ADVERTISEMENT

ಕಾವೇರಿ ನೀರು | ಮಂಡ್ಯಕ್ಕೆ ಕೊರತೆ, ತಮಿಳುನಾಡಿಗೆ ‘ಹೆಚ್ಚುವರಿ’!

ಕೆರೆ– ಕಟ್ಟೆ ತುಂಬಿಸಲು ಕ್ರಮವಿಲ್ಲ; ನಾಲೆಯ ಕೊನೆ ಭಾಗಕ್ಕೆ ತಲುಪದ ನೀರು

ಸಿದ್ದು ಆರ್.ಜಿ.ಹಳ್ಳಿ
Published 1 ಆಗಸ್ಟ್ 2025, 2:31 IST
Last Updated 1 ಆಗಸ್ಟ್ 2025, 2:31 IST
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ ನೀರು ಹರಿಸುತ್ತಿರುವ ದೃಶ್ಯ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ ನೀರು ಹರಿಸುತ್ತಿರುವ ದೃಶ್ಯ   

ಮಂಡ್ಯ: ಕಾವೇರಿ ನದಿ ನೀರಿನಲ್ಲಿ ತಮಿಳುನಾಡಿಗೆ ಸುಪ್ರೀಂ ಕೋರ್ಟ್‌ ಹಂಚಿಕೆ ಮಾಡಿದ ಪ್ರಮಾಣಕ್ಕಿಂತ 802 ಟಿಎಂಸಿ ಅಡಿ ಹೆಚ್ಚುವರಿ ನೀರು ಕಳೆದ 10 ವರ್ಷಗಳಲ್ಲಿ ಹರಿದು ಹೋಗಿದೆ. ಆದರೆ, ಜಿಲ್ಲೆಯಲ್ಲಿ ಕೆರೆ– ಕಟ್ಟೆ ತುಂಬಿಸಲು ಹಾಗೂ ನಾಲೆಯ ಕೊನೆ ಭಾಗಕ್ಕೆ ನೀರು ತಲುಪುವಂತೆ ಮಾಡುವಲ್ಲಿ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದು ಇಲ್ಲಿನ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

2018ರ ಸುಪ್ರಿಂ ಕೋರ್ಟ್‌ ತೀರ್ಪಿನ ಪ್ರಕಾರ ಪ್ರತಿವರ್ಷ ತಮಿಳುನಾಡಿಗೆ 177.25 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ. 2015ರಿಂದ 2025ರವರೆಗೆ ಒಟ್ಟು 1772 ಟಿಎಂಸಿ ಅಡಿ ನೀರು ಹರಿಸಬೇಕಿತ್ತು. ಆದರೆ, ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿ ಕಳೆದ 10 ವರ್ಷಗಳಲ್ಲಿ ದಾಖಲಾದ ನೀರಿನ ಒಟ್ಟು ಪ್ರಮಾಣ 2,574 ಟಿಎಂಸಿ ಅಡಿ. 

ಕಳೆದ ದಶಕದಲ್ಲಿ 6 ವರ್ಷ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಅದರಲ್ಲಿ 2022–23ನೇ ಸಾಲಿನಲ್ಲಿ ಬರೋಬ್ಬರಿ 667 ಟಿಎಂಸಿ ಅಡಿ ನೀರು ಹರಿದು ಹೋಗಿದ್ದು, ಅತ್ಯಧಿಕ ನೀರಿನ ಪ್ರಮಾಣ ಎನಿಸಿದೆ. 2018–19ರಲ್ಲೂ 404 ಟಿಎಂಸಿ ಅಡಿ ನೀರು ತಮಿಳುನಾಡು ಪಾಲಾಗಿದೆ. 

ADVERTISEMENT

2015, 2016, 2017 ಹಾಗೂ 2023ನೇ ಸಾಲಿನಲ್ಲಿ ತಮಿಳುನಾಡಿಗೆ ನಿಗದಿಪಡಿಸಿದ ಪ್ರಮಾಣಕ್ಕಿಂತ ಕಡಿಮೆ ನೀರು ಹೋಗಿದೆ. ಮಳೆಯ ಕೊರತೆಯಿಂದ ಜಲಾಶಯಗಳು ಭರ್ತಿಯಾಗದೆ ಆ ವರ್ಷಗಳಲ್ಲಿ ನೀರಿನ ಅಭಾವ ತಲೆದೋರಿತ್ತು. 

ಜೂನ್‌ನಲ್ಲೇ ಭರ್ತಿ: ಈ ಬಾರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ, ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜಸಾಗರ ಅಣೆಕಟ್ಟೆ ನಿರ್ಮಾಣವಾದ 93 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೂನ್‌ನಲ್ಲೇ ಭರ್ತಿಯಾಗಿ ದಾಖಲೆ ಬರೆದಿದೆ. ಪ್ರಸಕ್ತ ವರ್ಷ ಜೂನ್‌ನಲ್ಲಿ ನಿಗದಿಪಡಿಸಿದ 9.19 ಟಿಎಂಸಿ ಅಡಿ ಬದಲಾಗಿ 42 ಟಿಎಂಸಿ ಅಡಿ ನೀರು ಮತ್ತು ಜುಲೈ ತಿಂಗಳಲ್ಲಿ ನಿಗದಿಪಡಿಸಿದ 31.24 ಟಿಎಂಸಿ ಅಡಿ ಬದಲಾಗಿ 56 ಟಿಎಂಸಿ ಅಡಿ ನೀರು ಬಿಳಿಗುಂಡ್ಲು ಜಲಮಾಪನ ಕೇಂದ್ರದಲ್ಲಿ ದಾಖಲಾಗಿದೆ. ಅಂದರೆ, ಎರಡು ತಿಂಗಳಲ್ಲೂ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. 

ಮೆಟ್ಟೂರು ಡ್ಯಾಂ ಭರ್ತಿ: ತಮಿಳುನಾಡಿನ ಮೆಟ್ಟೂರು ಡ್ಯಾಂ 93 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದ್ದು, ಅದು ಕೂಡ ಜೂನ್‌ನಲ್ಲೇ ಭರ್ತಿಯಾಗಿದೆ. ಈ ಜಲಾಶಯದಿಂದಲೂ ಹೆಚ್ಚುವರಿ ನೀರನ್ನು ಹೊರಬಿಡುತ್ತಿದ್ದು, ಆ ನೀರು ಬಂಗಾಳಕೊಲ್ಲಿಯನ್ನು ಸೇರುತ್ತಿದೆ. 

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೆಸರೆರಚಾಟದಿಂದ ಮೇಕೆದಾಟು ಯೋಜನೆ ನನೆಗುದಿಗೆ ಬಿದ್ದಿದೆ. ತಮಿಳುನಾಡಿಗೆ ಹರಿದು ಹೋಗುವ ಹೆಚ್ಚುವರಿ ನೀರನ್ನು ಸಂಗ್ರಹಿಸಿದರೆ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತಿತ್ತು. ಮಳವಳ್ಳಿ ಮತ್ತು ಮದ್ದೂರು ಕೊನೇ ಭಾಗದ ರೈತರಿಗೆ ನೀರು ಲಭ್ಯವಾಗುತ್ತಿತ್ತು’ ಎಂದು ರೈತ ಮುಖಂಡರಾದ ಎಂ.ಎ.ಚಿಕ್ಕರಾಜು, ಶಿವಲಿಂಗಯ್ಯ, ಮಹೇಶ್‌ ದೂರಿದರು.

ಸುನಂದಾ ಜಯರಾಂ

ಮೇಕೆದಾಟು ಯೋಜನೆ ನನೆಗುದಿಗೆ ಕೆರೆ–ಕಟ್ಟೆಗಳ ಹೂಳು ತೆಗೆಸಲು ಆಗ್ರಹ  ಹೆಚ್ಚುವರಿ ನೀರು ಸಮುದ್ರದ ಪಾಲು

ರೈತರಿಗೆ ದ್ರೋಹ’ ‘ಕೆರೆ–ಕಟ್ಟೆಗಳ ಹೂಳು ತೆಗೆಸಿ ನೀರು ಸಂಗ್ರಹಿಸಿದ್ದರೆ ರೈತರ ಬದುಕು ಹಸನಾಗುತ್ತಿತ್ತು. 18 ಲಕ್ಷ ಎಕರೆ ನೀರಾವರಿ ಪ್ರದೇಶದ ಗುರಿಗೆ ಈಗ 11 ಲಕ್ಷ ಎಕರೆ ಮಾತ್ರ ನೀರಾವರಿಯಾಗಿದೆ. ಇನ್ನೂ 7 ಲಕ್ಷ ಎಕರೆಗೆ ನೀರು ಉಣಿಸಬಹುದಿತ್ತು. ತಮಿಳುನಾಡಿಗೆ ಹೆಚ್ಚುವರಿ ನೀರು ಹರಿದು ಹೋಗಿರುವುದು ಹೆಮ್ಮೆ ಪಡಬೇಕಾದ ವಿಷಯವಲ್ಲ ರೈತರಿಗೆ ಮಾಡಿದ ದ್ರೋಹ’ ಎಂದು ರೈತ ನಾಯಕಿ ಸುನಂದಾ ಜಯರಾಂ ಆರೋಪಿಸಿದರು.

‘ರೈತರಿಗೆ ಮಾಡಿದ ದ್ರೋಹ’ ‘ಕೆರೆ–ಕಟ್ಟೆಗಳ ಹೂಳು ತೆಗೆಸಿ ನೀರು ಸಂಗ್ರಹಿಸಿದ್ದರೆ ರೈತರ ಬದುಕು ಹಸನಾಗುತ್ತಿತ್ತು. 18 ಲಕ್ಷ ಎಕರೆ ನೀರಾವರಿ ಪ್ರದೇಶದ ಗುರಿಗೆ ಈಗ 11 ಲಕ್ಷ ಎಕರೆ ಮಾತ್ರ ನೀರಾವರಿಯಾಗಿದೆ. ಇನ್ನೂ 7 ಲಕ್ಷ ಎಕರೆಗೆ ನೀರು ಉಣಿಸಬಹುದಿತ್ತು. ತಮಿಳುನಾಡಿಗೆ ಹೆಚ್ಚುವರಿ ನೀರು ಹರಿದು ಹೋಗಿರುವುದು ಹೆಮ್ಮೆ ಪಡಬೇಕಾದ ವಿಷಯವಲ್ಲ ರೈತರಿಗೆ ಮಾಡಿದ ದ್ರೋಹ’ ಎಂದು ರೈತ ನಾಯಕಿ ಸುನಂದಾ ಜಯರಾಂ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.