ADVERTISEMENT

'ಕಾವೇರಿ ಆರತಿ' ಕಾರ್ಯಕ್ರಮಕ್ಕೆ ಬೃಂದಾವನದ ಅಂಗಳದಲ್ಲಿ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 14:16 IST
Last Updated 26 ಸೆಪ್ಟೆಂಬರ್ 2025, 14:16 IST
   

ಮಂಡ್ಯ: "ಗಂಗಾರತಿ" ಮಾದರಿಯಲ್ಲಿ ₹92 ಕೋಟಿ ವೆಚ್ಚದ "ಕಾವೇರಿ ಆರತಿ" ಕಾರ್ಯಕ್ರಮಕ್ಕೆ ಕೆ ಆರ್ ಎಸ್ ಅಣೆಕಟ್ಟೆ ಬಳಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಸಂಜೆ 7.15ಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಕಾವೇರಿ ಆರತಿ ಕುರಿತು ಕಿರುಚಿತ್ರವನ್ನು ಪ್ರದರ್ಶಿಸಲಾಯಿತು.

ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಉದ್ಯೋಗಾವಕಾಶ ಸೃಷ್ಟಿಸುವ ಈ ಆರತಿ ಕಾರ್ಯಕ್ರಮವು ಕಾವೇರಿ ನದಿಗೆ ಸಲ್ಲಿಸುವ ನಮನ ಎಂದು ಕಿರುಚಿತ್ರದ ಮೂಲಕ ಸಂದೇಶ ನೀಡಲಾಯಿತು.

ADVERTISEMENT

ವೈದಿಕ ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ 50ಕ್ಕೂ ಹೆಚ್ಚಿನ ವೈದಿಕರ ತಂಡ ಮಂತ್ರಘೋಷ ಮೊಳಗಿಸುವ ಮೂಲಕ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ನಿಶ್ಚಲಾನಂದನಾಥ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಮಧು ಜಿ ಮಾದೇಗೌಡ, ಜಿಲ್ಲಾಧಿಕಾರಿ ಕುಮಾರ, ಸಿಇಒ ಕೆ.ಆರ್.ನಂದಿನಿ, ಮನೋಹರ್ ಪ್ರಸಾದ್ ಮುಂತಾದವರು ಪಾಲ್ಗೊಂಡಿದ್ದರು.

ಕಾವೇರಿ ಮೂರ್ತಿಗೆ ಪೂಜೆ ಸಲ್ಲಿಸಿ, ದೀಪ ಬೆಳಗಿ ಕಾವೇರಿ ಆರತಿಗೆ ಚಾಲನೆ ನೀಡಿದರು.

ನಂತರ ಶಿಲಾಫಲಕವನ್ನು ಸಚಿವರು ಅನಾವರಣಗೊಳಿಸಿದರು.

ಕಾವೇರಿ ಆರತಿ ಕಾರ್ಯಕ್ರಮ ವೀಕ್ಷಿಸಲು ಹೆಚ್ಚಿನ ಸಂಖ್ಯೆ ಬರಲಿ ಎಂಬ ಉದ್ದೇಶದಿಂದ ಮಂಡ್ಯ ಜಿಲ್ಲೆಯ ತಾಲ್ಲೂಕು ಮತ್ತು ಹೋಬಳಿ ಕೇಂದ್ರಗಳಿಂದ ಉಚಿತವಾಗಿ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಕೆ ಆರ್ ಎಸ್ ಬೃಂದಾವನ ಪ್ರವೇಶ ಶುಲ್ಕ ಮತ್ತು ಟೋಲ್ ಅನ್ನು ಶುಕ್ರವಾರದಿಂದ ಅಕ್ಟೋಬರ್ 2 ರವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.