ಮಂಡ್ಯ: ‘ಹೆಣ್ಣು ಮಕ್ಕಳನ್ನು ಸಂಪ್ರದಾಯ, ಕಂದಾಚಾರಗಳಲ್ಲಿ ಕಟ್ಟಿ ಹಾಕಿದ್ದಾರೆ. ಅವಳಿಗೂ ಸ್ವಾತಂತ್ರ್ಯ ನೀಡಿ, ಮೌಢ್ಯಾಚರಣೆಯಿಂದ ಹೊರಗೆ ಬರುವಂತೆ ಮಾಡಬೇಕಿದೆ’ ಎಂದು ಚಿತ್ರನಟಿ ಅಕ್ಷತಾ ಪಾಂಡವಪುರ ಅಭಿಪ್ರಾಯಪಟ್ಟರು.
ನಗರದ ಎಸ್.ಬಿ. ಸಮುದಾಯ ಭವನದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸಹಯೋಗದಲ್ಲಿ ಶನಿವಾರ ಆರಂಭವಾದ ದುಡಿಯುವ ಮಹಿಳೆಯರ 9ನೇ ರಾಜ್ಯ ಸಮಾವೇಶದಲ್ಲಿ ಅವರು ಮಾತನಾಡಿದರು.
ಮದುವೆಯಾಗುವ ಹೆಣ್ಣು ಮಕ್ಕಳಿಗೆ ‘ಮುತ್ತೈದೆಯಾಗಿ ಬಾಳಮ್ಮ’ ಎನ್ನುತ್ತಾರೆ. ಆದರೆ, ಗಂಡು ಮಕ್ಕಳಿಗೆ ಮಾತ್ರ ಈ ಮಾತು ಹೇಳುವುದಿಲ್ಲ. ಮಹಿಳೆಯರು ‘ವಿಧವೆ’ ಸ್ಥಾನ ತೆಗೆದುಕೊಳ್ಳಬಾರದೆಂಬುದೇ ಇಲ್ಲಿನ ತಾತ್ಪರ್ಯವಾಗಿದೆ. ಇದರ ಮೂಲ ತಿಳಿದುಕೊಂಡು ಅದನ್ನು ಸರಿಪಡಿಸುವ ಕೆಲಸ ಮಾಡುವ ಮೂಲಕ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಿನಿಮಾ ಅಥವಾ ಇನ್ನಾವುದೋ ಸಮಾರಂಭದಲ್ಲಿ ಹೆಣ್ಣು ಮಕ್ಕಳು ತುಂಡು ಬಟ್ಟೆ ಹಾಕಿಕೊಂಡು ಬಂದರೆ ಮಾತ್ರ ಫೋಕಸ್ ಆಗಿ ಬಿಡುತ್ತಾಳೆ. ನಯ, ನಾಜೂಕಾಗಿ ಸೀರೆ ಧರಿಸಿ ಬಂದರೆ ಅವಳು ಮಾತ್ರ ಫೋಕೋಸ್ ಆಗುವುದೇ ಇಲ್ಲ ಏಕೆ? ಇದನ್ನು ಮಾಧ್ಯಮ ಬಳಗವೂ ಅರ್ಥ ಮಾಡಿಕೊಂಡು ಸಮಾಜಕ್ಕೆ ಏನು ಬೇಕೆಂಬುದನ್ನು ತೋರಿಸುವ ಜವಾಬ್ದಾರಿ ಇದೆ. ಹೆಣ್ಣು ಮಕ್ಕಳನ್ನು ಆರ್ಥಿಕವಾಗಿ ಸದೃಢವಾಗಿ ಮಾಡುವ ಹೊಣೆಗಾರಿಕೆ ಹೊರುವ ಮನಸುಗಳು ಸಮಾಜದಲ್ಲಿ ಬೇಕು’ ಎಂದು ತಿಳಿಸಿದರು.
ಹೆಣ್ಣಿನ ಮೇಲೆ ದೌರ್ಜನ್ಯ ನಡೆದರೆ ಅದನ್ನು ಆ ಹೆಣ್ಣು ಪ್ರಶ್ನಿಸಲು ಆಗದೇ ಇರುವಂಥ ವಾತಾವರಣವಿದೆ. ಅವಳು ಮಾತಾಡಿದರೆ ವಿವಿಧ ರೀತಿಯ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಆಲೆಮನೆಗಳು ಹೆಚ್ಚಿವೆ. ಆದರೆ ಅಂತಹ ಯಾವುದೋ ಒಂದು ಆಲೆಮನೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಎಲ್ಲಿಯಾದರೂ ಗಂಡು ಭ್ರೂಣ ಹತ್ಯೆ ನಡೆದಿದೆಯಾ ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕು ಎಂದು ವಿಷಾದಿಸಿದರು.
ಅಖಿಲ ಭಾರತ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸಂಚಾಲಕಿ ಎ.ಆರ್. ಸಿಂಧು ಮಾತನಾಡಿದರು. ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್ ವಿಷಯ ಮಂಡಿಸಿದರು.
ಲೋಕೋ ಪೈಲಟ್ ಅಭಿರಾಮಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಂಚಾಲಕಿ ಎಚ್.ಎಸ್. ಸುನಂದಾ, ಅಂಗನವಾಡಿ ನೌಕರರ ಸಂಘದ ಪ್ರಮೀಳಾ ಕುಮಾರಿ, ಮುಖಂಡರಾದ ಮಂಗಳಾ ಕುಮಾರಿ, ಕುಸುಮಾ, ಜಿ.ರಾಮಕೃಷ್ಣ, ಬಾಲ್ಕೇಜಿರಾವ್ ಭಾಗವಹಿಸಿದ್ದರು.
ದುಡಿಯುವ ಸ್ಥಳದಲ್ಲಿ ಮಹಿಳೆಯರನ್ನು ತೀವ್ರತರ ಶೋಷಣೆ ಮಾಡಲಾಗುತ್ತಿದೆ. ಮಹಿಳೆಯರು ಸಾಂಘಿಕ ಮತ್ತು ಸಮರ್ಥವಾಗಿ ಪರಿಸ್ಥಿತಿಗಳನ್ನು ಎದುರಿಸಿ ಗಟ್ಟಿಯಾಗಿ ನಿಲ್ಲಬೇಕಿದೆಸಿ.ಕುಮಾರಿ ಸಂಚಾಲಕಿ ದುಡಿಯುವ ಮಹಿಳೆಯರ ಸಮನ್ವಯ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.