ADVERTISEMENT

ನಾಗಮಂಗಲ | 15ನೇ ಹಣಕಾಸು ಯೋಜನೆಯ ಅನುದಾನ ದುರ್ಬಳಕೆ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 3:12 IST
Last Updated 22 ಆಗಸ್ಟ್ 2025, 3:12 IST
ನಾಗಮಂಗಲ ತಾಲ್ಲೂಕಿನ ಗೊಂಡೇನಹಳ್ಳಿ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಅನುದಾನದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪಂಚಾಯಿತಿ ಆವರಣದಲ್ಲಿ ಗ್ರಾ. ಪಂ ಸದಸ್ಯರು ಪ್ರತಿಭಟನೆ ನಡೆಸಿದರು
ನಾಗಮಂಗಲ ತಾಲ್ಲೂಕಿನ ಗೊಂಡೇನಹಳ್ಳಿ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಅನುದಾನದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪಂಚಾಯಿತಿ ಆವರಣದಲ್ಲಿ ಗ್ರಾ. ಪಂ ಸದಸ್ಯರು ಪ್ರತಿಭಟನೆ ನಡೆಸಿದರು   

ನಾಗಮಂಗಲ: ತಾಲ್ಲೂಕಿನ ಗೊಂಡೇನಹಳ್ಳಿ ಗ್ರಾ.ಪಂ.ನಲ್ಲಿ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯ ₹56 ಲಕ್ಷ ಅನುದಾನದಲ್ಲಿ ಲಕ್ಷಾಂತರ ರೂಪಾಯಿ ಹಣವನ್ನು ಪಿಡಿಒ ಮತ್ತು ಅಧ್ಯಕ್ಷರು ಜೊತೆಗೂಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ ಸದಸ್ಯರು ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡಿ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಗೊಂಡೇನಹಳ್ಳಿ ಗ್ರಾ.ಪಂ ಕಚೇರಿ ಆವರಣದಲ್ಲಿ ಅನುದಾನದ ಹಣದಲ್ಲಿ ನಡೆದಿರುವ ಅಕ್ರಮಗಳ ಕುರಿತಾದ ದಾಖಲೆಗಳನ್ನು ಬಿಡುಗಡೆ ಮಾಡಿದ ಗ್ರಾ.ಪಂ ಸದಸ್ಯರು, ಅಧ್ಯಕ್ಷ ಮತ್ತು ಪಿಡಿಒ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ನಂತರ ಮಾತನಾಡಿದ ಗ್ರಾ.ಪಂ ಸದಸ್ಯ ಮಧು, ಕಳೆದ ಏ.24ರಿಂದ ಮೇ.1 ರವರೆಗೆ ಕೇವಲ 15 ದಿನಗಳ ಅಂತರದಲ್ಲಿ ₹15,71,528 ಅನ್ನು ಸೆಸ್ಕ್ ಬಿಲ್ ಪಾವತಿಗಾಗಿ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿದ್ದಾರೆ. ಆದರೆ ಇಷ್ಟು ದೊಡ್ಡ ಮೊತ್ತದ ಸೆಸ್ಕ್ ಬಿಲ್ ನಮ್ಮ ಪಂಚಾಯಿತಿಗೆ ಬಂದಿಲ್ಲ. ಸೆಸ್ಕ್ ಕಚೇರಿಯಲ್ಲಿ ವಿಚಾರಿಸಲಾಗಿದ್ದು ₹2.48 ಲಕ್ಷ ರೂಗಳನ್ನು ಮಾತ್ರ ಪಾವತಿಸಿರುವುದು ಗೊತ್ತಾಗಿದೆ. ಉಳಿದ ಸುಮಾರು ₹13 ಲಕ್ಷ ಹಣವನ್ನು ಪಿಡಿಒ ಮತ್ತು ಅಧ್ಯಕ್ಷ ವೈಯಕ್ತಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ. ವಿಚಾರವಾಗಿ ತಾ.ಪಂ. ಇಒ ಮತ್ತು ಜಿ.ಪಂ. ಸಿಇಒ ಅವರಿಗೆ ದೂರು ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದರು.

ADVERTISEMENT

ಈ ವಿಷಯವಾಗಿ ಸಾಮಾನ್ಯ ಸಭೆಗಳಲ್ಲಿ ಪ್ರಶ್ನಿಸಿದರೆ ಅಧ್ಯಕ್ಷ ಬೇಜಾಬ್ದಾರಿ ಉತ್ತರ ನೀಡಿ ಮಾಹಿತಿ ನೀಡದೆ ನೆಪ ಹೇಳುತ್ತಾ ಸಭೆಯನ್ನು ಮುಗಿಸುತ್ತಾರೆ. ಗ್ರಾ.ಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೂ ಈ ಅನುದಾನದ ಹಣ ಬಳಕೆಯಾಗಿಲ್ಲ. ಆ ನಿಟ್ಟಿನಲ್ಲಿ ಸರ್ಕಾರದ ಲಕ್ಷಾಂತರ ರೂಪಾಯಿ ದುರುಪಯೋಗ ಮಾಡುವ ಮೂಲಕ ಜನರಿಗೆ ಮತ್ತು ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಆದ್ದರಿಂದ ಈ ವಿಚಾರದ ಕುರಿತು ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಜಿ.ಪಂ. ಕಚೇರಿ ಎದುರು ಸದಸ್ಯರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾ.ಪಂ.ಸದಸ್ಯರಾದ ಯೋಗೇಶ್, ನರಸಿಂಹಚಾರಿ, ರಂಗಣ್ಣ ಸೇರಿದಂತೆ ಸಾರ್ವಜನಿಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.