ADVERTISEMENT

ಚಿರತೆ ಹಾವಳಿ: ಭೀತಿಯಲ್ಲಿ ಗ್ರಾಮಸ್ಥರು

ಕೊಪ್ಪ ಹೋಬಳಿ ಭಾಗದಲ್ಲಿ ಓಡಾಡುತ್ತಿವೆ 7ರಿಂದ 8 ಚಿರತೆಗಳು, ಸೆರೆ ಹಿಡಿಯಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 10:21 IST
Last Updated 12 ಮಾರ್ಚ್ 2020, 10:21 IST
ಕೊಪ್ಪ ಸಮೀಪದ ಡಿ. ಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿ ಚಿರತೆ ಸೆರೆ ಹಿಡಿಯಲು ಬೋನ್ ಇಡಲಾಗಿದೆ
ಕೊಪ್ಪ ಸಮೀಪದ ಡಿ. ಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿ ಚಿರತೆ ಸೆರೆ ಹಿಡಿಯಲು ಬೋನ್ ಇಡಲಾಗಿದೆ   

ಕೊಪ್ಪ: ಹೋಬಳಿ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಸಾಕುಪ್ರಾಣಿಗಳ ಮೇಲೆ ದಾಳಿ ಮಾಡಿ ಬಲಿ ಪಡೆಯುತ್ತಿವೆ. ಗ್ರಾಮಸ್ಥರು ಭಯಭೀತರಾಗಿದ್ದು, ತೋಟ– ಗದ್ದೆಗಳ ಕಡೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಚಿರತೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊಪ್ಪ ಸಮೀಪದ ಗೂಳೂರು ಬೆಟ್ಟದ ಅಕ್ಕಪಕ್ಕದ ಗ್ರಾಮಗಳಾದ ಚಿಕ್ಕದೊಡ್ಡಿ, ಡಿ.ಹೊಸಹಳ್ಳಿ, ಹುರುಗಲ ವಾಡಿ, ಕೋಣಸಾಲೆ, ಚೋಟ್ಟನಹಳ್ಳಿ, ಬಿದರಕೋಟೆ, ಮೂಡಲದೊಡ್ಡಿ, ಗೂಳೂರು ಸೇರಿದಂತೆ ಇತರ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. 7ರಿಂದ 8 ಚಿರತೆಗಳು ಈ ಭಾಗದಲ್ಲಿ ಸಂಚರಿಸುತ್ತಿವೆ. ರಾತ್ರಿ 8ರಿಂದ 9 ಗಂಟೆ ಸಮಯದಲ್ಲಿ ಚಿರತೆಗಳು ಗ್ರಾಮದೊಳಗೆ ಸಂಚರಿಸುತ್ತವೆ.

ಹುರುಗಲವಾಡಿ ಗ್ರಾಮದ ವ್ಯಕ್ತಿಯೊಬ್ಬರನ್ನು ಇತ್ತೀಚೆಗೆ ಚಿರತೆ ಅಟ್ಟಿಸಿಕೊಂಡು ಬಂದಿತ್ತು. ಹೀಗಾಗಿ, ಗ್ರಾಮಸ್ಥರು ಸಂಜೆ 7 ಗಂಟೆಗೆ ಬಾಗಿಲು ಹಾಕಿಕೊಂಡು ಮನೆಯ ಒಳಗೆ ಸೇರಿಕೊಳ್ಳುತ್ತಿದ್ದಾರೆ. ಜನರ ಓಡಾಟ ಕಡಿಮೆ ಆಗುತ್ತಿರುವುದರಿಂದ ಚಿರತೆಗಳು ರಾಜಾರೋಷವಾಗಿ ತಿರುಗಾಡುತ್ತಿವೆ. ಚಿರತೆಗಳನ್ನು ಕೂಡಲೇ ಸೆರೆಹಿಡಿಯಬೇಕು ಎಂದು ಗ್ರಾಮದ ಮುಖಂಡ ಉಮೇಶ ಆಗ್ರಹಿಸಿದ್ದಾರೆ.

ADVERTISEMENT

ತಿಂಗಳಿಂದ 34 ಮೇಕೆಗಳು, 2 ಹಸು, 4 ಕರು, 5 ಕುರಿಗಳನ್ನು ಚಿರತೆಗಳು ಕೊಂದು ತಿಂದಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ರೈತರಿಗೆ ಸರಿಯಾದ ಪರಿಹಾರವನ್ನೂ ನೀಡಿಲ್ಲ. ಇದರಿಂದ ರೈತರು ಕಂಗೆಟ್ಟಿದ್ದಾರೆ.

ಚಿರತೆಗಳನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಚಿರತೆಗಳನ್ನು ಸೆರೆ ಹಿಡಿಯಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ರೈತರು ದೂರುತ್ತಿದ್ದಾರೆ.

ಹೆಚ್ಚಿನ ಬೋನ್‌ಗಳಿಗಾಗಿ ಪ್ರಸ್ತಾವ

ಚಿರತೆ ಸೆರೆಹಿಡಿಯಲು ಬೋನ್ ಇಡಲಾಗಿದೆ. ಹೆಚ್ಚು ಬೋನ್‌ಗಳಳ ಅಗತ್ಯವಿದ್ದು, ಈ ಸಂಬಂಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಚಿರತೆಗಳ ಚಲನವಲನಗಳ ಮೇಲೆ ನಿಗಾ ಇಡಲು ಕ್ಯಾಮೆರಾಗಳನ್ನು ಕೆಲವೆಡೆ ಅಳವಡಿಸಲಾಗಿದೆ ಎಂದು ತಾಲ್ಲೂಕು ಅರಣ್ಯಾಧಿಕಾರಿ ಶಶಿಧರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.