ADVERTISEMENT

ನನ್ನನ್ನು ಎಂಎಲ್‌ಸಿ ಮಾಡಲು ಬಿಎಸ್‌ವೈ ಯಾರನ್ನೂ ಕೇಳಿರಲಿಲ್ಲ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 12:23 IST
Last Updated 7 ಜೂನ್ 2022, 12:23 IST
ಬಿ.ವೈ.ವಿಜಯೇಂದ್ರ
ಬಿ.ವೈ.ವಿಜಯೇಂದ್ರ   

ಮಂಡ್ಯ: ‘ನನ್ನನ್ನು ಎಂಎಲ್‌ಸಿ ಮಾಡುವಂತೆ ಯಡಿಯೂರಪ್ಪ ಅವರು ಯಾರನ್ನೂ ಕೇಳಿರಲಿಲ್ಲ. ನಾನು ಮುಂದೆ ಏನಾಗಬೇಕು ಎಂಬುದನ್ನು ಪಕ್ಷ ತೀರ್ಮಾನ ಮಾಡಲಿದೆ, ಪಕ್ಷದ ನಿರ್ಧಾರಕ್ಕೆ ನಾನು ಸದಾ ಬದ್ಧನಾಗಿರುತ್ತೇನೆ’ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಂಗಳವಾರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಶ್ರೇಷ್ಠ ಕೆಲಸ ಮಾಡಿದ್ದಾರೆ. ಪ್ರತ್ಯೇಕ ಕೃಷಿ ಬಜೆಟ್‌, ರೈತರ ಸಾಲ ಮನ್ನಾ ಮಾಡಿದ್ದಾರೆ, ಎಲ್ಲಾ ವರ್ಗದ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ, ಕಾಂಗ್ರೆಸ್‌ ಮುಖಂಡರ ರೀತಿಯಲ್ಲಿ ಬೊಬ್ಬೊ ಒಡೆಯುವ ಕೆಲಸ ಮಾಡಿಲ್ಲ, ಒಂದು ವರ್ಗಕ್ಕೆ ಸೀಮಿತವಾದ ಯೋಜನೆ ಜಾರಿಗೊಳಿಸಿಲ್ಲ, ಕೇಂದ್ರದ ಯೋಜನೆಗೆ ತಮ್ಮ ಫೋಟೊ ಹಾಕಿಕೊಂಡಿಲ್ಲ’ ಎಂದು ಆರೋಪಿಸಿದರು.

‘ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದು ಗೊತ್ತಿದ್ದರೂ ಮುಖಂಡರು ಆತ್ಮಸಾಕ್ಷಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆತ್ಮಸಾಕ್ಷಿಯಿಂದಲೇ ನಮ್ಮ ಶಾಸಕರು ಮತ ಚಲಾವಣೆ ಮಾಡಲಿದ್ದು ನಮ್ಮ ಮೂರೂ ಅಭ್ಯರ್ಥಿಗಳು ಗೆಲ್ಲುತ್ತಾರೆ’ ಎಂದರು.

ADVERTISEMENT

‘ಆರ್‌ಎಸ್‌ಎಸ್‌ ಚಡ್ಡಿ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆ ಅವರಿಗೆ ಶೋಭೆ ತರುವುದಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯು ಸೇವೆ ಎನ್ನುವ ಯಜ್ಞದಲ್ಲಿ ತೊಡಗಿಸಿಕೊಂಡು ಸಮೃದ್ಧವಾಗಿ ಬೆಳೆದಿದೆ. ಪಾಪ, ಕಾಂಗ್ರೆಸ್‌ ಮುಖಂಡರಿಗೆ ಈ ವಿಚಾರ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಇವರಿಗೆ ಜನರು ತಕ್ಕ ಉತ್ತರ ನೀಡುತ್ತಾರೆ. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಏನೇ ತಪ್ಪಿದ್ದರೂ ಅದನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.