ಮಂಡ್ಯ: ಈ ಬಾರಿಯ ಶ್ರೀರಂಗಪಟ್ಟಣ ದಸರಾದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ‘ಕಾವೇರಿ ಆರತಿ’ ಕಾರ್ಯಕ್ರಮವು ಈಗ ಸಾಹಸ ಹಾಗೂ ಜಲಕ್ರೀಡೆಗಳನ್ನು ಒಳಗೊಂಡು ಪ್ರವಾಸೋದ್ಯಮಕ್ಕೆ ಹೊಸ ಹೊನಲು ತಂದಿದೆ.
ಗಂಗಾರತಿ ಮಾದರಿಯಲ್ಲಿ ತಾಯಿ ಕಾವೇರಿಗೆ ಸಲ್ಲಿಸುವ ಧಾರ್ಮಿಕ ಆರತಿ ಸಮಾರಂಭದ ಜೊತೆಗೆ, ರಿವರ್ ರ‍್ಯಾಫ್ಟಿಂಗ್ ಸೇರಿದಂತೆ ಹಲವಾರು ಜಲಕ್ರೀಡೆಗಳು ಪ್ರವಾಸಿಗರ ಮೆಚ್ಚುಗೆಗೆ ಪಾತ್ರವಾಗಿವೆ. ಸಾಹಸ ಕ್ರೀಡೆಗಳು ಯುವಕರಿಗೆ ಹೊಸ ಉತ್ಸಾಹ ನೀಡುತ್ತಿದರೆ, ಜಲಕ್ರೀಡೆಗಳು ಕುಟುಂಬ ಸಮೇತರಾಗಿ ಬರುವವರಿಗೆ ವಿಶೇಷ ಅನುಭವ ನೀಡುತ್ತಿವೆ ಎನ್ನುತ್ತಾರೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು.
‘ಕೆಆರ್‌ಎಸ್‌ನಲ್ಲಿ ನಡೆಯುತ್ತಿರುವ ಜಲಕ್ರೀಡೆಗಳಿಗೆ ಪ್ರವಾಸಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಸಾಹಸ, ಮನರಂಜನೆ ಮತ್ತು ಸಂಸ್ಕೃತಿಯ ಸಂಯೋಜನೆಯಿಂದ ಕೆಆರ್‌ಎಸ್ ಪ್ರವಾಸೋದ್ಯಮದ ಹೊಸ ಅಧ್ಯಾಯವನ್ನು ಬರೆಯುತ್ತಿದೆ’ ಎಂದು ಕಾವೇರಿ ಸಮಿತಿ ಅಧ್ಯಕ್ಷ ರಾಮ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಮಕ್ಕಳಿಗಾಗಿ ಸುಮಾರು 80 ಆಟಗಳನ್ನು ಪರಿಚಯಿಸಲಾಗಿದ್ದು, ಎಲ್ಲ ವಯಸ್ಸಿನ ಪ್ರವಾಸಿಗರು ತಮ್ಮ ಅಭಿರುಚಿ, ಆಸಕ್ತಿಗೆ ತಕ್ಕ ಅನುಭವ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ಪ್ರವಾಸಿಗರು ಹಾಗೂ ರಾಜ್ಯದ ಜನ ಈ ವಾರಾಂತ್ಯದಲ್ಲಿ ಕೆಆರ್‌ಎಸ್‌ಗೆ ಆಗಮಿಸಿ ನೂತನ ರೀತಿಯ ಈ ಆಕರ್ಷಕ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬೇಕು ಅವರು ಕೋರಿದ್ದಾರೆ.
‘ನದಿಗಳಿಗೆ ನಮನ ಸಲ್ಲಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ವಾಡಿಕೆ. ಪ್ರಕೃತಿಯನ್ನು ಪೂಜಿಸಿ ಆರಾಧಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ. ಅದೇ ರೀತಿ ಕಾವೇರಿ ಸನ್ನಿಧಿಯಲ್ಲಿ ಕಾವೇರಿಗೆ ನಮನ ಸಲ್ಲಿಸುವ ಕಾರ್ಯವನ್ನು ಸರ್ಕಾರ ಹಮ್ಮಿಕೊಂಡಿದೆ’ ಎಂದು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಸ್ವಾಮೀಜಿ ಹೇಳಿದರು.
ಕೆಆರ್‌ಎಸ್ ಬೃಂದಾವನ ಉದ್ಯಾನದಲ್ಲಿ ಭಾನುವಾರ ನಡೆದ ಕಾವೇರಿ ಆರತಿಯ ಮೂರನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ‘ನಮಗೆ ಅನ್ನ ಕೊಡುವ ಮಾತೆಗೆ ಶೃದ್ಧೆಯಿಂದ ನಮಿಸಿ ಅವಳ ಕೃಪೆಗೆ ಪಾತ್ರರಾಗುವ ಅವಕಾಶ ಸಿಕ್ಕಿದೆ. ಇದೊಂದು ಪವಿತ್ರ ಕಾರ್ಯ ಎಂದರು.
ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕರಾದ ರಮೇಶ್ ಬಾಬು ಬಂಡಿಸಿದ್ದೇಗೌಡ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರು ಹಾಗೂ ಶಾಸಕರಾದ ದಿನೇಶ್ ಗೂಳಿಗೌಡರು,
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ಡಾ. ಕುಮಾರ್, ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.
ಸೆ.26ರಿಂದ ಕೆಆರ್ ಎಸ್ ನ ಬೃಂದಾವನದಲ್ಲಿ ಸಾಂಕೇತಿಕವಾಗಿ ಆರಂಭವಾಗಿರುವ ‘ಕಾವೇರಿ ಆರತಿ’ ಕಾರ್ಯಕ್ರಮದ ಮೂರನೇ ದಿನವೂ ಜನಸಾಗರವೇ ಹರಿದುಬಂದಿತ್ತು.
ಕಾವೇರಿ ಆರತಿಯಂತಹ ಧಾರ್ಮಿಕ ಆಚರಣೆ ಜೊತೆಗೆ ಮಂಡ್ಯದ ಸೊಗಡನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಖ್ಯಾತ ಕಲಾವಿದರ ಗಾಯನ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ತಂದುಕೊಟ್ಟವು.
ಕಾವೇರಿ ಆರತಿ ಪೂಜಾ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಲೇಸರ್ ಶೋ, ಗಾಯಕಿ ಎಂ.ಡಿ.ಪಲ್ಲವಿ, ಲಕ್ಷ್ಮಿ ನಾಗರಾಜ್, ಇಂದು ನಾಗರಾಜ್ ಅವರಿಂದ ಗಾನಸುಧೆ ಕಾರ್ಯಕ್ರಮ ನಡೆಯಿತು.
ಕಾವೇರಿ ಆರತಿ ಕಾರ್ಯಕ್ರಮ ಶಾಸ್ತ್ರೋಕ್ತವಾಗಿದೆ. ಇದೊಂದು ಪುಣ್ಯದ ಕಾರ್ಯ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಬಂದಾಗ ಕಾವೇರಿ ತಾಯಿಗೆ ಪೂಜೆ ಸಲ್ಲಿಸುತ್ತೇನೆ- ಜ್ಯೋತಿ ವಿಕಾಸ್ ಅನಿವಾಸಿ ಭಾರತೀಯರು ಫೀನಿಕ್ಸ್
ಜ್ಯೋತಿ ವಿಕಾಸ ಅವರು ಕಾವೇರಿ ಆರತಿ ಹಾಗೂ ಅಭಿವೃದ್ಧಿಗಾಗಿ ಬಳಸಿಕೊಳ್ಳಲು ₹5 ಲಕ್ಷ ಕಳುಹಿಸಿ ಕೊಟ್ಟಿರುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ– ದಿನೇಶ್ ಗೂಳಿಗೌಡ ವಿಧಾನ ಪರಿಷತ್ ಸದಸ್ಯ
ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಮಾತನಾಡಿ ‘ಕಾವೇರಿ ಆರತಿಯನ್ನು ಕೆಲವರು ವಿರೋಧಿಸಿ ಕೋರ್ಟ್‌ಗೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ವಿರೋಧಿಸುವವರು ಕೂಡ ಮನಸ್ಸು ಬದಲಿಸಲಿದ್ದಾರೆ. ಕಾವೇರಿ ಆರತಿಗೆ ಎಲ್ಲರೂ ಪ್ರೀತಿಯಿಂದ ಬೆರೆಯೋಣ ಅನುಬಂಧ ಬೆಸೆಯೋಣ’ ಎಂದು ಹೇಳಿದರು.
ಗಂಗೆಯನ್ನು ಸಂತೃಪ್ತಿಗೊಳಿಸಲು ಉತ್ತರದಲ್ಲಿ ‘ಗಂಗಾ ಆರತಿ’ ಮಾಡುತ್ತಿರುವಂತೆ ಕರ್ನಾಟಕದ ಜೀವನದಿ ಕಾವೇರಿಗೆ ನಮಿಸಿ ವಂದಿಸಬೇಕು. ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಆಯೋಜಿಸಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತೀರ್ಮಾನಿಸಿದರು. ಆದರೆ ಕೆಲವರು ಇದನ್ನು ವಿರೋಧಿಸಿ ಕೋರ್ಟ್ ಗೆ ಹೋದರು ಎಂದರು. ಕುಡಿಯುವ ನೀರು ವ್ಯವಸಾಯಕ್ಕೆ ಕಾವೇರಿ ನೀರನ್ನು ಬಳಸಲಾಗುತ್ತದೆ. ತಮಿಳುನಾಡಿನ ಜನರು ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದ್ದಾಳೆ. ಪ್ರಕೃತಿಗೆ ನಮನ ಸಲ್ಲಿಸುವ ದೃಷ್ಟಿಯಿಂದ ಕಾವೇರಿ ಆರತಿ ಆಯೋಜಿಸಲಾಗಿದೆ. ಸದ್ಯ ಈ ವಿಚಾರ ಕೋರ್ಟ್‌ನಲ್ಲಿ ಇರುವುದರಿಂದ ಸಾಂಕೇತಿಕವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.