ADVERTISEMENT

ಮಂಡ್ಯ | ಕಾವೇರಿ ಆರತಿ ಕಾರ್ಯಕ್ರಮಕ್ಕೆ ರೈತಸಂಘ ಪ್ರಬಲ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 13:25 IST
Last Updated 26 ಏಪ್ರಿಲ್ 2025, 13:25 IST
<div class="paragraphs"><p>ರೈತ ನಾಯಕಿ ಸುನಂದಾ ಜಯರಾಂ</p></div>

ರೈತ ನಾಯಕಿ ಸುನಂದಾ ಜಯರಾಂ

   

ಮಂಡ್ಯ: ‘ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆ ಬಳಿ ನಡೆಯಲಿರುವ ‘ಕಾವೇರಿ ಆರತಿ’ ಮತ್ತು ‘ಬೃಂದಾವನ ಉನ್ನತೀಕರಣ’ (ಅಮ್ಯೂಸ್‌ಮೆಂಟ್‌ ಪಾರ್ಕ್‌) ಯೋಜನೆಗಳು ಜಿಲ್ಲೆಗೆ ಮಾರಕ ಮತ್ತು ದಿವಾಳಿ ಮಾಡುವ ಕಾರ್ಯಕ್ರಮಗಳಾಗಿವೆ’ ಎಂದು ರೈತ ನಾಯಕಿ ಸುನಂದಾ ಜಯರಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಜಿಲ್ಲೆಗೆ ಕೆಆರ್‌ಎಸ್‌ ಅಣೆಕಟ್ಟೆಯು ನಾಲ್ವಡಿ ಅವರ ಕೊಡುಗೆಯಾಗಿದ್ದು, ಜಿಲ್ಲೆಯ ಜನರಿಗೆ ಜೀವನಾಡಿಯಾಗಿದೆ. ಶತಮಾನದ ಅಂಚಿನಲ್ಲಿರುವ ಅಣೆಕಟ್ಟೆಯು ಸೂಕ್ಷ್ಮ ಮತ್ತು ನಿಷೇಧಿತ ಪ್ರದೇಶವಾಗಿದೆ. ಅಣೆಕಟ್ಟೆಗೆ ಅಪಾಯವನ್ನುಂಟು ಮಾಡುವ ಯೋಜನೆಗಳನ್ನು ರೂಪಿಸಬಾರದು. ಪ್ರವಾಸೋದ್ಯಮದ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆ ಮತ್ತು ಖಾಸಗಿ ವ್ಯವಹಾರಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಬೆಂಗಳೂರು ನಗರಕ್ಕೆ ನೀರು ಪೂರೈಸುವ ಕಾವೇರಿ 6ನೇ ಹಂತದ ಕುಡಿಯುವ ನೀರಿನ ಯೋಜನೆಯು ಭವಿಷ್ಯದಲ್ಲಿ ಮಂಡ್ಯ ಜಿಲ್ಲೆಯನ್ನು ಬರಡು ಮಾಡುವ ಮತ್ತು ಜಿಲ್ಲೆಯ ಜನರಿಗೆ ಮಣ್ಣು ಮುಕ್ಕಿಸುವ ಹುನ್ನಾರವಾಗಿದೆ ಎಂದು ಕಿಡಿಕಾರಿದ್ದಾರೆ.

ಸ್ಥಳೀಯ ಗ್ರಾಮ ಪಂಚಾಯಿತಿಗಳು ಕೂಡ ಈ ಯೋಜನೆಗಳನ್ನು ವಿರೋಧಿಸುವ ನಿರ್ಣಯಗಳನ್ನು ಕೈಗೊಂಡಿವೆ ಎಂದು ತಿಳಿಸಿದ್ದಾರೆ.

ದುಂದು ವೆಚ್ಚ:

‘ರೈತರಿಗೆ ನಿಜವಾಗಲೂ ಬೇಕಾಗಿರುವುದು ನೀರು. ಮದ್ದೂರು ಮತ್ತು ಮಳವಳ್ಳಿ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಅಣೆಕಟ್ಟೆಗೆ ಧಕ್ಕೆ ತರುವ ಯೋಜನೆ ಜಾರಿಗೊಳಿಸಲು ಮುಂದಾಗಿರುವುದು ಸರಿಯಲ್ಲ’ ಎಂದು ರೈತ ಮುಖಂಡ ಇಂಡುವಾಳು ಚಂದ್ರಶೇಖರ್‌ ಕಿಡಿಕಾರಿದ್ದಾರೆ. 

ಸಾರ್ವಜನಿಕರ ತೆರಿಗೆ ಹಣವನ್ನು ಬಳಸಿ, ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಈ ಯೋಜನೆಗಳನ್ನು ತರುವುದರಿಂದ ಜಿಲ್ಲೆಯ ರೈತರಿಗೆ ಸಿಗುವ ಪ್ರಯೋಜನವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ಮೇ 6ರಂದು ಪ್ರತಿಭಟನೆ:

‘ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿ ಅಮ್ಯೂಸ್‌ಮೆಂಟ್‌ ಪಾರ್ಕ್‌ ಮಾಡಲು ಹೊರಟಿರುವುದು ಯಾವ ಉದ್ದೇಶಕ್ಕಾಗಿ ಎಂಬುದನ್ನು ವಿರೋಧಿಸಿ ಮೇ 6ರಂದು ಎಲ್ಲ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಸರ್ಕಾರಿ ಯೋಜನೆ ಕೈಬಿಡದಿದ್ದರೆ ಹಂತ–ಹಂತವಾಗಿ ಪ್ರತಿಭಟನೆ ತೀವ್ರಗೊಳಿಸಲಾಗುವುದು’ ಎಂದು ರೈತ ಸಂಘದ ಮಾಧ್ಯಮ ಕಾರ್ಯದರ್ಶಿ ಸೋ.ಸಿ. ಪ್ರಕಾಶ್ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.