ADVERTISEMENT

ಅಂತೂ ಬಂತು ಮಳವಳ್ಳಿಗೆ ಸಿ.ಸಿ ಟಿವಿ ಕಣ್ಗಾವಲು

ಮಳವಳ್ಳಿ: ರಾಜ್ಯದಲ್ಲಿಯೇ ಅತಿಹೆಚ್ಚು ಕ್ಯಾಮೆರಾ ಅಳವಡಿಕೆ, ಅಪರಾಧ ಚಟುವಟಿಕೆಗಳಿಗೆ ಕಡಿವಾಣ

ಟಿ.ಕೆ.ಲಿಂಗರಾಜು
Published 13 ಜುಲೈ 2025, 2:48 IST
Last Updated 13 ಜುಲೈ 2025, 2:48 IST
ಮಳವಳ್ಳಿ ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಸಿಸಿ ಟಿವಿ ಕ್ಯಾಮೆರಾಗಳ ಹಾಗೂ ಟ್ರಾಫಿಕ್ ಸಿಗ್ನಲ್ ಗಳ ಅಳವಡಿಕೆ ಕಾರ್ಯವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ವೀಕ್ಷಿಸಿದರು. ಡಿವೈಎಸ್ಪಿ ವಿ.ಕೃಷ್ಣಪ್ಪ, ಸಿಪಿಐ ಎಂ.ರವಿಕುಮಾರ್ ಪಾಲ್ಗೊಂಡಿದ್ದರು
ಮಳವಳ್ಳಿ ಪಟ್ಟಣದ ಅನಂತ್ ರಾಂ ವೃತ್ತದ ಬಳಿ ಸಿಸಿ ಟಿವಿ ಕ್ಯಾಮೆರಾಗಳ ಹಾಗೂ ಟ್ರಾಫಿಕ್ ಸಿಗ್ನಲ್ ಗಳ ಅಳವಡಿಕೆ ಕಾರ್ಯವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ವೀಕ್ಷಿಸಿದರು. ಡಿವೈಎಸ್ಪಿ ವಿ.ಕೃಷ್ಣಪ್ಪ, ಸಿಪಿಐ ಎಂ.ರವಿಕುಮಾರ್ ಪಾಲ್ಗೊಂಡಿದ್ದರು   

ಮಳವಳ್ಳಿ: ಅಪರಾಧ ಕೃತ್ಯಗಳ ತಡೆ, ರಸ್ತೆ ಸಂಚಾರ ನಿಯಮ ಪಾಲನೆ ಮತ್ತು ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವ ಪ್ರವೃತ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಟ್ಟಣದ ವ್ಯಾಪ್ತಿಗೆ 61 ಸಿ.ಸಿ ಟಿವಿ ಕ್ಯಾಮೆರಾ ಅವಳಡಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ಪಟ್ಟಣದಲ್ಲಿ ಹಗಲು-ರಾತ್ರಿ ಎನ್ನದೇ ಅನೇಕ ಅಪರಾಧ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದವು. ಹೀಗಾಗಿ ಪಟ್ಟಣದ ಪ್ರಮುಖ ವೃತ್ತಗಳು, ಜನನಿಬಿಡ ಪ್ರದೇಶಗಳಲ್ಲಿ ಇದೀಗ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅವರ ಇಚ್ಛಾಶಕ್ತಿಯಿಂದ ತಾಲ್ಲೂಕಿನಲ್ಲಿ 128 ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

ಪಟ್ಟಣದ ಜನದಟ್ಟಣೆಯ ಸಾರಿಗೆ ಬಸ್ ನಿಲ್ದಾಣ, ಕುಪ್ಪಸ್ವಾಮಿ ವೃತ್ತ, ಸುಲ್ತಾನ್ ರಸ್ತೆ, ಮದ್ದೂರು ರಸ್ತೆ, ಪಟ್ಟಲದಮ್ಮನ ದೇವಸ್ಥಾನ, ರಾವಣಿ-ಪೂರಿಗಾಲಿ ರಸ್ತೆ, ಅನಿತಾ ಕಾನ್ವೆಂಟ್, ತಾಲ್ಲೂಕು ಪಂಚಾಯಿತಿ, ಡಾ.ಬಿ.ಆರ್.ಅಂಬೇಡ್ಕರ್ ಭವನ ಸೇರಿದಂತೆ 24 ಕಡೆ 61 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅನಂತ್ ವೃತ್ತ ಸೇರಿದಂತೆ ಐದು ಪ್ರಮುಖ ಸ್ಥಳಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಎಎನ್ಪಿಆರ್ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ADVERTISEMENT

ಎಲ್ಲ ಕ್ಯಾಮೆರಾಗಳ ಎಲ್ಇಡಿ ಡಿಸ್‌ಪ್ಲೆ ಟಿವಿಗಳನ್ನು ಪೊಲೀಸ್ ಠಾಣೆಯ ನಿಯಂತ್ರಣ ಕೊಠಡಿಯಲ್ಲಿ ಅಳವಡಿಸಲಾಗುತ್ತಿದೆ. ವಿಶ್ವೇಶ್ವರಯ್ಯ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ-209ರ ಹಾಯ್ದು ಹೋಗಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ವಾಹನಗಳ ವೇಗ ನಿಯಂತ್ರಣ, ಕಾನೂನು ಉಲ್ಲಂಘನೆಗಳನ್ನು ತಡೆಯಲು ಹಾಗೂ ಕಳ್ಳತನ ಪ್ರಕರಣಗಳನ್ನು ಭೇದಿಸಲು ನೆರವಾಗಲಿದೆ. ಸಿಸಿ ಟಿವಿ ಕ್ಯಾಮೆರಾಗಳ ನಿರ್ವಹಣೆಯನ್ನು ಪೊಲೀಸ್ ಇಲಾಖೆ ಮಾಡಲಿದೆ.

ಮಳವಳ್ಳಿಯ ಇತರೆ ಪೊಲೀಸ್ ಠಾಣೆಗಳಾದ ಹಲಗೂರು ಠಾಣೆ-24, ಕಿರುಗಾವಲು ಠಾಣೆ-12, ಬೆಳಕವಾಡಿ ಠಾಣೆ-23, ಗ್ರಾಮಾಂತರ ಠಾಣೆ-8 ಸೇರಿದಂತೆ 67 ಸಿಸಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದ್ದು, ಈಗಾಗಲೇ ಅಳವಡಿಕೆ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ.

ಸಿಸಿ ಕ್ಯಾಮೆರಾ ಮತ್ತು ಟ್ರಾಫಿಕ್ ಸಿಗ್ನಲ್ ಅಳವಡಿಕೆ ಇಲ್ಲದೇ ಎದುರಾಗುತ್ತಿದ್ದ ಸಮಸ್ಯೆಗಳ ನಿವಾರಣೆಗೆ 110 ಸಿಸಿಟಿವಿ ಕ್ಯಾಮೆರಾ ಹಾಗೂ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ವ್ಯವಸ್ಥೆ ಮಾಡಲಾಗಿದೆ
ಪಿ.ಎಂ.ನರೇಂದ್ರಸ್ವಾಮಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ
ಅಪರಾಧ ಚಟುವಟಿಕೆಗಳ ನಿಯಂತ್ರಣ ಹಾಗೂ ತನಿಖೆಗೆ ಸಹಕಾರಿಯಾಗುವಂತೆ ಸಿಸಿ ಟಿವಿ ಕ್ಯಾಮೆರಾಗಳ ಅವಶ್ಯಕತೆ ಇತ್ತು. ತಾಲ್ಲೂಕಿನಲ್ಲಿ 128 ಕ್ಯಾಮೆರಾ ಕಣ್ಗಾವಲು ಅಳವಡಿಸಲಾಗಿದೆ
ಸಿ.ಇ.ತಿಮ್ಮಯ್ಯ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 

ಸಿಗ್ನಲ್ ಲೈಟ್ ಕಂಬಗಳ ಅಳವಡಿಕೆ  

ಪಟ್ಟಣದ ಹೃದಯ ಭಾಗವಾಗಿರುವ ಅನಂತ್ ರಾಂ ವೃತ್ತದ ಬಳಿ ಕೆಶಿಫ್ ಕಾಮಗಾರಿ ವೇಳೆ ತೆರವುಗೊಳಿಸಿದ ಟ್ರಾಫಿಕ್ ಸಿಗ್ನಲ್ ಕಂಬಗಳನ್ನು ನಂತರ ದಿನಗಳಲ್ಲಿ ಅಳವಡಿಸಿರಲಿಲ್ಲ ಸಮಸ್ಯೆ ಬಗೆಹರಿಸುವಂತೆ ಹಲವಾರು ಬಾರಿ ಪೊಲೀಸ್ ಇಲಾಖೆ ಕೆಶಿಫ್ ಗೆ ಪತ್ರ ಬರೆದಿತ್ತು. ಇದೀಗ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪ್ರಯತ್ನದಿಂದ ಸುಮಾರು ₹20 ಲಕ್ಷ ವೆಚ್ಚದ ಸಿಗ್ನಲ್ ಲೈಟ್ ಅಳವಡಿಕೆ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಇನ್ನೂ ಕೆಲವೇ ದಿನಗಳಲ್ಲಿ ಸಂಚಾರ ನಿಯಂತ್ರಣ ಚಾಲನೆಗೊಳ್ಳಲಿದೆ. ಈ ಬಗ್ಗೆ ಹಲವಾರು ಬಾರಿ ಪ್ರಜಾವಾಣಿ ವಿಶೇಷ ವರದಿಗಳ ಮೂಲಕ ಶಾಸಕರ ಹಾಗೂ ಪೊಲೀಸ್ ಇಲಾಖೆಯ ಗಮನ ಸೆಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.