
ಮದ್ದೂರು ತಾಲ್ಲೂಕಿನ ದೇವೇಗೌಡನ ದೊಡ್ಡಿ ಗ್ರಾಮದ ಜೆಡಿಎಸ್ ಪಕ್ಷದ ಕಾರ್ಯಕರ್ತ ಮಹದೇವ್ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ, ಸೋಮವಾರ ಅವರ ನಿವಾಸಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು
ಮಂಡ್ಯ: ‘ರಾಜ್ಯದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು. ಕಳೆದ ಎರಡೂವರೆ ವರ್ಷಗಳಲ್ಲಿ ₹5 ಲಕ್ಷ ಕೋಟಿಗೂ ಹೆಚ್ಚು ಸಾಲ ಮಾಡಿದೆ’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರು ತಾಲ್ಲೂಕಿನ ದೇವೇಗೌಡನ ದೊಡ್ಡಿ ಗ್ರಾಮದ ಜೆಡಿಎಸ್ ಪಕ್ಷದ ಕಾರ್ಯಕರ್ತ ಮಹದೇವ್ ಅವರು ಇತ್ತೀಚೆಗೆ ನಿಧನರಾದ ಹಿನ್ನೆಲೆಯಲ್ಲಿ, ಸೋಮವಾರ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಸಂದರ್ಭ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
‘ಮಾತೆತ್ತಿದರೆ ಗ್ಯಾರಂಟಿ ಯೋಜನೆ ಅಂತಾರೆ. ಅವು ಕೂಡ ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಯುವನಿಧಿ, ಗೃಹಲಕ್ಷ್ಮಿ ಯೋಜನೆಯ ಹಣ ಕೊಟ್ಟಿದ್ದಾರಾ? ಚುನಾವಣೆ ಸಂದರ್ಭದಲ್ಲಿ ಮಾತ್ರ ದುಡ್ಡು ಬಿಡುಗಡೆ ಮಾಡ್ತಾರೆ. ಈ ಸರ್ಕಾರದಲ್ಲಿ ಬಡವರು ಬದುಕಲು ಆಗ್ತಿಲ್ಲ’ ಎಂದು ಟೀಕಿಸಿದರು.
‘ನಮ್ಮ ಪಕ್ಷದ ಬಗ್ಗೆ ಕಲಾಪದಲ್ಲಿ ಕೀಳಾಗಿ ಮಾತನಾಡಿದ್ರು. ಜೆಡಿಎಸ್ 18 ಸೀಟ್ ಗಳಿಸಿದೆ. ಮುಂದೆ ಸಿಂಗಲ್ ಡಿಜಿಟ್‌ಗೆ ಬರುತ್ತೆ, ಅದಕ್ಕೆ ಅಸ್ತಿತ್ವವೇ ಇಲ್ಲ ಅಂತ ಲೇವಡಿ ಮಾಡಿದ್ರು. ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಯ್ತು? ಕಾಂಗ್ರೆಸ್ ಎಷ್ಟು ಸ್ಥಾನ ಗಳಿಸಿದೆ? ಎಂದು ತಿರುಗೇಟು ನೀಡಿದರು.
‘ಮದ್ದೂರು ತಾಲ್ಲೂಕಿನಲ್ಲಿ ಪೊಲೀಸ್ ಠಾಣೆ ಇವರಪ್ಪನ ಮನೆನಾ? ಇಲ್ಲಿರುವ ಶಾಸಕರ ನಡವಳಿಕೆ ಸರಿಯಿಲ್ಲ’ ಎಂದು ಶಾಸಕ ಕೆ.ಎಂ.ಉದಯ ವಿರುದ್ಧ ಆರೋಪ ಮಾಡಿದರು. ಡಿ.ಕೆ. ಶಿವಕುಮಾರ್ ಅವರು ಮಂಡ್ಯ ಜಿಲ್ಲೆಯ ಜನರನ್ನು ‘ಛತ್ರಿಗಳು’ ಎಂದು ಟೀಕಿಸಿದ್ದರು. ಆದರೆ, ಜಿಲ್ಲೆಯ ಶಾಸಕರು ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದಾರೆ’ ಎಂದು ನಿಖಿಲ್ ಕುಟುಕಿದರು.
‘ಬಂಡವಾಳ ಇರೋದಕ್ಕೆ ಎಚ್‌ಡಿಕೆಗೆ ಗೆಲುವು’
‘ಬಂಡವಾಳ ಇದ್ದಿದ್ದಕ್ಕೆ ಎಚ್.ಡಿ. ಕುಮಾರಸ್ವಾಮಿಯವರಿಗೆ ‘ರೆಡ್ ಕಾರ್ಪೆಟ್’ ಹಾಕಿ ಎನ್.ಡಿ.ಎ.ಗೆ ಸೇರಿಸಿಕೊಂಡಿದ್ದಾರೆ. ‘ಕುಮಾರಸ್ವಾಮಿ ಅವರಪ್ಪನಾಣೆ ಗೆಲ್ಲಲ್ಲ’ ಅಂತ ಕಾಂಗ್ರೆಸ್ ನಾಯಕರು ಭಾಷಣ ಬಿಗಿದ್ರು. ಆದರೆ, ಮಂಡ್ಯ ಜನರ ಆಶೀರ್ವಾದದಿಂದ ದಾಖಲೆ ಗೆಲುವು ಸಿಕ್ತು. ಬಂಡವಾಳ ಇರೋದಕ್ಕೆ ಕುಮಾರಣ್ಣನ ಗೆಲ್ಲಿಸಿರೋದು. ಚುನಾವಣೆಯಲ್ಲಿ ಗೆದ್ದಾಗ ತಲೆ ಎತ್ತಿ ಮೆರೆಯಲ್ಲ, ಸೋತಾಗ ಕೈ ಕಟ್ಟಿ ಮನೆಯಲ್ಲಿ ಕೂರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
‘ಕುಮಾರಣ್ಣ ಸಿಎಂ ಆಗುವ ಬಗ್ಗೆ ಚಲುವರಾಯಸ್ವಾಮಿ ಅವರಿಗೆ ಯಾಕೆ ಆತಂಕ ಶುರುವಾಗಿದೆ. ಇನ್ನೂ ಚುನಾವಣೆ ಎರಡೂವರೆ ವರ್ಷ ಇದೆ. ಯಾರ ನಾಯಕತ್ವದಲ್ಲಿ ಚುನಾವಣೆ ನಡೆಯಬೇಕು ಅಂತ ಎನ್‌ಡಿಎ ತೀರ್ಮಾನ ಮಾಡುತ್ತೆ. ಕುಮಾರಣ್ಣ ಅರ್ಜಿ ಹಾಕಿಕೊಂಡು ಹೋಗಿಲ್ಲ, ಸ್ವಾಭಿಮಾನದಿಂದ ಬದುಕಿದ್ದಾರೆ. ಎರಡೂ ಪಕ್ಷದ ನಾಯಕರು ಅದರ ಬಗ್ಗೆ ತೀರ್ಮಾನ ಮಾಡ್ತಾರೆ’ ಎಂದು ನಿಖಿಲ್ ಅವರು ಚಲುವರಾಯಸ್ವಾಮಿಗೆ ತಿರುಗೇಟು ನೀಡಿದರು.
ಕುಟುಂಬಸ್ಥರಿಗೆ ಸಾಂತ್ವನ, ನೆರವು
ಮದ್ದೂರು ತಾಲ್ಲೂಕಿನ ದೇವೇಗೌಡನ ದೊಡ್ಡಿ ಗ್ರಾಮದ ನಿವಾಸಿ ಮಹದೇವು ಅವರ ನಿವಾಸಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಸೋಮವಾರ ಭೇಟಿ ನೀಡಿ ಮೃತ ಮಹದೇವು ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆರ್ಥಿಕ ನೆರವು ನೀಡಿದರು.
‘ಈ ಘಟನೆಯಿಂದ ನನಗೆ ಹಾಗೂ ಕುಮಾರಣ್ಣ ಅವರಿಗೆ ತುಂಬ ಮನಸ್ಸಿಗೆ ನೋವಾಗಿದೆ. ಕುಮಾರಣ್ಣ ಸಿಎಂ ಆಗುವವರೆಗೂ ಚಪ್ಪಲಿ ಧರಿಸಲ್ಲ ಅಂತ ಮಹದೇವು ಶಪಥ ಮಾಡಿದ್ದರು. ಆದರೆ, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಹೋದ ಜೀವ ವಾಪಸ್ ತರಲು ಸಾಧ್ಯವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಹನುಮಂತೇಗೌಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.