ADVERTISEMENT

ವಿಭಿನ್ನ ಹಿನ್ನೆಲೆಯ ಅಭ್ಯರ್ಥಿಗಳು...

ಪ್ರಣಾಳಿಕೆಯೊಂದಿಗೆ ಮತಬೇಟೆಗೆ ಇಳಿದ ಉಮೇದುವಾರರು

ಬಲ್ಲೇನಹಳ್ಳಿ ಮಂಜುನಾಥ
Published 25 ಡಿಸೆಂಬರ್ 2020, 5:54 IST
Last Updated 25 ಡಿಸೆಂಬರ್ 2020, 5:54 IST
ತಾಲ್ಲೂಕಿನ ಬೂಕನಕೆರೆಯಲ್ಲಿ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿ
ತಾಲ್ಲೂಕಿನ ಬೂಕನಕೆರೆಯಲ್ಲಿ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿ   

ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಮತದಾನಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣಾ ಕಣದಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಪ್ರಚಾರಕ್ಕೆ ಇಳಿದಿದ್ದಾರೆ.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಈ ಚುನಾವಣೆಯನ್ನು ಅಡಿಪಾಯವನ್ನಾಗಿಸಲು ಪಕ್ಷದ ಬೆಂಬಲಿಗರನ್ನು ಗ್ರಾಮಮಟ್ಟದಲ್ಲಿ ಬೆಳೆಸಲು ಅಭ್ಯರ್ಥಿಗಳು ಪ್ರತಿಷ್ಠೆಯಾಗಿ ತೆಗೆದುಕೊಂಡು ಪ್ರಚಾರದಲ್ಲಿ ನಿರತರಾಗಿದ್ದಾರೆ.

ಒಟ್ಟು 587 ಸ್ಥಾನಗಳ ಪೈಕಿ ಈಗಾಗಲೇ 48 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಈ ಪೈಕಿ ಆಯ್ಕೆಯಾದ 33 ಮಂದಿ ಬಿಜೆಪಿ ಬೆಂಬಲಿತರೆಂದು ಸಚಿವ ನಾರಾಯಣಗೌಡ ಹೇಳಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿಯಲು ಬಿಜೆಪಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದೂ ಅವರು ಈಗಾಗಲೇ ಹೇಳಿದ್ದಾರೆ.

ADVERTISEMENT

ಈ ಹೇಳಿಕೆಯನ್ನು ಒಪ್ಪದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಅವಿರೋಧ ಆಯ್ಕೆಗೊಂಡವರು ಸಚಿವರ ಭೇಟಿ ಮಾಡುವುದು ಸಹಜ. ಹಾಗೆಂದು ಅವರು ಬಿಜೆಪಿ ಬೆಂಬಲಿಗರೆಂದೇನೂ ಅಲ್ಲ ಎಂದು ಹೇಳಿದ್ದಾರೆ. ಡಿ.27ರಂದು ನಡೆಯುವ ಚುನಾವಣೆಯ ಪ್ರಚಾರ ಕಾರ್ಯ ತೀವ್ರತೆ ಪಡೆದಿದೆ.

ಕಾನೂನು ಪದವೀಧರರ ಸ್ಪರ್ಧೆ: ತಾಲ್ಲೂಕಿನ ರಂಗನಾಥಪುರ ಕ್ರಾಸ್ ಗ್ರಾಮಪಂಚಾಯಿತಿಯ ಅಪ್ಪನಹಳ್ಳಿ ಕ್ಷೇತ್ರದಿಂದ ಕಾನೂನು ಪದವೀಧರ ಅರುಣ್ ಕುಮಾರ್ ಸ್ಪರ್ಧಿಸಿದ್ದಾರೆ. 25 ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಗ್ರಾಮದೇವತೆಗಳ ದೇವಸ್ಥಾನ ಅಭಿವೃದ್ಧಿ, ಗ್ರಾಮ ಪ್ರತಿ ಬೀದಿಗಳಿಗೆ ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ಸಿಮೆಂಟ್ ರಸ್ತೆ ಮತ್ತು ಹೈಟೆಕ್ ಬಾಕ್ಸ್ ಚರಂಡಿ ನಿರ್ಮಾಣ, ಗ್ರಾಮದಲ್ಲಿ ಜಾನುವಾರು ಕೊಟ್ಟಿಗೆ ನಿರ್ಮಾಣ ಮೊದಲಾದ ಭರವಸೆಗಳೊಂದಿಗೆ ಮತ ಯಾಚಿಸುತ್ತಿದ್ದಾರೆ.

ಪತ್ರಕರ್ತ, ಬಿ.ಕಾಂ ಪದವೀಧರ ಆರ್.ಶ್ರೀನಿವಾಸ್ ಅವರೂ ಅಗ್ರಹಾರ ಬಾಚಹಳ್ಳಿಯ ಚಿಲ್ಲದಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿದ್ದು 25 ಅಂಶಗಳ ಪ್ರಣಾಳಿಕೆ ಸಿದ್ಧಪಡಿಸಿ ಮತದಾರನ ಮುಂದೆ ಇಟ್ಟಿದ್ದಾರೆ.

ರೈತಸಂಘದ ಅಭ್ಯರ್ಥಿ ಸ್ಪರ್ಧೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ವಗ್ರಾಮ ಬೂಕನಕೆರೆಯಲ್ಲಿ ರೈತಮುಖಂಡ ಬೂಕನಕೆರೆ ಗ್ರಾಮದ ಅಂಗಡಿ ನಾಗರಾಜು ಈ ಪತ್ನಿ
ಶಾಂತಮ್ಮ ಅವರನ್ನು ಕಣಕ್ಕಿಳಿಸಿದ್ದು ವಿಭಿನ್ನ ಬಗೆಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಚುನಾವಣಾ ಚಿಹ್ನೆ ತೆಂಗಿನ ಗಿಡವನ್ನು ದ್ವಿಚಕ್ರ ವಾಹನದಲ್ಲಿ ಇರಿಸಿಕೊಂಡು ಮತದಾರರನ್ನು ತಲುಪುತ್ತಿದ್ದಾರೆ. ಮತದಾರರಿಂದಲೇ ಧನಸಹಾಯ ಯಾಚಿಸುತ್ತಿದ್ದಾರೆ. ಮುಖ್ಯಮಂತ್ರಿಯ ಸ್ವಗ್ರಾಮವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಅಭಿವೃದ್ಧಿ ಕಾರ್ಯಕ್ಕಾಗಿ ಮತ ನೀಡುವಂತೆ ಮನವಿಮಾಡು ತ್ತಿದ್ದಾರೆ. ತಾಲ್ಲೂಕಿನಾದ್ಯಂತ ಪ್ರಚಾರ ತೀವ್ರಗೊಂಡಿದ್ದು, ಹಲವು ಭರವಸೆ, ಆಮಿಷಗಳನ್ನು ಒಡ್ಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.