
ಮದ್ದೂರು: ರಾಜ್ಯದ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ತಾಲ್ಲೂಕಿನ ಕೌಡ್ಲೆ ಗ್ರಾಮದಲ್ಲಿ ಬುಧವಾರ ₹50 ಲಕ್ಷ ವೆಚ್ಚದ ನೂತನ ಪಶು ಆಸ್ಪತ್ರೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಹಾಗೂ ₹2 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
‘ಮುಖ್ಯಮಂತ್ರಿ ಬದಲಾಗುತ್ತಾರೋ ಇಲ್ಲವೋ; ಅದು ನಮ್ಮ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ವಿರೋಧ ಪಕ್ಷದ ನಾಯಕರಾದ ಅಶೋಕ್ ಸೇರಿದಂತೆ ವಿಪಕ್ಷಗಳ ನಾಯಕರಿಗೆ ನಮ್ಮ ಪಕ್ಷದ ಆಂತರಿಕ ವಿಷಯಗಳ ಬಗ್ಗೆ ಏಕೆ ಇಷ್ಟು ಆಸಕ್ತಿ ಎಂದು ತಿಳಿಯುತ್ತಿಲ್ಲ. ಅವರು ಹಾಗೂ ಮಾಧ್ಯಮದವರು ಈ ವಿಚಾರವನ್ನು ಇಷ್ಟು ದೊಡ್ಡದಾಗಿ ಮಾಡಿದ್ದಾರೆ’ ಎಂದರು.
‘ನಾನು ಇತ್ತೀಚೆಗೆ ದೆಹಲಿಗೆ ಹೋಗಿದ್ದುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ನನ್ನ ಇಲಾಖೆಗೆ ಸಂಬಂಧಪಟ್ಟಂತೆ ಕೆಲಸ ಇತ್ತು ಅದಕ್ಕಾಗಿ ಹೋಗಿದ್ದೆ’ ಎಂದರು.
ಈ ವೇಳೆ ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಬೆಕ್ಕಳಲೆ ರಘು, ಮಾಜಿ ಸದಸ್ಯ ತೋಯಜಾಕ್ಷ, ಮುಖಂಡರಾದ ಸಿ.ಎಂ. ಕ್ರಾಂತಿ ಸಿಂಹ, ಹೊಸಗಾವಿ ಅಶೋಕ್, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಶಿವಲಿಂಗಯ್ಯ, ಸಹಾಯಕ ನಿರ್ದೇಶಕ ಗೋವಿಂದ್ ಹಾಜರಿದ್ದರು.