ಪೈಕಿ ಏಳೂವರೆ ಎಕರೆ ಭೂಮಿಯನ್ನು ವಿವಿಧ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆ ಡಿನೋಟಿಫಿಕೇಶನ್ ಮಾಡಬೇಕು. ಬಹುಗ್ರಾಮ ಯೋಜನೆಯಡಿ ಹೋಬಳಿಯ 28 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಯೋಜನೆಯ ಕಾಮಗಾರಿಯನ್ನು 2 ತಿಂಗಳಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಬೇಕು ಎಂದು ಸೂಚಿಸಿದರು.

ADVERTISEMENT

ಬೂಕನಕೆರೆಗೆ ಸಂಪರ್ಕ ಕಲ್ಪಿಸುವ ಚಿನಕುರಳಿ ರಸ್ತೆ, ಕೆ.ಆರ್.ಪೇಟೆ ರಸ್ತೆ, ವರಾಹನಾಥ ಕಲ್ಲಹಳ್ಳಿ ದೇವಸ್ಥಾನದ ರಸ್ತೆ, ಕೆ.ಆರ್.ಎಸ್ ರಸ್ತೆಯನ್ನು ದ್ವಿಪಥ ರಸ್ತೆಗಳನ್ನಾಗಿ ಪರಿವರ್ತಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸಬೇಕು ಎಂದು ನಿರ್ದೇಶನ ನೀಡಿದರು.

ಕೆಎಂಎಫ್ ಮಾಜಿ ನಿರ್ದೇಶಕ ಸಿಂಧುಘಟ್ಟ ಅಶೋಕ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಮೀನಾಕ್ಷಿ ಪುಟ್ಟರಾಜು, ಗ್ರಾ.ಪಂ ಅಧ್ಯಕ್ಷೆ ಪುಟ್ಟಮ್ಮ, ತಹಶೀಲ್ದಾರ್ ಎನ್.ಶಿವಮೂರ್ತಿ ಮೂರ್ತಿ, ಇಒ ವೈ.ಎನ್.ಚಂದ್ರಮೌಳಿ, ಗ್ರಾಮದ ಮುಖಂಡರಾದ ಕೆಂಚೇಗೌಡ, ಬಿ.ಎನ್.ಪುಟ್ಟರಾಜು, ಬಿ. ಜವರಾಯಿಗೌಡ, ಅಡಿಕೆ ಸ್ವಾಮಿಗೌಡ, ಮಧುಸೂದನ್, ಬೇಕರಿ ಉಮೇಶ್, ಅಂಗಡಿ ನಾಗರಾಜು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ. ನರಸಿಂಹರಾಜು ಇದ್ದರು.

ಕೆರೆ–ಕಟ್ಟೆಗೆ ನೀರು ಹರಿಸಲು ಸೂಚನೆ

ಹೋಬಳಿಯ ಹೇಮಾವತಿ ಎಡದಂಡೆ ನಾಲಾ ವ್ಯಾಪ್ತಿಯ ಕೆರೆ–ಕಟ್ಟೆಗಳಿಗೆ ಆದ್ಯತೆ ಮೇರೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಡಾ.ಎಂ.ವಿ.ವೆಂಕಟೇಶ್ ಅವರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬಸ್‌ ನಿಲ್ದಾಣ ನಿರ್ಮಿಸಲು ಆಗ್ರಹ

ಬೂಕನಕೆರೆ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ, ಸ್ಮಶಾನ ಅಭಿವೃದ್ಧಿ, ಆಸ್ಪತ್ರೆಗೆ ಅಗತ್ಯ ವೈದ್ಯರ ನೇಮಕ, ಪ್ರತ್ಯೇಕ ಪೊಲೀಸ್ ಸ್ಥಾಪನೆ, ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು, ಗ್ರಾಮವನ್ನು ಸಂಪರ್ಕಿಸುವ ಚಿನಕುರಳಿ, ಕೆ.ಆರ್.ಎಸ್, ಕೆ.ಆರ್.ಪೇಟೆ ರಸ್ತೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.