ಮಂಡ್ಯ: ‘ಲೋಕಸಭಾ ಚುನಾವಣೆಯಲ್ಲಿ ಮತ ಕಳ್ಳತನ ನಡೆದಿರುವ ಸಂಬಂಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆಗಸ್ಟ್ 5ರಂದು ಬೆಳಿಗ್ಗೆ 11 ಗಂಟೆಗೆ ಕಾಂಗ್ರೆಸ್ ವತಿಯಿಂದ ರಾಷ್ಟ್ರಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಮತ ಕಳ್ಳತನವಾಗಿರುವ ಸಂಬಂಧ ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿ, ಉದಯ್‌ಪುರ್ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಸಂಶೋಧನೆ ನಡೆಸಿ, ಸಾಬೀತಾದ ಕಾರಣದಿಂದ ಪ್ರತಿಭಟನೆಯ ಮೂಲಕ ರಾಷ್ಟ್ರವ್ಯಾಪಿ ಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ. ಬೆಂಗಳೂರಿನ ಮಹದೇವಪುರ, ರಾಜಾಜಿನಗರ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮತ ಕಳ್ಳತನವಾಗಿರುವ ಬಗ್ಗೆ ಅನುಮಾನವಿದೆ ಎಂದರು.
ರಣದೀಪ್ ಸಿಂಗ್ ಸುರ್ಜೇವಾಲ, ವೇಣುಗೋಪಾಲ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಜಿಲ್ಲೆಯ 7 ತಾಲ್ಲೂಕುಗಳ ಎಲ್ಲ ನಾಯಕರು, ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿ 5 ಸಾವಿರ ಮಂದಿ ಪಾಲ್ಗೊಳ್ಳಲಿದ್ದೇವೆ ಎಂದು ಮಾಹಿತಿ ನೀಡಿದರು.
ಕೇಂದ್ರ ಸರ್ಕಾರ ಇಡಿ, ಐಟಿ ದುರುಪಯೋಗ ಮಾಡಿಕೊಂಡಂತೆ ಚುನಾವಣಾ ಆಯೋಗವನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಜೆಡಿಎಸ್ ಮಾಜಿ ಶಾಸಕ ಕೆ.ಅನ್ನದಾನಿ ಅವರು ಆರೋಪ ಮಾಡಿದ್ದಾರೆ. ಅವರ ಪಕ್ಷದಿಂದ ಅಥವಾ ಖಾಸಗಿ ಏಜೆನ್ಸಿಯಿಂದ ತನಿಖೆ ಮಾಡಿಸಲಿ’ ಎಂದರು.
981 ರೈತರ ಆತ್ಮಹತ್ಯೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಪಂಚ ಗ್ಯಾರಂಟಿಗಳ ಉದ್ದೇಶವೇ ಜನರಿಗೆ ಆರ್ಥಿಕ ಶಕ್ತಿ ತುಂಬುವುದು. ಹಾವೇರಿಯಲ್ಲಿ ಜಾಸ್ತಿಯಾಗಿದೆ. ತನಿಖೆ ನಡೆಸಲು ಪೊಲೀಸ್ ಇಲಾಖೆಗೆ ಸಿಎಂ ಸೂಚಿಸಿದ್ದರು. ಖಾಸಗಿ ಏಜೆನ್ಸಿಯಿಂದ ತನಿಖೆ ನಡೆಸಿ, ಕಾರಣ ಪತ್ತೆ ಹಚ್ಚಲಾಗುವುದು. ನಮ್ಮ ಸರ್ಕಾರದ ಅವಧಿಯಲ್ಲಿ ರೈತರ ಆತ್ಮಹತ್ಯೆ ಇಳಿಕೆಯಾಗಿದೆ. ಸಂಪೂರ್ಣ ನಿಲ್ಲಬೇಕು’ ಎಂಬುದು ನಮ್ಮ ಉದ್ದೇಶ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.