ADVERTISEMENT

ಹಲಗೂರು: ಜೈ ಭೀಮ್ ಬಳಗಕ್ಕೆ ಕುರ್ಚಿ, ಮೇಜು ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 12:48 IST
Last Updated 2 ಜೂನ್ 2025, 12:48 IST
ಹಲಗೂರು ಸಮೀಪದ ಮೇಗಳಾಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯಿಂದ ಜೈಭೀಮ್ ಬಳಗಕ್ಕೆ ಕುರ್ಚಿ, ಮೇಜು ಮತ್ತು ಪೀಠೋಪಕರಣ ವಿತರಣೆ ಮಾಡಲಾಯಿತು
ಹಲಗೂರು ಸಮೀಪದ ಮೇಗಳಾಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯಿಂದ ಜೈಭೀಮ್ ಬಳಗಕ್ಕೆ ಕುರ್ಚಿ, ಮೇಜು ಮತ್ತು ಪೀಠೋಪಕರಣ ವಿತರಣೆ ಮಾಡಲಾಯಿತು   

ಹಲಗೂರು: ಕಳೆದ ಶೈಕ್ಷಣಿಕ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಗಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಗ್ರಾಮ ಪಂಚಾಯತಿಯಿಂದ ಅಭಿನಂದಿಸಲಾಗುವುದು ಎಂದು ಹಾಡ್ಲಿ ಪಂಚಾಯತಿ ಅಧ್ಯಕ್ಷ ಎನ್.ವಿ.ಚಲುವರಾಜು ತಿಳಿಸಿದರು.

ಸಮೀಪದ ಮೇಗಳಾಪುರದಲ್ಲಿ ಪಂಚಾಯಿತಿ ಅನುದಾನದಲ್ಲಿ ಜೈ ಭೀಮ್ ಬಳಗಕ್ಕೆ ₹30 ಸಾವಿರ ಮೊತ್ತದ ಕುರ್ಚಿ ಮತ್ತು ಮೇಜು ವಿತರಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಉತ್ತೇಜಿಸುವ ನಿಟ್ಟಿನಲ್ಲಿ ಜೂನ್‌ 17ರಂದು ಹಾಡ್ಲಿ-ಮೇಗಳಾಪುರ ವೃತ್ತದಲ್ಲಿರುವ ಸಂತೆ ಮೈದಾನದಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಲಾಗಿದೆ. ಪಂಚಾಯತಿ ವ್ಯಾಪ್ತಿಯ ಎಲ್ಲಾ ಸಮುದಾಯದ ಅರ್ಹ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿಕೊಂಡು, ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ADVERTISEMENT

ಜೈಭೀಮ್ ಬಳಗದ ಸದಸ್ಯರು ಗ್ರಾಮದ ಸಮುದಾಯಕ್ಕೆ ಅಗತ್ಯವಿರುವ ಸಮಾಜ ಸೇವಾ ಕಾರ್ಯ ಚಟುವಟಿಕೆ ಕೈಗೊಳ್ಳಬೇಕು. ಶಿಕ್ಷಣಕ್ಕೆ ಹೆಚ್ಚು ಅದ್ಯತೆ ನೀಡಬೇಖು ಎಂದು ಸಲಹೆ ನೀಡಿದರು.

ಪಂಚಾಯತಿಯಿಂದ ಅಂಬೇಡ್ಕರ್ ಭವನದಲ್ಲಿ ಗ್ರಂಥಾಲಯ ಮಾಡಬೇಕೆಂಬ ಆಶಯವಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವ ಪುಸ್ತಕಗಳು ಮತ್ತು ಕಂಪ್ಯೂಟರ್ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಪಿಡಿಒ ಲಿಂಗರಾಜು, ಪಂಚಾಯತಿ ಸದಸ್ಯರಾದ ಚಿಕ್ಕಣ್ಣ, ಮಂಜುಳಾ, ಜೈ ಭೀಮ್ ಬಳಗದ ಅಧ್ಯಕ್ಷ ಪಿ.ಪ್ರೇಮ್ ಕುಮಾರ್, ಸಂಘಟನಾ ಕಾರ್ಯದರ್ಶಿ ಕುಮಾರ, ಉಪಾಧ್ಯಕ್ಷ ಪ್ರದೀಪ್, ಖಜಾಂಚಿ ನಾಗೇಂದ್ರ, ಹಿರಿಯರಾದ ಶಿವಣ್ಣ, ಪ್ರಭಾಕರ್, ಮರಿಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.