ADVERTISEMENT

ರಾಜಶೇಖರ್‌, ಶಿವರಾಮೇಗೌಡಗೆ ‘ಚೌಡಯ್ಯ ಪ್ರಶಸ್ತಿ’

ಮಂಡ್ಯ: ನಾಲ್ವರು ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪ್ರಶಸ್ತಿ’ ಪ್ರದಾನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 13:55 IST
Last Updated 25 ಸೆಪ್ಟೆಂಬರ್ 2024, 13:55 IST
   

ಮಂಡ್ಯ: ‘ಎಚ್‌.ಡಿ.ಚೌಡಯ್ಯ ಅವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬದುಕಿದ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತ’ ಎಂದು ಶ್ರೀರಂಗಪಟ್ಟಣ ಪಶ್ಚಿಮವಾಹಿನಿ ಬೇಬಿಮಠ ಮತ್ತು ಚಂದ್ರವನ ಆಶ್ರಮದ ಪೀಠಾಧಿಪತಿ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಹೇಳಿದರು.

ನಗರದ ಪಿ.ಇ.ಎಸ್‌ ಎಂಜಿನಿಯರಿಂಗ್‌ ಕಾಲೇಜಿನ ನಿತ್ಯ ಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ಜನತಾ ಶಿಕ್ಷಣ ಟ್ರಸ್ಟ್‌ ವತಿಯಿಂದ ಬುಧವಾರ ಆಯೋಜಿಸಿದ್ದ ಎಚ್‌.ಡಿ.ಚೌಡಯ್ಯ ಅವರ 97ನೇ ಜನ್ಮದಿನಾಚರಣೆ ಹಾಗೂ 2023ನೇ ಸಾಲಿನ ರಾಜ್ಯ ಮಟ್ಟದ ಎಚ್‌.ಡಿ.ಚೌಡಯ್ಯ ಸಮಾಜ ಸೇವೆ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಪ್ರಶಸ್ತಿಗಳ ಪ್ರದಾನ, ಪ್ರತಿಭಾ ವಿದ್ಯಾರ್ಥಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವು ಭಾವನಾತ್ಮಕ ಮತ್ತು ಸಹಿಷ್ಣುತೆಯ ದೇಶವಾಗಿದೆ. ಚೌಡಯ್ಯ ಅವರ ಸಾಧನೆಯನ್ನು ಸ್ಮರಿಸಲು ಅವರ ಜನ್ಮದಿನ ಆಚರಿಸುತ್ತಿದ್ದೇವೆ. ನಿಸ್ವಾರ್ಥ ಸೇವೆ ಸಲ್ಲಿಸಿದ ಇಂತಹ ಮಹನೀಯರ ಆದರ್ಶವನ್ನು ಎಲ್ಲರೂ ಮೈಗೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್‌.ವಿಜಯ್‌ ಆನಂದ್‌ ಮಾತನಾಡಿ, ‘ಆರೋಗ್ಯದ ಕಾಳಜಿಯಿಂದ ಆರ್‌.ರಾಜಶೇಖರ್‌ ಅವರು ಉತ್ತಮ ಪುಸ್ತಕವನ್ನು ಬರೆದಿದ್ದಾರೆ. ಆದರೆ ಅದನ್ನು ನಾನು ಓದಿಲ್ಲ. ಆ ಪುಸ್ತಕವನ್ನು ಓದಿದವರು ನನಗೆ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಚೌಡಯ್ಯ ಅವರ ಸಮಾಜ ಸೇವಾ ಪ್ರಶಸ್ತಿ ನೀಡುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸುತ್ತೇನೆ, ಜೊತೆಗೆ ಕೃಷಿ  ಕ್ಷೇತ್ರದಲ್ಲಿ ಶಿವರಾಮೇಗೌಡ ಅವರು ಸಾಧನೆ ಮಾಡಿರುವುದು ಸಂತಸ ತಂದಿದೆ’ ಎಂದರು. 

ಪ್ರಶಸ್ತಿ ಪ್ರದಾನ:

ರಾಜ್ಯಮಟ್ಟದ ಎಚ್‌.ಡಿ.ಚೌಡಯ್ಯ‘ಸಮಾಜಸೇವಾ ಪ್ರಶಸ್ತಿ’ಗೆ ಕೋಲಾರ ಜಿಲ್ಲೆ ಚಾಮರಹಳ್ಳಿ ಜೀವ ಸಂಜೀವನ ನ್ಯಾಚುರಲ್‌ ಲೈಫ್‌ ಸಂಸ್ಥಾಪಕ ಆರ್.ರಾಜಶೇಖರ್, ಗ್ರಾಮೀಣಾಭಿವೃದ್ಧಿ ಪ್ರಶಸ್ತಿಗೆ ಮಂಡ್ಯ ತಾಲ್ಲೂಕು ಉಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆ (ಪರವಾಗಿ ಮುಖ್ಯ ಶಿಕ್ಷಕ ನಾಗರಾಜು ಮತ್ತು ಎಸ್‌ಡಿಎಂಸಿ ಅಧ್ಯಕ್ಷೆ ಸುನಂದಾ) ಹಾಗೂ ಕೃಷಿ ಪ್ರಶಸ್ತಿಗೆ ಭಾಜನರಾದ ಮದ್ದೂರು ತಾಲ್ಲೂಕು ಮಲ್ಲನಕುಪ್ಪೆ ಗ್ರಾಮದ ಸಮಗ್ರ ಸಾವಯವ ಕೃಷಿಕ ಶಿವರಾಮೇಗೌಡ ಅವರಿಗೆ ತಲಾ ₹20 ಸಾವಿರ ನಗದು ಜತೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಹೊಳಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಚ್.ಕೆ.ಸಂಜನಾ, ಎಚ್.ಎನ್.ಧನುಷ್, ಹೊಳಲು ವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ಎನ್.ಚಂದನಾ ಹಾಗೂ ಹುಳ್ಳೇನಹಳ್ಳಿಯ ಎಚ್.ಪಿ.ಕಿಶೋರ್‌ಗೌಡ ಎಂಬ ವಿದ್ಯಾರ್ಥಿಗಳಿಗೆ ತಲಾ ₹4 ಸಾವಿರ ಜತೆಗೆ ಪ್ರತಿಭಾ ಪುರಸ್ಕಾರ ನೀಡಿ ನೀಡಲಾಯಿತು.

ಜನತಾ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಧರ್ಮದರ್ಶಿ ಎಚ್.ಸಿ.ಮೋಹನ್‌ಕುಮಾರ್, ನಿರ್ದೇಶಕ ರಾಮಲಿಂಗಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.