ADVERTISEMENT

ಸಹಕಾರ ಕ್ಷೇತ್ರ ಬಡವರ ಪಾಲಿನ ಸಂಜೀವಿನಿ:

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶಾಸಕ ಜಿ.ಟಿ.ದೇವೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 12:27 IST
Last Updated 24 ಅಕ್ಟೋಬರ್ 2020, 12:27 IST
ಜನಗಣ ಮುದ್ರಣ ಮತ್ತು ಪ್ರಕಾಶನ ವತಿಯಿಂದ ಪ್ರಕಟಿಸಿರುವ ‘ಮಂಡ್ಯ ಜಿಲ್ಲಾ ಸಹಕಾರಿಗಳು, ಅಧಿಕಾರ ವಿಕೇಂದ್ರೀಕರಣ’ ಪುಸ್ತಕಗಳನ್ನು ಶಾಸಕ ಜಿ.ಟಿ.ದೇವೇಗೌಡ ಬಿಡುಗಡೆ ಮಾಡಿದರು
ಜನಗಣ ಮುದ್ರಣ ಮತ್ತು ಪ್ರಕಾಶನ ವತಿಯಿಂದ ಪ್ರಕಟಿಸಿರುವ ‘ಮಂಡ್ಯ ಜಿಲ್ಲಾ ಸಹಕಾರಿಗಳು, ಅಧಿಕಾರ ವಿಕೇಂದ್ರೀಕರಣ’ ಪುಸ್ತಕಗಳನ್ನು ಶಾಸಕ ಜಿ.ಟಿ.ದೇವೇಗೌಡ ಬಿಡುಗಡೆ ಮಾಡಿದರು   

ಮಂಡ್ಯ: ‘ಸಹಕಾರ ಕ್ಷೇತ್ರ ರೈತರು, ಬಡವರ ಪಾಲಿನ ಸಂಜೀವಿನಿಯಾಗಿದೆ, ಇದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು’ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ಜನಗಣ ಮುದ್ರಣ ಮತ್ತು ಪ್ರಕಾಶನ ವತಿಯಿಂದ ನಗರದ ರೈತ ಸಭಾಂಗಣದಲ್ಲಿ ಶನಿವಾರ ನಡೆದ ‘ಮಂಡ್ಯ ಜಿಲ್ಲಾ ಸಹಕಾರಿಗಳು’, ‘ಅಧಿಕಾರ ವಿಕೇಂದ್ರೀಕರಣ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದ ಭಾಗದಲ್ಲಿ ಸಹಕಾರ ಕ್ಷೇತ್ರವನ್ನು ಬಳಸಿಕೊಳ್ಳುವಷ್ಟು ನಮ್ಮ ಭಾಗದಲ್ಲಿ ಬಳಸಿಕೊಳ್ಳುವುದಿಲ್ಲ. ಜನರ ಕ್ಷೇತ್ರದ ಅನುಕೂಲ ಪಡೆದುಕೊಳ್ಳುತ್ತಿಲ್ಲ. ನಾವು ಕೇವಲ ಸಾಲ ಮಾಡುವುದನ್ನು ತೋರಿಸಿದ್ದೇವೆ. ಆದರೆ ಕ್ಷೇತ್ರವನ್ನು ಉಳಿಸುವುದನ್ನು ಕಲಿಸಿಕೊಟ್ಟಿಲ್ಲ. ಹಿರಿಯ ಸಹಕಾರಿ ಜೀವಗಳು ಇದನ್ನು ಹೇಳಿಕೊಡುವ ಕೆಲಸ ಮಾಡಬೇಕು’ ಎಂದರು.

ADVERTISEMENT

‘ಸಹಕಾರ ಕ್ಷೇತ್ರದಲ್ಲಿ ತೆಗೆದುಕೊಳ್ಳುವ ಸಾಲವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಬೇಕು, ಮರು ಪಾವತಿ ಮಾಡಬೇಕು. ಆದರೆ ಸಾಲ ತೆಗೆದುಕೊಂಡು ಮದುವೆ ಮಾಡುವುದು ಸೇರಿದಂತೆ ಇತರೆ ಕೆಲಸಗಳಿಗೆ ಉಪಯೋಗಿಸಿದರೆ ಆದಾಯ ಬರುವುದಿಲ್ಲ. ಸಾಲ ಮನ್ನಾಕ್ಕಾಗಿ ರೈತ ಸಾಯುತ್ತಿದ್ದಾನೆ. ಆದರೆ ರೈತರ ಪುನಶ್ಚೇತನಕ್ಕೆ ಬೇಕಾದ ಸಾಲವನ್ನು ಕೊಡುತ್ತಿಲ್ಲ. ಕೈಗಾರಿಕೆಗಳಿಗೆ ಸಾವಿರಾರು ಕೋಟಿ ಸಾಲ ಕೊಡುತ್ತಾರೆ. ಸರ್ಕಾರ ಮನ್ನಾ ಮಾಡಲಾಗುತ್ತದೆ. ಆದರೆ ರೈತರು ಬೆಲೆಯುವ ಬೆಳೆಗಳಿಗೆ ಸಾಲ ನೀಡಲು ಸರ್ಕಾರದಿಂದ ಆಗುತ್ತಿಲ್ಲ’ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಾಮಾಣಿಕವಾಗಿ, ನಿಸ್ವಾರ್ಥದಿಂದ ಸೇವೆ ಮಾಡುವವರು ಸಹಕಾರಿ ಕ್ಷೇತ್ರಕ್ಕೆ ಹೋಗಬೇಕು. ಅದನ್ನು ಬೆಳೆಸುವ ಉದ್ದೇಶ ಇಟ್ಟುಕೊಂಡು ಬರಬೇಕು. ಸಹಕಾರ ಕ್ಷೇತ್ರದಲ್ಲಿ ಯಾವುದೇ ಒಂದು ಹುದ್ದೆ ಸಿಗುವುದು ಸಾಮಾನ್ಯ ವಿಷಯವಲ್ಲ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಸ್ವಾತಂತ್ರ್ಯವಾಗಿ, ಸ್ವಾಯತ್ತತೆಯಿಂದ ಕ್ಷೇತ್ರ ಉಳಿಸಲು ಶ್ರಮಿಸಬೇಕು’ ಎಂದರು.

‘ಸಹಕಾರ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದವರು ನಾಯಕರಾಗಿ ರೂಪುಗೊಂಡಿದ್ದಾರೆ. ಇದನ್ನು ನಂಬಿ ಪ್ರಾಮಾಣಿಕವಾಗಿ ದುಡಿಯುವವರಿಗೆ ಅದು ಎಂದೂ ಕೈ ಬಿಡುವುದಿಲ್ಲ. ಅಧಿಕಾರ ವಿಕೇಂದ್ರಿಕರಣದಿಂದ ಸಾಕಷ್ಟು ನಾಯಕರು ರೂಪುಗೊಂಡಿದ್ದಾರೆ. ಎಲ್ಲದಕ್ಕೂ ಸ್ಥಳೀಯ ಸಂಸ್ಥೆಗಳ ಅಧಿಕಾರವೇ ಕಾರಣವಾಗಿದೆ’ ಎಂದರು.

ಸಹಕಾರಿ ಮುಖಂಡ, ಪ್ರಕಾಶಕ ಕೌಡ್ಲೆ ಚೆನ್ನಪ್ಪ ಮಾತನಾಡಿ ‘ಸಹಕಾರ ಸಂಘದಲ್ಲಿ ಸಭೆಗಳು ಆರಂಭವಾದಾಗ ಅಲ್ಲಿ ರೈತ ಗೀತೆಯನ್ನು ಕಡ್ಡಾಯವಾಗಿ ಹಾಡುವಂತೆ ಸುತ್ತೋಲೆ ಹೊರಡಿಸಲು ಸಹಕಾರ ಸಚಿವರೊಂದಿಗೆ ಮಾತನಾಡಬೇಕು’ ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ಪಂಚಾಯತ್‌ ಪರಿಷತ್‌ ಕಾರ್ಯಾಧ್ಯಕ್ಷ ಸಿ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪಂಚಾಯತ್‌ರಾಜ್‌ ಕೋಶದ ಹೆಚ್ಚುವರಿ ನಿರ್ದೇಶಕ ಕೆ.ಯಾಲಕ್ಕಿಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರುಗಳ ಒಕ್ಕೂಟದ ಅಧ್ಯಕ್ಷ ನಾಗಣ್ಣ ಬಾಣಸವಾಡಿ, ಭೂ ಅಭಿವೃದ್ಧಿ ಬ್ಯಾಂಕ್‌ ನಿರ್ದೇಶಕ ನ.ಲಿ.ಕೃಷ್ಣ, ಗ್ರಾಪಂ ಮಾಜಿ ಅಧ್ಯಕ್ಷೆ ನೀಲಾ ಶಿವಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.