ADVERTISEMENT

ಮಂಡ್ಯ: ‘ಕಾವೇರಿ ಆರತಿ’ ನಿಲ್ಲಿಸಿ, ಕೆರೆ ಕಟ್ಟೆ ತುಂಬಿಸಿ

ಮೇಣದ ದೀಪ ಪ್ರದರ್ಶಿಸಿ, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 15:46 IST
Last Updated 9 ಜೂನ್ 2025, 15:46 IST
‘ಕಾವೇರಿ ಆರತಿ’ ನಿಲ್ಲಿಸಿ, ಕೆರೆ ಕಟ್ಟೆ ತುಂಬಿಸಿ ಎಂದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮಂಡ್ಯ ನಗರದಲ್ಲಿ ಸೋಮವಾರ ಮೇಣದ ದೀಪ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದರು 
‘ಕಾವೇರಿ ಆರತಿ’ ನಿಲ್ಲಿಸಿ, ಕೆರೆ ಕಟ್ಟೆ ತುಂಬಿಸಿ ಎಂದು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಮಂಡ್ಯ ನಗರದಲ್ಲಿ ಸೋಮವಾರ ಮೇಣದ ದೀಪ ಪ್ರದರ್ಶಿಸಿ, ಪ್ರತಿಭಟನೆ ನಡೆಸಿದರು    

ಮಂಡ್ಯ: ರಾಜ್ಯ ಸರ್ಕಾರ ಕೃಷ್ಣರಾಜ ಸಾಗರದ ಬಳಿ ಅನಗತ್ಯ ದುಂದುವೆಚ್ಚದ ‘ಕಾವೇರಿ ಆರತಿ’ ನಿಲ್ಲಿಸಿ, ಜಿಲ್ಲೆಯ ಕೆರೆ ಕಟ್ಟೆಗಳನ್ನು ತುಂಬಿಸಿ‌. ನಾಲೆಯ ಕಡೆ ಬಯಲಿಗೆ ನೀರು ಹರಿಸುವಂತೆ ಕನ್ನಡಪರ ಸಂಘಟನೆಗಳ ಮುಖಂಡರು ನಗರದಲ್ಲಿ ಸೋಮವಾರ ಮೇಣದ ದೀಪ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಜನ ಕಾವೇರಿ ಮಾತೆಯನ್ನು ನಿತ್ಯ ಸ್ಮರಿಸುತ್ತಾರೆ. ರಾಜ್ಯ ಸರ್ಕಾರ ಜನರ ಆಶಯ ಮತ್ತು ಅಗತ್ಯಗಳನ್ನು ಧಿಕ್ಕರಿಸಿ, ಉತ್ತರ ಭಾರತದ ಗಂಗಾರತಿ ಪದ್ಧತಿಯನ್ನು ತರಲು ಹೊರಟಿದೆ. ಇಂಥ ಅವೈಜ್ಞಾನಿಕ ಮತ್ತು ಪರಿಸರ ವಿರೋಧಿ ಯೋಜನೆಗಳಿಂದ ‘ಕೃಷ್ಣರಾಜ ಸಾಗರ’ ಖಾಸಗಿಯವರ ಒಡೆತನಕ್ಕೆ ಹೋಗಲಿದೆ. ಈ ಎರಡು ಯೋಜನೆಗಳ ಕ್ರಿಯಾಯೋಜನೆಯನ್ನು ಜನರ ಮುಂದಿಡದೆ ಜಿಲ್ಲೆಯ ರೈತರನ್ನು ಕತ್ತಲಲ್ಲಿಡಲಾಗಿದೆ ಎಂದು ದೂರಿದರು.

ಸಚಿವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ರೈತರು ಒಕ್ಕೊರಲಿನಿಂದ ಕಾವೇರಿ ಆರತಿಗೆ ತಮ್ಮ ಪ್ರತಿರೋಧ ತೋರಿದ್ದರು. ಈ ಕುರಿತು ರೈತರ ಅಹವಾಲನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದ್ದರು. ಆದರೂ ಕಾವೇರಿ ಆರತಿಗೆ ಸಂಬಂಧಿಸಿದ ಕಾಮಗಾರಿಯನ್ನು ಆರಂಭಿಸಿರುವುದು ರೈತರಿಗೆ ಬಗೆದ ದ್ರೋಹ ಎಂದು ಕಿಡಿಕಾರಿದರು.

ADVERTISEMENT

‘ಮೇಣದ ದೀಪದ ಪ್ರದರ್ಶನದ ಮೂಲಕ ಸಾಂಕೇತಿಕ ಎಚ್ಚರಿಕೆ ನೀಡಲಾಗಿದೆ. ಅನಿವಾರ್ಯ ಎನಿಸಿದರೆ ವರುಣಾ ಚಳವಳಿ ಮಾದರಿಯಲ್ಲಿ ಕಾವೇರಿ ಆರತಿ ಕಾಮಗಾರಿ ತಡೆಯಲು ಸಹ ಸಿದ್ಧ’ ಎಂಬ ಸಂದೇಶ ಸಾರಿದರು.

ಪ್ರತಿಭಟನಾ ಜಾಥಾದಲ್ಲಿ ಮಂಗಲ ಲಂಕೇಶ್, ಜೆ. ರಾಮಯ್ಯ, ಎಂ.ವಿ. ಕೃಷ್ಣ, ಬೂದನೂರು ಸಿದ್ದರಾಜು, ಕರುನಾಡ ಸೇವಕರು ಸಂಘಟನೆಯ ಎಂ.ಬಿ. ನಾಗಣ್ಣಗೌಡ, ಬೂದನೂರು ಮನು, ಕರ್ನಾಟಕ ರಕ್ಷಣಾ ವೇದಿಕೆಯ ಎಚ್.ಡಿ. ಜಯರಾಂ, ಮುದ್ದೇಗೌಡ, ವೆಂಕಟೇಶ್ (ಆಟೊ), ಆಲಕೆರೆ ಸಂಜು ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.