ADVERTISEMENT

ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಿ

ಆದಿಚುಂಚನಗಿರಿಯಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ: ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 14:45 IST
Last Updated 15 ಜನವರಿ 2020, 14:45 IST
ಆದಿಚುಂಚನಗಿರಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಕ್ಷತ್ರಾ ಉದ್ಘಾಟಿಸಿದರು
ಆದಿಚುಂಚನಗಿರಿಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಕ್ಷತ್ರಾ ಉದ್ಘಾಟಿಸಿದರು   

ನಾಗಮಂಗಲ: ‘ಮಕ್ಕಳ ಬಾಲ್ಯ ಕೇವಲ ಓದು, ಬರಹ, ಪುಸ್ತಕಗಳಿಗೆ ಮಾತ್ರ ಸೀಮಿತವಾಗಬಾರದು. ಬಾಲ್ಯದಲ್ಲಿ ಮಕ್ಕಳಿಗೆ ಸಾಹಿತ್ಯಾಸಕ್ತಿ ಬೆಳೆಸಬೇಕು. ಆಗ ಕನ್ನಡ ಭಾಷೆಯ ಬೆಳವಣಿಗೆಗೆ ಸಹಾಯವಾಗುತ್ತದೆ’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಜಯಂತಿ ಅಂಗವಾಗಿ ಬುಧವಾರ ನಡೆದ 7ನೇ ವರ್ಷದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಎಲ್ಲಾ ಮಕ್ಕಳು ತಮ್ಮ ಭಾವನೆಗಳಿಗೆ ಬರಹ ರೂಪ‌ ನೀಡಲು ಸಾಧ್ಯವಿಲ್ಲ. ಎಲ್ಲರೂ ಸಾಹಿತಿಗಳಾಗಲೂ ಆಗುವುದಿಲ್ಲ. ಅದು ನಮ್ಮ ಅಂತರಾಳದಿಂದ ಹುಟ್ಟಿಬೆಳೆಯುತ್ತದೆ. ಸಾಹಿತ್ಯ ಎಂಬುದು ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಒಬ್ಬ ವ್ಯಕ್ತಿ ಎಂದರೆ ಕೇವಲ ಒಂದು ಆಯಾಮದ ವ್ಯಕ್ತಿತ್ವ ಮಾತ್ರವಲ್ಲ. ನಾವು ಆಳಕ್ಕೆ ಇಳಿದಂತೆ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ’ ಎಂದರು.

ADVERTISEMENT

‘ನೆಲದ ಶಕ್ತಿ ಮತ್ತು ಸಾರವನ್ನು ಹೀರಿ ನಮ್ಮ ನಾಡಿನ ಮಕ್ಕಳು ಬರೆದಾಗ ಶ್ರೇಷ್ಠ ಸಾಹಿತಿಗಳಾಗಲು ಸಾಧ್ಯ. ವ್ಯಕ್ತಿ ಎಷ್ಟು ಎತ್ತರಕ್ಕೆ ಬೆಳೆದರೂ ನಮ್ಮ ಮೂಲ ಬೇರು, ನಮ್ಮ ಬಾಂಧವ್ಯಗಳೊಂದಿಗೆ ಬೆಸೆದುಕೊಂಡಿರಬೇಕು. ಮಕ್ಕಳಿಗೆ ಸಿಗುವ ಸ್ವಂತ ಅನುಭವ ಮಕ್ಕಳ ಜ್ಞಾನಕ್ಕೆ ರಹದಾರಿ’ ಎಂದರು.

ಸಮ್ಮೇಳನದ ಅಧ್ಯಕ್ಷೆ ಚಿಕ್ಕಮಗಳೂರು ಸೇಂಟ್‌ ಮೇರಿಸ್‌ ಶಾಲೆಯ ವೈಷ್ಣವಿ ಎನ್.ರಾವ್ ಮಾತನಾಡಿ, ‘ಮಕ್ಕಳು ವಿದ್ಯೆಯನ್ನು ಕೇವಲ ಉದ್ಯೋಗ ದೃಷ್ಟಿಯಿಂದ ಮಾತ್ರ ನೋಡದೇ ಜ್ಞಾನ ಬೆಳವಣಿಗೆಯ ಮೂಲವಾಗಿಸಿಕೊಳ್ಳಬೇಕು. ನಮ್ಮ ಕನ್ನಡ ಭಾಷೆಯಲ್ಲಿ ಅಪಾರ ವಿಸ್ತಾರ ಜ್ಞಾನ ಭಂಡಾರವಿದೆ. ಅದನ್ನು ಪ್ರತಿ ಮಕ್ಕಳಿಗೂ ಲಭ್ಯವಾಗುವಂತೆ ಗ್ರಂಥಾಲಯ ನಿರ್ಮಾಣವಾಗಬೇಕಾಗಿದೆ. ಅವು ಮಕ್ಕಳನ್ನು ಸಾಹಿತ್ಯದೆಡೆಗೆ ಸೆಳೆಯುವ ಮೂಲಕ ನಮ್ಮಲ್ಲಿ ಕಲ್ಪನಾ ಮನೋಭಾವವನ್ನು ವೃದ್ಧಿಸಲು ಸಹಕಾರಿಯಾಗುತ್ತವೆ’ ಎಂದರು.

ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿದರು. ಭದ್ರಾವತಿಯ ಎಸ್.ಎ.ವಿ ಪ್ರೌಢಶಾಲೆಯ ನಕ್ಷತ್ರಾ ಕಾರ್ಯಕ್ರಮ ಉದ್ಘಾಟಿಸಿದರು. ಅಲ್ಲದೇ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಸಿರಿಚೆನ್ನಿ, ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಚಾಮಲಾಪುರ ರವಿಕುಮಾರ್, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶ್ ಗೌಡ, ಮಂಡ್ಯ ಡಯಟ್ ಪ್ರಾಚಾರ್ಯ ಶಿವಮಾದಪ್ಪ, ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎನ್.ಮಂಜುನಾಥ್, ಆದಿಚುಂಚನಗಿರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಎ.ಟಿ.ಶಿವರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.