ADVERTISEMENT

ಪರಂಪರೆಯ ಚಾಮರಾಜೇಂದ್ರ ಮ್ಯೂಸಿಯಂ!

ಯದುವಂಶದ ದೊರೆಗಳು, ಟಿಪ್ಪು, ಹೈದರಾಲಿ ಖಾನ್‌ ಛಾಯಾಚಿತ್ರಗಳು ಲಭ್ಯ

ಗಣಂಗೂರು ನಂಜೇಗೌಡ
Published 23 ಸೆಪ್ಟೆಂಬರ್ 2019, 7:49 IST
Last Updated 23 ಸೆಪ್ಟೆಂಬರ್ 2019, 7:49 IST
ವಸ್ತು ಸಂಗ್ರಹಾಲಯದ ಒಳಗಿರುವ ಸೂರ್ಯ ದೇವರ ಶಿಲ್ಪ
ವಸ್ತು ಸಂಗ್ರಹಾಲಯದ ಒಳಗಿರುವ ಸೂರ್ಯ ದೇವರ ಶಿಲ್ಪ   

ಶ್ರೀರಂಗಪಟ್ಟಣ: ಪಟ್ಟಣದ ಚಾಮರಾಜೇಂದ್ರ ಸರ್ಕಾರಿ ವಸ್ತುಸಂಗ್ರಹಾಲಯ ಜಿಲ್ಲೆಯ ಪರಂಪರೆಯನ್ನು ಬಿಂಬಿಸುವ ವಾಸ್ತುಶಿಲ್ಪ ಹಾಗೂ ಛಾಯಾಚಿತ್ರಗಳ ಕಣಜವಾಗಿದೆ.

200 ವರ್ಷಗಳ ಹಿಂದಿನ ಈ ಕಟ್ಟಡದಲ್ಲಿ ಅಪರೂಪದ ಶಿಲ್ಪಗಳ ಸಂಗ್ರಹ ಇದೆ. ಹೊಯ್ಸಳ, ವಿಜಯನಗರ ಮತ್ತು ಒಡೆಯರ್‌ ದೊರೆಗಳ ಕಾಲಕ್ಕೆ ಸೇರಿದ ಸೂರ್ಯ ದೇವರು, ವೇಣುಗೋಪಾಲ, ಭಕ್ತ ಹನುಮಂತ, ಶಿಲಾಬಾಲಿಕೆಯರು, ಲಕ್ಷ್ಮೀನಾರಾಯಣ, ಗಣೇಶ, ಭೈರವ ಇತರ ಶಿಲ್ಪಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಮೈಸೂರು ಯದುವಂಶದ ದೊರೆಗಳು, ಟಿಪ್ಪು ಹಾಗೂ ಹೈದರಾಲಿ ಖಾನ್‌ ಅವರ ಛಾಯಾಚಿತ್ರಗಳನ್ನು ಇಲ್ಲಿ ನೋಡಬಹುದು. ಆನೆಯನ್ನು ಖೆಡ್ಡಾಕ್ಕೆ ಕೆಡವಿ ಪಳಗಿಸುವುದು, ಯುದ್ಧದ ಸನ್ನಿವೇಶಗಳು ಇಲ್ಲಿ ಕಾಣಸಿಗುತ್ತವೆ. ಮಂಡ್ಯ ಜಿಲ್ಲೆಯ ಮಹತ್ವದ
ಸ್ಮಾರಕಗಳ ಚಿತ್ರಗಳನ್ನು ಈ ವಸ್ತುಸಂಗ್ರಹಾಲಯದ ಗೋಡೆಗಳ ಮೇಲೆ ತೂಗು ಹಾಕಲಾಗಿದೆ.

ADVERTISEMENT

ದ್ವೀಪ ಪಟ್ಟಣದ ನಕ್ಷೆ, ಕೋಟೆಯ ಅಚ್ಚು, ಸ್ಮಾರಕ ತಾಣಗಳು ಮತ್ತು ಅವುಗಳ ದಿಕ್ಕುಗಳನ್ನು ಚಿತ್ರಿಸಿ ಗಾಜಿನ ಚೌಕಟ್ಟಿನಲ್ಲಿ ಇರಿಸಲಾಗಿದೆ. ವಸ್ತುಸಂಗ್ರಹಾಲಯದ ಹೊರಗೆ ಎರಡೂ ಬದಿಯಲ್ಲಿ ಶಿಲಾಸ್ತಂಭಗಳನ್ನು ನಿಲ್ಲಿಸಲಾಗಿದೆ. ಲೋಹದ ಫಿರಂಗಿ, ಬಗೆಬಗೆಯ ಉಬ್ಬು ಶಿಲ್ಪಗಳೂ ಇಲ್ಲಿವೆ. 17 ಮತ್ತು 18ನೇ ಶತಮಾನಕ್ಕೆ ಸೇರಿದ 50ಕ್ಕೂ ಹೆಚ್ಚು ವೀರಗಲ್ಲುಗಳು ಸಂಗ್ರಹಾಲಯದ ಹೊರಾವರಣಲ್ಲಿದ್ದು, ಒಂದಕ್ಕಿಂತ ಒಂದು ಭಿನ್ನವಾಗಿವೆ. ಎಡ ಬದಿಯಲ್ಲಿ ಕವಣೆ ಕಲ್ಲುಗಳನ್ನು ಸಂಗ್ರಹಿಸಿ ಇಡಗಿದೆ. 5ರಿಂದ 20 ಕೆ.ಜಿ. ತೂಕದವರೆಗೆ 500ಕ್ಕೂ ಹೆಚ್ಚು ಕಲ್ಲಿನ ಗುಂಡುಗಳನ್ನು ತ್ರಿಭುಜಾಕೃತಿಯಲ್ಲಿ ಜೋಡಿಸಿರುವುದು ಗಮನ ಸೆಳೆಯುತ್ತದೆ.

ಚಾಮರಾಜೇಂದ್ರ ಒಡೆಯರ್‌ ಅವರ ಸ್ಮರಣಾರ್ಥ 1905ರಲ್ಲಿ ಈ ವಸ್ತುಸಂಗ್ರಹಾಲಯದ ಕಟ್ಟಡವನ್ನು ನಿರ್ಮಿಸಲಾಗಿದೆ. ಈ ಕಟ್ಟಡಕ್ಕೆ 114 ವರ್ಷಗಳು ತುಂಬಿದ್ದು, ಗಟ್ಟಿತನ ಮತ್ತು ರಚನಾ ಶೈಲಿಯಿಂದ ಗಮನ ಸೆಳೆಯುತ್ತದೆ. ಛತ್ರವಾಗಿದ್ದ ಕಟ್ಟಡವನ್ನು ಪ್ರಾಚ್ಯವಸ್ತು ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶನಾಲಯ 1997ರಲ್ಲಿ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಿತ್ತು.

ವಸ್ತುಸಂಗ್ರಹಾಲಯದ ಎಡ ಬದಿಯಲ್ಲಿ ಕುವೆಂಪು ಅವರು 1935ರಲ್ಲಿ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ವಿಷಯ ಕುರಿತು ಭಾಷಣ ಮಾಡಿದ್ದು, ಅದು ಪುಸ್ತಕವೂ ಆಗಿರುವುದು ಮತ್ತೊಂದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.