ADVERTISEMENT

ಅಧ್ಯಕ್ಷೆ ನಿರ್ಮಲಾ, ಉಪಾಧ್ಯಕ್ಷ ಪ್ರಕಾಶ್‌

ಶ್ರೀರಂಗಪಟ್ಟಣ ಪುರಸಭೆ ಗದ್ದುಗೆ ಹಿಡಿದ ಜೆಡಿಎಸ್‌: ಕಾರ್ಯಕರ್ತರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 2:08 IST
Last Updated 7 ನವೆಂಬರ್ 2020, 2:08 IST
ಶ್ರೀರಂಗಪಟ್ಟಣ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್‌ನ ಪಿ. ನಿರ್ಮಲ ಮತ್ತು ಎಸ್‌. ಪ್ರಕಾಶ್‌ ಅವರನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿನಂದಿಸಿದರು
ಶ್ರೀರಂಗಪಟ್ಟಣ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷರಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದ ಜೆಡಿಎಸ್‌ನ ಪಿ. ನಿರ್ಮಲ ಮತ್ತು ಎಸ್‌. ಪ್ರಕಾಶ್‌ ಅವರನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿನಂದಿಸಿದರು   

ಶ್ರೀರಂಗಪಟ್ಟಣ: ಇಲ್ಲಿನ ಪುರಸಭೆ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಪಿ. ನಿರ್ಮಲಾ ಅಧ್ಯಕ್ಷೆ ಯಾಗಿ, ಎಸ್‌. ಪ್ರಕಾಶ್‌ ಉಪಾಧ್ಯಕ್ಷರಾಗಿ ವಿರೋಧವಾಗಿ ಆಯ್ಕೆಯಾದರು.

ನಿರ್ಮಲಾ ಮತ್ತು ಎಸ್‌. ಪ್ರಕಾಶ್‌ ಹೊರತುಪಡಿಸಿ ಇತರರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಎಂ.ವಿ. ರೂಪಾ ಇವರ ಆಯ್ಕೆಯನ್ನು ಘೋಷಿಸಿದರು.

ಕಾಂಗ್ರೆಸ್‌ ಸದಸ್ಯರು ಸ್ಪರ್ಧೆಯಿಂದ ದೂರ ಉಳಿದರು. ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಜೆಡಿಎಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ADVERTISEMENT

ಪುರಸಭೆ ಕಚೇರಿ ಎದುರು ಜೆಡಿಎಸ್‌ ಬಾವುಟಗಳನ್ನು ಬೀಸಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ,ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಶಾಸಕ ರವೀಂದ್ರ ಶ್ರೀಕಂಠಯ್ಯ ಪರ ಘೋಷಣೆ ಕೂಗಿದರು.

ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಜೆಡಿಎಸ್‌ 12, ಕಾಂಗ್ರೆಸ್‌ 8, ಇಬ್ಬರು ಪಕ್ಷೇತರರು ಹಾಗೂ ಒಬ್ಬರು ಬಿಜೆಪಿ ಸದಸ್ಯರು ಇದ್ದಾರೆ. ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಸದಸ್ಯೆ ಹಾಗೂ ಒಬ್ಬರು ಪಕ್ಷೇತರ ಸದಸ್ಯೆ ಚುನಾವಣೆ ವೇಳೆ ಜೆಡಿಎಸ್‌ ಗುಂಪಿನಲ್ಲಿ ಗುರುತಿಸಿಕೊಂಡು ಬಂಬಲ ಸೂಚಿಸಿದರು.

ನೂತನ ಅಧ್ಯಕ್ಷೆ, ಉಪಾಧ್ಯಕ್ಷರನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಅಭಿನಂದಿಸಿದರು. ‘ಪುರಸಭೆ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆಗೆಕಾಂಗ್ರೆಸ್‌ ಸದಸ್ಯರು ಸಹಕರಿಸಿರುವುದು ಸಂತಸ ತಂದಿದೆ. ಸಂಸದೆ ಸುಮಲತಾ ಅಂಬರೀಷ್‌ ಗೈರು ಹಾಜರಾಗುವ ಮೂಲಕ ಪರೋಕ್ಷವಾಗಿ ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ’ ಎಂದು ಹೇಳಿದರು.

ಜೆಡಿಎಸ್‌ ಕ್ಷೇತ್ರ ಘಟಕದ ಅಧ್ಯಕ್ಷ ಮುಕುಂದ, ರಾಜ್ಯ ಘಟಕದ ಉಪಾಧ್ಯಕ್ಷ ಎಂ. ಸಂತೋಷ್‌, ಪುರಸಭೆ ಸದಸ್ಯರಾದ ಎಂ. ನಂದೀಶ್‌, ಗಂಜಾಂ ಕೃಷ್ಣ‍ಪ್ಪ, ಲಿಂಗರಾಜು, ಚೈತ್ರ, ಎಸ್‌.ಟಿ. ರಾಜು, ಜಿ.ಎಸ್‌. ಶಿವು, ಎಂ. ಶ್ರೀನಿವಾಸ್‌ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.