ADVERTISEMENT

ಕಲೆ, ಸಾಹಿತ್ಯ, ಸಂಗೀತಾಸಕ್ತಿ ಜಾಗೃತಗೊಳ್ಳಲಿ: ಡಾ.ನಾಗೇಶ್‌

ಸೆರ್ಟಿಫಿಕೇಟ್‌ ಕೋರ್ಸ್‌ಗಳಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 13:03 IST
Last Updated 6 ಆಗಸ್ಟ್ 2020, 13:03 IST
ಸಂಗೀತ ವಿವಿ, ಕರ್ನಾಟಕ ಸಂಘ ಆಶ್ರಯದಲ್ಲಿ ನಡೆಯಲಿರುವ ಪ್ರದರ್ಶನ ಕಲೆಗಳ ಸೆರ್ಟಿಫಿಕೇಟ್‌ ಕೋರ್ಸ್‌ಗೆ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಉದ್ಘಾಟಿಸಿದರು
ಸಂಗೀತ ವಿವಿ, ಕರ್ನಾಟಕ ಸಂಘ ಆಶ್ರಯದಲ್ಲಿ ನಡೆಯಲಿರುವ ಪ್ರದರ್ಶನ ಕಲೆಗಳ ಸೆರ್ಟಿಫಿಕೇಟ್‌ ಕೋರ್ಸ್‌ಗೆ ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಉದ್ಘಾಟಿಸಿದರು   

ಮಂಡ್ಯ: ‘ಧಾವಂತದ ಬದುಕಿನಲ್ಲಿ ಕಲೆ, ಸಾಹಿತ್ಯ, ಸಂಗೀತದ ಮೇಲಿನ ಪ್ರೀತಿ ತಾತ್ಕಾಲಿಕವಾಗಿ ಮರೆಯಾಗಬಹುದು. ಆದರೆ ನಿತ್ಯ ಜೀವನದಲ್ಲಿ ಕಲೆಗಳ ಮೇಲಿನ ಆಸಕ್ತಿ ಸದಾ ಜಾಗೃತವಾಗಿರಬೇಕು’ ಎಂದು ಗಂಗೂಬಾಯಿ ಹಾನಗಲ್‌ ಸಂಗೀತ ಹಾಗೂ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ನಾಗೇಶ್‌ ವಿ ಬೆಟ್ಟಕೋಟೆ ಹೇಳಿದರು.

ಸಂಗೀತ ವಿವಿ, ಕರ್ನಾಟಕ ಸಂಘ ಆಶ್ರಯದಲ್ಲಿ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಬುಧವಾರ ನಡೆದ ಪ್ರದರ್ಶನ ಕಲೆಗಳ ಸೆರ್ಟಿಫಿಕೇಟ್‌ ಕೋರ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ ಅವರು ಮಾತನಾಡಿದರು.

‘ಇಡೀ ದೇಶದಲ್ಲಿ ಸಂಗೀತ ಹಾಗೂ ಪ್ರದರ್ಶನ ಕಲೆಗಳಿಗಾಗಿ ಸ್ಥಾಪಿತವಾದ ವಿಶ್ವವಿದ್ಯಾಲಯಗಳಲ್ಲಿ ಗಂಗೂಬಾಯಿ ಹಾನಗಲ್‌ ವಿವಿ 2ನೇ ವಿವಿಯಾಗಿದೆ. ಛತ್ತೀಸ್‌ಗಡದಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಕಲೆ, ಸಾಹಿತ್ಯ, ಸಂಗೀತಗಳ ಮೇಲಿರುವ ಆಸಕ್ತಿಯನ್ನು ಜಾಗೃತಿಗೊಳಿಸುವ ಕೆಲಸವನ್ನು ವಿಶ್ವವಿದ್ಯಾಲಯ ಮಾಡುತ್ತಿದೆ’ ಎಂದರು.

ADVERTISEMENT

‘ಕರ್ನಾಟಕ ಸಂಘದ ಸಹಯೋಗದಲ್ಲಿ ವಿಶ್ವವಿದ್ಯಾಲಯ ಸೆರ್ಟಿಫಿಕೇಟ್‌ ಕೋರ್ಸ್‌ ಆರಂಭಿಸುತ್ತಿರುವುದು ಸಂತಸ ತಂದಿದೆ. ಸಂಘ ಆರಂಭಿಸುವ ಕೋರ್ಸ್‌ಗಳಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಕಲ್ಪಿಸಲಾಗುವುದು. ವಿವಿಯಿಂದ ಶಿಕ್ಷಕರನ್ನು ಕಳುಹಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ತರಗತಿ ನಡೆಸಲು ಬೇಕಾದ ಆರ್ಥಿಕ ಸಹಾಯ ಕಲ್ಪಿಸಲಾಗುವುದು’ ಎಂದರು.

ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ ‘ಕೇಳುಗರ ಮನಸ್ಸನ್ನು ಮುದಗೊಳಿಸುವ ಶಕ್ತಿ ಸಂಗೀತಕ್ಕಿದೆ. ಪ್ರಾಚೀನ ಕಾಲದಿಂದಲೂ ಸಂಗೀತ ವ್ಯಕ್ತಿಯ ವ್ಯಕ್ತಿತ್ವ ವಿಕಸನದ ಮಾಧ್ಯಮವಾಗಿದೆ. ಮನುಷ್ಯ ತನ್ನ ಮಾನಸಿಕ ಒತ್ತಡದಿಂದ ಹೊರಬರಲು ಸಂಗೀತ ಉತ್ತಮ ಔಷಧಿಯಾಗಿದೆ. ಧ್ಯಾನ, ಏಕಾಗ್ರತೆ, ಸಂತಸ ಕಂಡುಕೊಳ್ಳಲು ಸಂಗೀತ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.

‘ವಿದುಷಿ ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿ 10 ವರ್ಷಗಳ ಹಿಂದೆ ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು. ಸಂಗೀತದ ಜೊತೆಗೆ ಹಲವು ಪ್ರದರ್ಶನ ಕಲೆಗಳಿಗೆ ಮರುಜೀವ ನೀಡಲು ವಿವಿ ಶ್ರಮಿಸುತ್ತಿದೆ. ಆ ಕಾರ್ಯದಲ್ಲಿ ಕರ್ನಾಟಕ ಸಂಘಟನೆ ಕೂಡ ಸಹಕಾರ ನೀಡುತ್ತಿದೆ. ಸಮಾಜದಲ್ಲಿ ಜನಪದ ಕಲಾ ಪ್ರಕಾರಗಳು ಜೀವಂತವಾಗಿವೆ. ಮಂಡ್ಯ ಜಿಲ್ಲೆ ಜನಪದ ಕಲೆಗಳ ತವರಾಗಿದೆ’ ಎಂದರು.

ಶಾಸಕ ಎಂ.ಶ್ರೀನಿವಾಸ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಜಾನಪದ ತಜ್ಞ ಡಾ.ಚಂದ್ರು ಕಾಳೇನಹಳ್ಳಿ, ರಂಗ ನಿರ್ದೇಶಕ ಪ್ರಮೋದ್ ಶಿಗ್ಗಾಂವ್, ವಿದ್ವಾನ್ ಎಸ್. ಸುದರ್ಶನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.