ADVERTISEMENT

‘ಕೋವಿಡ್‌: ರಾಜ್ಯ ಸರ್ಕಾರದಿಂದಲೂ ನೆರವು’

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 4:33 IST
Last Updated 26 ಏಪ್ರಿಲ್ 2021, 4:33 IST
ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಭಾನುವಾರ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು
ಶ್ರೀರಂಗಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಭಾನುವಾರ ಭೇಟಿ ನೀಡಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು   

ಶ್ರೀರಂಗಪಟ್ಟಣ: ಕೋವಿಡ್‌ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವವರಿಗೆ ಕೇಂದ್ರ ಸರ್ಕಾರ ನೆರವು ಘೋಷಿಸಿರುವ ಮಾದರಿಯಲ್ಲಿ ರಾಜ್ಯ ಸರ್ಕಾರವೂ ನೆರವು ನೀಡಲಿದೆ. ಈ ಬಗ್ಗೆ ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಧಿಕೃತ ಘೋಷಣೆ ಹೊರ ಬೀಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಸಮೀಪದ ಕೋವಿಡ್‌ ಕೇರ್‌ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ, ಪರಿಸ್ಥಿತಿಯ ಬಗ್ಗೆ ಚರ್ಚಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಕೊರೊನಾ ಸೋಂಕಿನ ಸರಪಳಿ ತುಂಡರಿಸಲು ವಾರಾಂತ್ಯದ ಕರ್ಫ್ಯೂ ಮಾಡಿದ್ದು, ಅದನ್ನು ವಿಸ್ತರಿಸುವ ಕುರಿತು ಸರ್ಕಾರ ಸೋಮವಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದರು.

ADVERTISEMENT

ಕೋವಿಡ್‌ ಕೇಂದ್ರಗಳಲ್ಲಿ ರೋಗಿಗಳಿಗೆ ಶುದ್ಧ ಆಹಾರ, ನೀರು ಪೂರೈಸಬೇಕು. ಟಿವಿ ಅಳವಡಿಸಬೇಕು. ಗಂಟಲು ದ್ರವ ಪರೀಕ್ಷೆ, ಲಸಿಕೆ ಕಾರ್ಯ ಪಂಚಾಯಿತಿ ಮಟ್ಟದಲ್ಲಿ ನಡೆಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ನೆರವನ್ನೂ ಜಿಲ್ಲಾಡಳಿತ ನೆರವಾಗಲಿದೆ ಎಂದರು.‌

‘ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ’ ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಪಿ.ಮಾರುತಿ ಸಚಿವರ ಗಮನ ಸೆಳೆ ದರು. ಪ್ರತಿಕ್ರಿಯಿಸಿದ ಸಚಿವರು, ‘ಅಗತ್ಯ ಇರುವ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಿ. ಈ ಬಗ್ಗೆ ಆಸ್ಪತ್ರೆಗಳ ಮುಖ್ಯಸ್ಥರು ಉಪ ವಿಭಾಗಾಧಿಕಾರಿ ಗಮನಕ್ಕೆ ತಂದು ಕ್ರಮ ಕೈಗೊಳ್ಳಬಹುದು’ ಎಂದರು.

ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸೌಮ್ಯಾ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌.ಅನಂತರಾಜು, ಬಿಜೆಪಿ ಮುಖಂಡರಾದ ಟಿ. ಶ್ರೀಧರ್‌, ಎಸ್‌.ದೇವರಾಜು, ಪುಟ್ಟರಾಮು, ಮಹದೇವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.