ADVERTISEMENT

ಕಸಾಪ ಅಭ್ಯರ್ಥಿ: ಸಮಾಲೋಚನಾ ಸಭೆ 14ಕ್ಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 11:31 IST
Last Updated 11 ಫೆಬ್ರುವರಿ 2021, 11:31 IST

ಮಂಡ್ಯ: ‘ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಒಮ್ಮತದ, ಸಹಮತ ಅಭ್ಯರ್ಥಿಯನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಆಯ್ಕೆ ಮಾಡುವ ಸಂಬಂಧ ಫೆ. 14 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಸಾಹಿತ್ಯಾಸಕ್ತರ ಸಮಾಲೋಚನಾ ಸಭೆ ಕರೆಯಲಾಗಿದೆ’ ಎಂದು ಕರ್ನಾಟಕ ಸಂಘದ ಅಧ್ಯಕ್ಷ, ಸಾಹಿತಿ ಪ್ರೊ.ಜಯಪ್ರಕಾಶ್‌ಗೌಡ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಸಾಪ ಅಧ್ಯಕ್ಷ ಸ್ಥಾನಕ್ಕೆ ಒಬ್ಬ ವ್ಯಕ್ತಿ ಎರಡನೇ ಬಾರಿ ಆಯ್ಕೆ ಬಯಸದಂತೆ ಅಲಿಖಿತ ನಿಯಮವೊಂದು ಪರಿಷತ್‌ನಲ್ಲಿ ಇದ್ದು, ಇದನ್ನು ಮೀರಿ ಸ್ಪರ್ಧಿಸಿದ ಅಭ್ಯರ್ಥಿಯ ವಿರುದ್ಧ ಒಮ್ಮತದ ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು. ಈ ಬಗ್ಗೆ ಚರ್ಚಿಸಲು ಕಸಾಪ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

‘ಸಮೇತನಹಳ್ಳಿ ರಾಮರಾಯರಿಂದ ಪ್ರಸ್ತುತ ಅಧ್ಯಕ್ಷ ಸಿ.ಕೆ.ರವಿಕುಮಾರ್‌ವರೆಗೆ ಘಟನಾನುಘಟಿ ಸಾಹಿತಿಗಳು ಅಧ್ಯಕ್ಷರಾಗಿ ಕನ್ನಡದ ತೇರನ್ನು ಮುನ್ನಡೆಸಿದ್ದಾರೆ. ಎಲ್ಲ ಸಾಹಿತಿಗಳಿಗೂ ಅವಕಾಶ ಒದಗಿಸುವ ನಿಟ್ಟಿನಲ್ಲಿ ಒಮ್ಮೆ ಮಾತ್ರ ಅಧ್ಯಕ್ಷರಾಗಲು ಅವಕಾಶ ನೀಡುವಂತೆ ಅಲಿಖಿತ ನಿಯಮ ರೂಪಿಸಲಾಗಿದೆ’ ಎಂದರು.

ADVERTISEMENT

‘ಅಧಿಕಾರದ ಆಸೆ, ತಿದ್ದುಪಡಿಗೊಂಡ ಬೈಲಾದಿಂದಾಗಿ ಸಿ.ಕೆ.ರವಿಕುಮಾರ್ ಅವರಿಗೆ ಎರಡು ಅವಧಿಯ ಅಧಿಕಾರ ಸಿಕ್ಕಂತಾಗಿದೆ. ಆದರೂ ಅವರು ಅಧಿಕಾರ ಆಸೆಗೆ ಮತ್ತೊಂದು ಬಾರಿ ಸ್ಪರ್ಧೆಗೆ ಮುಂದಾಗಿದ್ದಾರೆ. ಇದಕ್ಕೆ ಎಲ್ಲ ಹಿರಿಯ ಸಾಹಿತಿಗಳು ಮತ್ತು ಮಾಜಿ ಅಧ್ಯಕ್ಷರ ವಿರೋಧವಿದೆ’ ಎಂದು ಆರೋಪಿಸಿದರು.

‘ಈ ಹಿಂದೆ ಎರಡನೇ ಅವಧಿಗೆ ಅಧಿಕಾರ ಬಯಸಿ ಸ್ಪರ್ಧಿಸಿದ ತೈಲೂರು ವೆಂಕಟಕೃಷ್ಣ, ಪ್ರೊ.ಎಚ್.ಎಸ್.ಮುದ್ದೇಗೌಡ ಅವರ ವಿರುದ್ಧ ಕ್ರಮವಾಗಿ ಡಿ.ಪಿ.ಸ್ವಾಮಿ ಮತ್ತು ಮೀರಾಶಿವಲಿಂಗಯ್ಯ ಅವರನ್ನು ಒಮ್ಮತದ ಪರ್ಯಾಯ ಅಭ್ಯರ್ಥಿಯಾಕಿ ಕಣಕ್ಕಿಳಿಸಿ ಗೆಲ್ಲಿಸಿದ ಉದಾಹರಣೆಗಳಿವೆ. ಈ ನಿಟ್ಟಿನಲ್ಲಿ ರವಿಕುಮಾರ್ 2ನೇ ಅವಧಿಗೆ ಸ್ಪರ್ಧಿಸಿದರೆ ಒಮ್ಮತದ, ಸಹಮತದ ಅಭ್ಯರ್ಥಿಯನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಆಯ್ಕೆ ಮಾಡಿ ಚುನಾವಣಾ ಕಣಕ್ಕೆ ಇಳಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಜನಪ್ರತಿನಿಧಿಗಳು ಹೆಚ್ಚಾಗಿ ಮುಗಿಬೀಳುತ್ತಿದ್ದಾರೆ. ಸಾಹಿತ್ಯಾಸಕ್ತರ ಸಮ್ಮೇಳನ ನಡೆಯಬೇಕಿದ್ದ ಸ್ಥಳದಲ್ಲಿ ರಾಜಕಾರಣಿಗಳ ಅದ್ದೂರಿ ಪ್ರಚಾರ ಮತ್ತು ಶಕ್ತಿ ಪ್ರದರ್ಶನದ ವೇದಿಕೆಗಳಾಗುತ್ತಿದೆ. ಮುಂದೆ ಇದು ತಪ್ಪಬೇಕು, ರಾಜಕಾರಣದಿಂದ ದೂರಾಗಿ ಸಾಹಿತ್ಯದ ತೇರು ಎಳೆಯುವ ಸಾಹಿತಿಗಳು ಕಸಾಪದ ಚುಕ್ಕಾಣಿ ಹಿಡಯಬೇಕು’ಎಂದರು.

ಮಾಜಿ ಅಧ್ಯಕ್ಷರಾದ ಎಂ.ವಿ.ಧರಣೇಂದ್ರಯ್ಯ, ಪ್ರೊ.ಹೆಚ್.ಎಸ್.ಮುದ್ದೇಗೌಡ, ಸದಸ್ಯರಾದ ಚಿಕ್ಕಹಾರೋಹಳ್ಳಿ ಪುಟ್ಟಸ್ವಾಮಿ, ಲೋಕೇಶ್ ಚಂದಗಾಲು, ಕನ್ನಡಸೇನೆ ಮಂಜುನಾಥ್ ಇದ್ದರು.

******

ಚುನಾವಣೆ: ಸಮ್ಮೇಳನ ರದ್ದಾಗಲಿ
ಸಾಹಿತಿ ಕೃಷ್ಣ ಸ್ವರ್ಣಸಂದ್ರ ಮಾತನಾಡಿ ‘ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಗಳು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಾಹಿತ್ಯ ಸಮ್ಮೇಳನಗಳು ಚುನಾವಣಾ ಪ್ರಚಾರ ಪಡೆಯುವ ವೇದಿಕೆಗಳಾಗುತ್ತಿವೆ. ಚುನಾವಣೆ ವೇಳಾಪಟ್ಟಿ ಪ್ರಕಟವಾಗಿರುವ ಕಾರಣ ಕೂಡಲೇ ಜಿಲ್ಲೆಯಲ್ಲಿ ನಿಗದಿಯಾಗಿರುವ ಸಮ್ಮೇಳನಗಳನ್ನು ರದ್ದು ಪಡಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.