ಕೆಆರ್‌ಎಸ್ (ಮಂಡ್ಯ): ಕನ್ನಡ ನಾಡಿನ ಜೀವನದಿ ‘ಕಾವೇರಿ’ಗೆ ಭಕ್ತಿಪೂರ್ವಕ ನಮನ ಸಲ್ಲಿಸಲು, ಐದು ದಿನ ನಡೆದ ಅದ್ದೂರಿ ‘ಕಾವೇರಿ ಆರತಿ’ಗೆ ಮಂಗಳವಾರ ‘ಮಂಗಳ’ ಹಾಡಲಾಯಿತು. ‘ಭಕುತಿಯಿಂದಲೇ ಬೆಳಗುವೆ ಆರತಿ, ಅಮ್ಮ ಕಾವೇರಿ, ಜಯ ಜಯ ಕಾವೇರಿ’ ಹಾಡು ಮೊಳಗಿತು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರ ಅಣೆಕಟ್ಟೆ ಮುಂಭಾಗದ ಕಾವೇರಿ ತಟದಲ್ಲಿ ಉತ್ತರ– ದಕ್ಷಿಣ ಭಾರತ ಶೈಲಿಯ ‘ಆರತಿ’ ಮತ್ತು ವಿಶೇಷ ವಿದ್ಯುದ್ದೀಪ ಅಲಂಕಾರದಿಂದ ಬೃಂದಾವನ ದೇದೀಪ್ಯಮಾನವಾಗಿ ಬೆಳಗಿತು. ವಾರಾಣಸಿಯಲ್ಲಿ ನಡೆಯುವ ‘ಗಂಗಾರತಿ’ ಮಾದರಿಯಲ್ಲೇ ನಡೆದ ‘ಕಾವೇರಿ ಆರತಿ’ಯೂ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯಿತು.
ಕಾಶಿಯಲ್ಲಿ ಗಂಗಾರತಿ ಮಾಡುವ ಆಗಮಿಕರ ತಂಡ ಮತ್ತು ಶ್ರೀರಂಗಪಟ್ಟಣದ ಭಾನುಪ್ರಕಾಶ್ ಶರ್ಮಾ ನೇತೃತ್ವದ ವೈದಿಕರ ತಂಡ ಒಗ್ಗೂಡಿ ‘ಆಗಮ ಶಾಸ್ತ್ರ’ದ ಪ್ರಕಾರ ಧಾರ್ಮಿಕ ವಿಧಿ ವಿಧಾನ ಮತ್ತು ಪೂಜಾ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿತು. ಸುತ್ತೂರು ಶ್ರೀ, ಸಿದ್ಧಗಂಗಾ ಶ್ರೀ, ನಿಶ್ಚಲಾನಂದನಾಥ ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಆರತಿ ಬೆಳಗಿ ಶುಭ ಕೋರಿದರು.
ಆರತಿಗೆ ಜನಸಾಗರ:
ವರ್ಷದ 365 ದಿನವೂ ಪ್ರವಾಸಿಗರನ್ನು ಆಕರ್ಷಿಸುವ ಕೆಆರ್‌ಎಸ್ ತುರುಬಿಗೆ ‘ಕಾವೇರಿ ಆರತಿ’ ಮತ್ತೊಂದು ಗರಿ ಮೂಡಿಸಿದೆ ಎಂದು ನಿಗಮದ ಅಧಿಕಾರಿಗಳು ವಿಶ್ಲೇಷಿಸುತ್ತಿದ್ದಾರೆ.
ಮೊಘಲ್ ಶೈಲಿಯ ಹಸಿರು ಉದ್ಯಾನ, ಮನರಂಜಿಸುವ ‘ಸಂಗೀತ ಕಾರಂಜಿ’ ಜತೆಗೆ ಕಾವೇರಿ ಆರತಿಯು ಇದೀಗ ಮೂರನೇ ಆಕರ್ಷಣೆಯಾಗಿದೆ. ಅಕ್ಟೋಬರ್ 2ರವರೆಗೆ ಒಟ್ಟು 7 ದಿನ ಕೆಆರ್‌ಎಸ್ ಪ್ರವೇಶ ಶುಲ್ಕ, ವಾಹನ ಟೋಲ್ ಅನ್ನು ರದ್ದುಪಡಿಸಿ, ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಸಾಗರೋಪಾದಿಯಲ್ಲಿ ಪ್ರವಾಸಿಗರು ಬೃಂದಾವನಕ್ಕೆ ಹರಿದು ಬಂದರು.
ಮನತಣಿಸಿದ ಸಂಗೀತ:
‘ಕಾವೇರಿ ಆರತಿ’ ಕಾರ್ಯಕ್ರಮದಲ್ಲಿ ಐದು ದಿನವೂ ಸಂಗೀತದ ಹೊನಲು ಹರಿಯಿತು. ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ನವೀನ್ ಸಜ್ಜು, ಎಂ.ಡಿ.ಪಲ್ಲವಿ, ಹೇಮಂತ್ ಸೇರಿದಂತೆ ಖ್ಯಾತ ಸಂಗೀತ ನಿರ್ದೇಶಕರು ಮತ್ತು ಹಿನ್ನೆಲೆ ಗಾಯಕರ ಜೊತೆ ‘ಸರಿಗಮಪ’ ಕಾರ್ಯಕ್ರಮ ಖ್ಯಾತಿಯ ಯುವ ಗಾಯಕರ ಸವಿಗಾನವು ಸಂಗೀತಾಭಿಮಾನಿಗಳ ಮನ ತಣಿಸಿತು. ಸ್ಥಳೀಯ ಜನಪದ ಕಲಾತಂಡಗಳು ಮಂಡ್ಯ ಮಣ್ಣಿನ ಸೊಗಡನ್ನು ಪ್ರವಾಸಿಗರಿಗೆ ಉಣಬಡಿಸಿದವು.
ಅಷ್ಟೇ ಅಲ್ಲ, ಬೃಂದಾವನ ಬಳಿ ನಡೆದ ಸಾಹಸ ಕ್ರೀಡೆ ಹಾಗೂ ಜಲ ಕ್ರೀಡೆಗಳು ಪ್ರವಾಸಿಗರಿಗೆ ರಸದೌತಣ ನೀಡಿದವು. ವಿಶೇಷವಾಗಿ ಮಕ್ಕಳನ್ನು ಆಕರ್ಷಿಸಲು 80 ಆಟ ಆಡಿಸಲಾಯಿತು.
‘ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮುಖಂಡತ್ವದಲ್ಲಿ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಡಳಿತ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಒಂದು ತಿಂಗಳಿನಿಂದ ನಿರಂತರವಾಗಿ ಶ್ರಮಿಸಿದ ಫಲವಾಗಿ ‘ಕಾವೇರಿ ಆರತಿ’ ಯಶಸ್ವಿಯಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಪ್ರತಿಕ್ರಿಯಿಸಿದರು.
ಕಾವೇರಿ ಆರತಿ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಅ.8ರಂದು ವಿಚಾರಣೆ ನಡೆಯುವ ಸಾಧ್ಯತೆ ಇದ್ದು ನಮಗೆ ನ್ಯಾಯ ಸಿಗುವ ವಿಶ್ವಾಸವಿದೆಕೆ.ಬೋರಯ್ಯ ಉಪಾಧ್ಯಕ್ಷ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ
ಜೈಕಾರ– ಧಿಕ್ಕಾರ ಕಾವೇರಿ ಆರತಿ
ಆರಂಭದ ದಿನ (ಸೆ.26) ಒಂದು ಕಡೆ ರೈತರ ಧಿಕ್ಕಾರ ಮತ್ತೊಂದು ಕಡೆ ಪ್ರವಾಸಿಗರ ಜೈಕಾರದ ನಡುವೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ‘ಅಣೆಕಟ್ಟೆ ಸುರಕ್ಷತಾ ಕಾಯ್ದೆ ಮತ್ತು ಹೈಕೋರ್ಟ್ ಆದೇಶವನ್ನು ಸರ್ಕಾರವೇ ಉಲ್ಲಂಘಿಸಿ ಡ್ಯಾಂಗೆ ಅಪಾಯ ತಂದೊಡ್ಡುವ ‘ಆರತಿ’ ಕಾರ್ಯಕ್ರಮ ಆಯೋಜಿಸಿದ್ದಾರೆ’ ಎಂದು ಆರೋಪಿಸಿ ರೈತ ಮುಖಂಡರು ಕಪ್ಪು ಪಟ್ಟಿ ಧರಿಸಿ ಸೌತ್ ಗೇಟ್ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಕಾರ್ಯಕ್ರಮ ಆರಂಭವಾಗುವ ವೇಳೆಗೆ ರೈತರನ್ನು ಬಂಧಿಸಿ ಪೊಲೀಸರು ಕರೆದೊಯ್ದರು. ಇದರಿಂದ ಧಿಕ್ಕಾರದ ಧ್ವನಿ ಕ್ಷೀಣಿಸಿ ಜೈಕಾರಗಳು ಝೇಂಕರಿಸಿದವು. ರೈತರ ವಿರೋಧ ಮತ್ತು ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವ ಕಾರಣ ಕಾಮಗಾರಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ ಎನ್ನಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.