ADVERTISEMENT

ಮಕ್ಕಳ ಮನೆ: 146 ಶಾಲೆಗಳಲ್ಲಿ 3,850 ಚಿಣ್ಣರು

ಪೂರ್ವ ಪ್ರಾಥಮಿಕ ಕೇಂದ್ರಗಳಿಗೆ ಅಭೂತಪೂರ್ವ ಯಶಸ್ಸು, ದಾಖಲಾತಿ ಸಂಖ್ಯೆ ಏರಿಕೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2019, 19:45 IST
Last Updated 6 ಸೆಪ್ಟೆಂಬರ್ 2019, 19:45 IST
ಮಳವಳ್ಳಿ ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮನೆಯಲ್ಲಿ ಚಿಣ್ಣರೊಂದಿಗೆ ಶಿಕ್ಷಕರು
ಮಳವಳ್ಳಿ ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮನೆಯಲ್ಲಿ ಚಿಣ್ಣರೊಂದಿಗೆ ಶಿಕ್ಷಕರು   

ಮಂಡ್ಯ: ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಸ್ಥಾಪನೆಯಾಗಿರುವ ‘ಮಕ್ಕಳ ಮನೆ’ಗೆ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯಾದ್ಯಂತ 146 ಶಾಲೆಗಳಲ್ಲಿ 3,850 ಚಿಣ್ಣರು ಪೂರ್ವ ಪ್ರಾಥಮಿಕ ಶಿಕ್ಷಣ (ಎಲ್‌ಕೆಜಿ, ಯುಕೆಜಿ) ಪಡೆಯುತ್ತಿದ್ದಾರೆ.

ಎಸ್‌ಡಿಎಂಸಿ ಸದಸ್ಯರು, ಪೋಷಕರು, ಹಳೆಯ ವಿದ್ಯಾರ್ಥಿಗಳು, ಶಿಕ್ಷಣಾಸಕ್ತರ ಸಹಕಾರದೊಂದಿಗೆ ಪ್ರಾರಂಭವಾಗಿರುವ ಮಕ್ಕಳ ಮನೆಗಳು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ. ಮಕ್ಕಳ ಮನೆಯಲ್ಲಿ ಶಿಕ್ಷಣ ಸಂಪೂರ್ಣ ಉಚಿತವಾಗಿದ್ದು, ಮಕ್ಕಳ ದಾಖಲಾತಿ ಹಾಗೂ ಮಕ್ಕಳ ಮನೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಗತಿಯಲ್ಲಿ ಸಾಗುತ್ತಿವೆ. ಮಳವಳ್ಳಿ ತಾಲ್ಲೂಕಿನಲ್ಲಿ 42 ಶಾಲೆಗಳಲ್ಲಿ ಮಕ್ಕಳ ಮನೆ ಸ್ಥಾಪಿಸಲಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಮಕ್ಕಳ ಮನೆ ಇರುವ ಕೀರ್ತಿ ಪಡೆದಿದೆ.

ಈಗಾಗಲೇ ಪ್ರಾರಂಭವಾಗಿರುವ ಮಕ್ಕಳ ಮನೆಗಳಲ್ಲಿ ಹೊರ ಗುತ್ತಿಗೆ ಆಧಾರ ಮೇಲೆ ಶಿಕ್ಷಕರು, ಆಯಾಗಳನ್ನು ನೇಮಕ ಮಾಡಿಕೊಂಡು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಶಿಕ್ಷಕರಿಗೆ ₹5 ಸಾವಿರದಿಂದ ₹8 ಸಾವಿರದವರೆಗೆ, ಆಯಾಗಳಿಗೆ ₹3 ಸಾವಿರದವರೆಗೆ ಸಂಬಳ ನೀಡಲಾಗುತ್ತಿದೆ.

ADVERTISEMENT

ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವುದಕ್ಕೆ ಒತ್ತು ನೀಡಲಾಗಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸುವುದು ತಪ್ಪುತ್ತಿದೆ. ಇಂಗ್ಲಿಷ್‌ನಲ್ಲಿ ಮಕ್ಕಳಿಗೆ ಬೋಧನೆ ಮಾಡಬಲ್ಲ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅವರಿಗೆ ತಿಂಗಳಲ್ಲಿ ಒಂದು ದಿನ ಶಿಕ್ಷಕರ ಕಲಿಕಾ ಕೇಂದ್ರದಲ್ಲಿ ತರಬೇತಿ ನೀಡಿ ಅಪ್‌ಡೇಟ್‌ ಮಾಡಲಾಗುತ್ತದೆ ಎಂದು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಯೋಗೇಶ್‌ ಹೇಳಿದರು.

ದಾಖಲಾತಿ, ಹೊಸ ಶಾಲೆಗಳ ಏರಿಕೆ: ಕಳೆದ ಸಾಲಿನಲ್ಲಿ 103 ಇದ್ದ ಮಕ್ಕಳ ಮನೆಗಳ ಸಂಖ್ಯೆ ಪ್ರಸಕ್ತ ಸಾಲಿನಲ್ಲಿ 146ಕ್ಕೆ ಏರಿಕೆಯಾಗಿವೆ. ಒಟ್ಟಾರೆ 43 ಹೊಸ ಶಾಲೆಗಳಲ್ಲಿ ಮಕ್ಕಳ ಮನೆ ತೆರೆಯಲಾಗಿದೆ. ಕಳೆದ ಸಾಲಿನಲ್ಲಿ 2,770 ಮಕ್ಕಳು ದಾಖಲಾಗಿದ್ದರು. ಪ್ರಸಕ್ತ ಸಾಲಿನಲ್ಲಿ 3,850 ಮಕ್ಕಳು ದಾಖಲಾಗಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ವಿರೋಧ: ಮಕ್ಕಳ ಮನೆ ಪ್ರಾರಂಭದಿಂದ ಅಂಗನವಾಡಿಗೆ ಮಕ್ಕಳು ಬರುವುದು ಕಡಿಮೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.

‘ಖಾಸಗಿ ಶಾಲೆಗೆ ಎಲ್‌ಕೆಜಿ, ಯುಕೆಜಿಗೆ ಮಕ್ಕಳು ಹೋಗುವುದಕ್ಕೆ ಕಾರ್ಯಕರ್ತೆಯರು ವಿರೋಧಿಸುವುದಿಲ್ಲ. ಆದರೆ, ಸರ್ಕಾರಿ ಶಾಲೆಗೆ ಬಂದರೆ ಯಾಕೆ ವಿರೋಧಿಸುತ್ತೀರಿ’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.

‘15 ಹಳೇ ವಿದ್ಯಾರ್ಥಿಗಳು ಸೇರಿ ಒಂದು ಸಮಿತಿ ಮಾಡಿಕೊಂಡು ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿದ್ದೇವೆ. 10 ವರ್ಷಗಳವರೆಗೆ ಮುನ್ನಡೆಸುವ ಮೂಲಕ ನಾವು ಓದಿದ ಶಾಲೆಗೆ ಕೊಡುಗೆ ನೀಡಬೇಕು ಎಂಬುದೇ ನಮ್ಮ ಉದ್ದೇಶ. ಸಮಿತಿಗೆ ಹೊಸ ರೂಪ ನೀಡಿದ್ದು, ಜ್ಞಾನಧಾರೆ ಎಜುಕೇಷನ್‌ ಟ್ರಸ್ಟ್‌ ಎಂದು ನಾಮಕರಣ ಮಾಡಿದ್ದೇವೆ. ಸ್ವತಃ ನಾವೇ ದುಡ್ಡು ಹಾಕಿ ನಮ್ಮೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಮನೆ ನಿರ್ವಹಿಸಿಕೊಂಡು ಹೋಗುತ್ತಿದ್ದೇವೆ’ ಎಂದು ಹಲಗೂರು ಹೋಬಳಿಯ ಬೆನಮನಹಳ್ಳಿ ಶಾಲೆಯ ಹಳೇ ವಿದ್ಯಾರ್ಥಿ ಬಿ.ಸಿ.ಕಾಂತರಾಜು ಹೇಳಿದರು.

ಕುರ್ಚಿ, ಟೇಬಲ್‌ ವ್ಯವಸ್ಥೆ

ಮಕ್ಕಳ ಮನೆಗಳಲ್ಲಿ ವಿಭಿನ್ನ ರೀತಿಯ ಆಟದ ಸಾಮಗ್ರಿ, ಕ್ರೀಡಾ ಸಾಮಗ್ರಿ, ಕುಳಿತುಕೊಳ್ಳಲು ಕುರ್ಚಿ (ಕೆಲವೆಡೆ), ಎಲ್ಲರೂ ಸಮಾನರೆಂಬಂತೆ ಸಮವಸ್ತ್ರ (ಕೆಲವು ಕಡೆ), ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ (ನೃತ್ಯ, ಗಾಯನ, ಚರ್ಚೆ) ಮಾಡಲಾಗುತ್ತಿದೆ. ಇದರೊಂದಿಗೆ ಸುಸಜ್ಜಿತ ಕೊಠಡಿ, ಶೌಚಾಲಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಇವು ಖಾಸಗಿ ಶಾಲೆಯನ್ನೂ ಮೀರಿಸುವ ಹಂತಕ್ಕೆ ತಲುಪುತ್ತಿವೆ. ಮಳವಳ್ಳಿ ತಾಲ್ಲೂಕಿನ ಹುಲ್ಲೇಗಾಲ, ಆಲದಹಳ್ಳಿ, ಹುಸ್ಕೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಕುರ್ಚಿ, ಟೇಬಲ್‌ ವ್ಯವಸ್ಥೆ ಮಾಡಲಾಗಿದೆ.

**

ವಡ್ಡರಹಳ್ಳಿ ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ 48 ಮಕ್ಕಳಿದ್ದು, ಇದೇ ಶಾಲೆಯಲ್ಲಿ ಈ ವರ್ಷ ಎಲ್‌ಕೆಜಿ, ಯುಕೆಜಿಗೆ 42 ಮಕ್ಕಳು ದಾಖಲಾಗಿದ್ದಾರೆ.
- ಎನ್‌.ಎನ್‌.ಯೋಗೇಶ, ಬಿಆರ್‌ಪಿ, ಮಳವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.